ಜಗತ್ತಿನಲ್ಲಿ ಗುರುವಿಗೆ ಶ್ರೇಷ್ಠ ಸ್ಥಾನಮಾನ

| Published : Oct 26 2024, 01:04 AM IST / Updated: Oct 26 2024, 01:05 AM IST

ಸಾರಾಂಶ

ಹರ ಮುನಿದರೆ ಗುರು ಕಾಯುವನು ಎಂಬ ಉಕ್ತಿಯಂತೆ ಗುರು ಸದಾ ಶಿಷ್ಯ ಕುಲಕೋಟಿಯ ಉದ್ಧಾರಕ್ಕಾಗಿ ನಿಷ್ಕಲ್ಮಶ ಮನಸ್ಸಿನಿಂದ ಹರಸುತ್ತಾನೆ

ಲಕ್ಷ್ಮೇಶ್ವರ: ಧರ್ಮೋ ರಕ್ಷತಿ ರಕ್ಷಿತಃ ಎನ್ನುವಂತೆ ಗುರುಗಳು, ಧರ್ಮ, ಸಂಸ್ಕೃತಿ ರಕ್ಷಣೆಗಾಗಿ ಶ್ರಮಿಸುತ್ತ ಬಂದಿದ್ದಾರೆ. ವ್ಯಕ್ತಿಯ ಬದುಕಿಗೆ ಸುಜ್ಞಾನ, ಸಂಸ್ಕಾರ, ಸದ್ವಿಚಾರ, ಮೌಲ್ಯಗಳನ್ನು ಬಿತ್ತಿ ಶ್ರೇಷ್ಠ ನಾಗರಿಕರನ್ನಾಗಿಸುವ ಗುರು ಸದಾ ಸರಣೀಯ ಎಂದು ಶಿರಹಟ್ಟಿ, ಬಾಲೆಹೊಸೂರ ಭಾವೈಕ್ಯತಾ ಸಂಸ್ಥಾನ ಮಠದ ಫಕೀರ ದಿಂಗಾಲೇಶ್ವರ ಸ್ವಾಮಿಗಳು ಹೇಳಿದರು.

ಶುಕ್ರವಾರ ಬಾಲೆಹೊಸೂರಿನ ಗುರು ದಿಂಗಾಲೇಶ್ವರ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆಯಲ್ಲಿ ೧೯೯೦ರಿಂದ ೯೯ರ ವರೆಗೆ ವ್ಯಾಸಾಂಗ ಮಾಡಿದ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಹರ ಮುನಿದರೆ ಗುರು ಕಾಯುವನು ಎಂಬ ಉಕ್ತಿಯಂತೆ ಗುರು ಸದಾ ಶಿಷ್ಯ ಕುಲಕೋಟಿಯ ಉದ್ಧಾರಕ್ಕಾಗಿ ನಿಷ್ಕಲ್ಮಶ ಮನಸ್ಸಿನಿಂದ ಹರಸುತ್ತಾನೆ. ಜಗತ್ತಿನಲ್ಲಿ ಗುರುವಿಗೆ ಶ್ರೇಷ್ಠ ಗೌರವ ಸ್ಥಾನಮಾನವಿದ್ದು, ಗುರು ಮುಖೇನ ಪಡೆಯುವ ವಿದ್ಯೆಗೆ ಹೆಚ್ಚಿನ ಮಹತ್ವವಿದೆ. ಕಗ್ಗಲ್ಲಿನಂತಿರುವ ಮನಸ್ಸನ್ನು ಸಾಕಾರ ಮೂರ್ತಿಯ ರೂಪವಾಗಿ ಮಾಡುವ ಸಾಮರ್ಥ್ಯ ಇರುವುದು ಗುರುವಿನಲ್ಲಿ ಮಾತ್ರ. ಆದ್ದರಿಂದ ಗುರು ಸದಾ ಪೂಜ್ಯನೀಯ, ಸ್ಮರಣೀಯ. ಗುರುವಿನ ಆಶೀರ್ವಾದವೇ ಶಿಷ್ಯರಿಗೆ ಶ್ರೀರಕ್ಷೆಯಾಗಿದೆ. ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದರೂ ನೈತಿಕ ಮೌಲ್ಯಗಳು, ಸಂಸ್ಕೃತಿ ರೂಢಿಸುವ ಶಿಕ್ಷಣ ಇಂದಿನ ಅವಶ್ಯಕತೆಯಾಗಿದೆ. ಗುರುಗಳು ತೋರಿದ ಸನ್ಮಾರ್ಗದಲ್ಲಿ ನಡೆದು ಸಮಾಜದಲ್ಲಿ ಶ್ರೇಷ್ಠರೆನಿಸಿಕೊಳ್ಳವುದೇ ಗುರು ದಕ್ಷಿಣೆಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಇಒ ಎಚ್.ಎನ್. ನಾಯಕ ಮತ್ತು ವಿ.ವಿ. ಸಾಲಿಮಠ ಮಾತನಾಡಿ, ಗುರು ಶಿಷ್ಯ ಪರಂಪರೆಗೆ ತನ್ನದೇ ಆದ ಇತಿಹಾಸವಿದ್ದು, ಈ ಪರಂಪರೆಯಲ್ಲಿ ಮಠಮಾನ್ಯಗಳ ಸೇವೆ ಅಗ್ರಪಂಕ್ತಿಯಲ್ಲಿದೆ. ಪ್ರತಿ ವ್ಯಕ್ತಿಯ ಸಾಧನೆಯ ಹಿಂದೆ ಗುರುವಿನ ಶ್ರೀರಕ್ಷೆ ಇರುತ್ತದೆ. ದೇಶದ ಸತ್ಪ್ರಜೆಗಳನ್ನು ರೂಪಿಸುವ ಶಿಲ್ಪಿಗಳಾದ ಶಿಕ್ಷಕರು ಸ್ವಯಂ ವಿದ್ಯಾರ್ಥಿಗಳಾಗಿ ನಿರಂತರ ಓದು ರೂಢಿಸಿಕೊಳ್ಳಬೇಕು. ಭವಿಷ್ಯದ ಭವ್ಯ ನಾಗರಿಕರನ್ನು ರೂಪಿಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಎಂದಿಗಿಂತಲೂ ಇಂದು ಶಿಕ್ಷಕರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದ್ದು ವಿದ್ಯಾರ್ಥಿಗಳಲ್ಲಿನ ಬುದ್ಧಿಮತ್ತೆ ಮತ್ತು ಪ್ರತಿಭೆ ಗುರುತಿಸಿ ವ್ಯಕ್ತಿ ಶಕ್ತಿಯನ್ನಾಗಿ ರೂಪಿಸುವ ಶಿಕ್ಷಕರು ಸದಾ ಸಮಾಜಮುಖಿಯಾಗಿರುತ್ತಾರೆ ಎಂದರು.

ಗ್ರಾಪಂ ಅಧ್ಯಕ್ಷೆ ಚನ್ನವ್ವ ಮೈಲಾರಿ ಅಧ್ಯಕ್ಷತೆ ವಹಿಸಿದ್ದರು. ಕುಕನೂರಿನ ಚನ್ನವೀರ ಸ್ವಾಮಿಗಳು, ಗುರು ದಿಂಗಾಲೇಶ್ವರ ಶಾಲೆಯ ಮುಖ್ಯ ಶಿಕ್ಷಕ ಕುಮಾರ ಹಳೇಗೌಡ್ರ, ಎಂ.ಎಂ. ದಾದನೂರ, ಸಿದ್ದಪ್ಪ ಸಜ್ಜಗಾರ, ರಾಜೇಶ್ವರಿ ಹುಣಸೀಮರದ, ರಮೇಶ ಹಾಲಣ್ಣವರ, ಗುರುರಾಜ ಬಡಿಗೇರ ಹಾಗೂ ಗ್ರಾಪಂ ಸದಸ್ಯರು, ಹಿರಿಯರು, ನಿವೃತ್ತ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

ನಿವೃತ್ತ ಶಿಕ್ಷಕರನ್ನು ಹಳೆಯ ವಿದ್ಯಾರ್ಥಿ ಬಳಗದ ಸ್ನೇಹಿತರು ವಾದ್ಯ ಮೇಳದೊಂದಿಗೆ ಗ್ರಾಮದ ಮುಖ್ಯ ಮಾರ್ಗದಲ್ಲಿ ಮೆರವಣಿಗೆ ಮೂಲಕ ಬರಮಾಡಿಕೊಂಡು ಗುರುವಂದನೆ ಸಲ್ಲಿಸಿದರು.