ಶಿಕ್ಷಣ, ಸಂಸ್ಕಾರ ನೀಡುವವರೇ ಗುರುಗಳು: ಕರಿಬಸಪ್ಪ

| Published : Sep 18 2024, 01:47 AM IST

ಸಾರಾಂಶ

ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ಆ ಮಗುವಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ನೀಡಿ ಒಬ್ಬ ನಾಗರಿಕನನ್ನಾಗಿ ಮಾಡಿ, ದೇಶದ ಆಸ್ತಿಯನ್ನಾಗಿಸುವುದು ಶಿಕ್ಷಕರು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಕರಿಬಸಪ್ಪ ಹೊನ್ನಾಳಿಯಲ್ಲಿ ಹೇಳಿದ್ದಾರೆ.

- ಎಚ್‌.ಗೋಪಗೊಂಡನಹಳ್ಳಿಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ

ತಾಯಿ ಮಗುವಿಗೆ ಜನ್ಮ ನೀಡುತ್ತಾಳೆ. ಆದರೆ, ಆ ಮಗುವಿಗೆ ಸರಿಯಾದ ಶಿಕ್ಷಣ, ಸಂಸ್ಕಾರ ನೀಡಿ ಒಬ್ಬ ನಾಗರಿಕನನ್ನಾಗಿ ಮಾಡಿ, ದೇಶದ ಆಸ್ತಿಯನ್ನಾಗಿಸುವುದು ಶಿಕ್ಷಕರು ಎಂದು ನಿವೃತ್ತ ಪ್ರೌಢಶಾಲಾ ಮುಖ್ಯಶಿಕ್ಷಕ ಕರಿಬಸಪ್ಪ ಹೇಳಿದರು.

ತಾಲೂಕಿನ ಎಚ್.ಗೋಪಗೊಂಡನಹಳ್ಳಿ ಶಾಲಾ ಅವರಣದಲ್ಲಿ ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಹಳೇ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಶಿಕ್ಷಕ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯಾರ್ಥಿ ಓದಿ ಎಷ್ಟೇ ದೊಡ್ಡ ಮನುಷ್ಯನಾದರೂ ತಾನು ಓದಿದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಹಾಗೂ ಅವುಗಳ ಶಿಕ್ಷಕರನ್ನು ಎಂದಿಗೂ ಮರೆಯವುದಿಲ್ಲ. ಪ್ರತಿಯೊಬ್ಬ ಶಿಕ್ಷಕರೂ ತಾನು ಕಲಿಸಿದ ಪ್ರತಿ ವಿದ್ಯಾರ್ಥಿಯೂ ಉತ್ತಮ ಶಿಕ್ಷಣ ಪಡೆದು ದೇಶದ ಒಬ್ಬ ಉತ್ತಮ ಪ್ರಜೆಯಾಗಬೇಕು, ದೊಡ್ಡ ಅಧಿಕಾರಿಯಾಗಿ ಜನಸೇವೆ ಮಾಡಬೇಕು ಎನ್ನುವ ಅಭಿಲಾಷೆಯಿಂದಲೇ ಮಕ್ಕಳಿಗೆ ಪಾಠ. ಪ್ರವಚನಗಳನ್ನು ಮಾಡುತ್ತಾರೆ ಎಂದರು.

ದೈಹಿಕ ಶಿಕ್ಷಣ ಶಿಕ್ಷಕ ಮಂಜುನಾಥ ಗಂಡುಗಲಿ ಮಾತನಾಡಿ, ಹಲವಾರು ವರ್ಷಗಳ ಹಿಂದೆ ತಮಗೆ ವಿದ್ಯೆ ಕಲಿಸಿದ ಶಿಕ್ಷಕರನ್ನು ಮರೆಯದೇ ಗುರುವಂದನಾ ಕಾರ್ಯಕ್ರಮದ ಮೂಲಕ ಅವರಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ನಿಜಕ್ಕೂ ಶ್ಲಾಘನೀಯ. ಗುರುಗಳಿಗೆ ಇದಕ್ಕಿಂತ ದೊಡ್ಡ ಗುರುಕಾಣಿಕೆ ಬೇರೊಂದಿಲ್ಲ ಎಂದು ಹೇಳಿದರು.

ಅಧ್ಯಕ್ಷೆ ವಹಿಸಿದ್ದ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಮಲ್ಲಪ್ಪ ಮಾತನಾಡಿ, ಜೈವಿಕ ಸಂಬಂಧ ಇಲ್ಲದಿದ್ದರೂ ತಂದೆ -ತಾಯಿಯ ನಂತರ ಅವರಷ್ಟೇ ಪ್ರೀತಿ, ಜವಾಬ್ದಾರಿ ತೋರಿಸುವವರು ಪಾಠ, ಪ್ರವಚನ ಮಾಡುವ ಗುರುಗಳು ಮಾತ್ರ. ಗುರುಗಳಿಗೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ, ಅಕ್ಕರೆ ಇರಬೇಕು ಎಂದರು.

ಮುಖ್ಯ ಅತಿಥಿಗಳಾಗಿ ಗುರುಬಸಪ್ಪ, ಗಂಗನಗೌಡ, ಎಚ್.ಬಿ. ವೀರಪ್ಪ, ಕರಿಬಸಪ್ಪ, ಪಾಲಾಕ್ಷಪ್ಪ ಮಾತನಾಡಿದರು. ಶಿಕ್ಷಕರಾದ ತೇಜಮೂರ್ತಿ, ಅರುಣ್ ಕುಮಾರ್, ಮಲ್ಲಪ್ಪ ಬಾಳೇಕಾಯಿ, ಕುಬೇರ ಗೌಡ, ಕವಿತಾ ಪಾಟೀಲ್, ಸಾಕಮ್ಮ, ನಾಗರಾಜ ಅಳವಂಡಿ, ಸಿದ್ದಪ್ಪ ಮುಂತಾದವರು ಭಾಗವಹಿಸಿದ್ದರು.

ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಕರ್ತವ್ಯ ನಿರ್ವಹಿಸಿ ಬೇರೆಡೆಗೆ ವರ್ಗಾವಾಗಿದ್ದ 30ಕ್ಕೂ ಹೆಚ್ಚು ಶಿಕ್ಷಕರನ್ನು ಗ್ರಾಮದ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.

- - - -16ಎಚ್.ಎಲ್.ಐ1:

ಹೊನ್ನಾಳಿ ತಾಲೂಕು ಎಚ್.ಗೋಪಗೊಂಡನಹಳ್ಳಿಯಲ್ಲಿ ಹಳೇ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ನಡೆಯಿತು.