ರಾಜಕೀಯದಲ್ಲಿ ಸ್ಥಾನ ಶಾಶ್ವತವಲ್ಲ, ಮೂಲ ಉದ್ಯೋಗ ಕೈ ಬಿಡಬೇಡಿ: ಹೊರಟ್ಟಿ

| Published : Sep 18 2024, 01:47 AM IST

ರಾಜಕೀಯದಲ್ಲಿ ಸ್ಥಾನ ಶಾಶ್ವತವಲ್ಲ, ಮೂಲ ಉದ್ಯೋಗ ಕೈ ಬಿಡಬೇಡಿ: ಹೊರಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಜಾತಿ-ಧರ್ಮಗಳ ಮಧ್ಯೆ ಹೊಂದಾಣಿಕೆ ಇರಬೇಕು. ಅಂದಾಗ ಸಮಾಜ ಸಮ ಸ್ಥಿತಿಯಲ್ಲಿ ನಡೆಯುತ್ತದೆ. ಎಲ್ಲ ಜಾತಿ-ಧರ್ಮಗಳು ಒಂದಾಗುವ ವರೆಗೂ ಇಂತಹ ಗಲಾಟೆಗಳು ನಡೆಯುತ್ತಿರುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂಬ ಅರಿವು ಇರಬೇಕು.

ಧಾರವಾಡ:

ರಾಜಕಾರಣದಲ್ಲಿ ಯಾವುದೂ ಶಾಶ್ವತ ಅಲ್ಲ. ಇವತ್ತು ಇರುವ ಸ್ಥಾನ ನಾಳೆಗೆ ಹೋಗಬಹುದು. ಆದ್ದರಿಂದ ರಾಜಕಾರಣಿಗಳು ತಮ್ಮ ಮೂಲ‌ ಉದ್ಯೋಗ ಬಿಡಬಾರದು ಎಂದು ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ರಾಜಕಾರಣಿಗಳಿಗೆ ಸಲಹೆ ನೀಡಿದರು.

ಧಾರವಾಡದಲ್ಲಿ ಮಂಗಳವಾರ ವಿಶ್ವಕರ್ಮ ಜಯಂತಿ ಪೂರ್ವ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯದ ರಾಜಕಾರಣದ ಪರಿಸ್ಥಿತಿಯಲ್ಲಿ ನಿಶ್ಚಿತತೆ ಇಲ್ಲ. ಯಾವಾಗ ಏನು ಬೇಕಾದರೂ ಬೆಳವಣಿಗೆಗಳು ನಡೆಯಬಹುದು. ಹೀಗಾಗಿ ನಾನು ಇವತ್ತಿಗೂ ಒಕ್ಕಲುತನ ಬಿಟ್ಟಿಲ್ಲ. ಈಗಿರುವ ರಾಜಕಾರಣದ ಸ್ಥಾನ ಹೋದರೆ ಕೃಷಿಯತ್ತ ಮರಳುತ್ತೇನೆ. ಇವತ್ತಿನ ರಾಜಕಾರಣ ಬಹಳ ವಿಚಿತ್ರ ಇದೆ ಎಂದು ಮಾರ್ಮಿಕವಾಗಿ ನುಡಿದರು.

ಈಗ ಯಾವ ಕ್ಷಣದಲ್ಲಿ ರಾಜಕೀಯದಲ್ಲಿ ಏನಾಗುತ್ತದೆ ಎಂಬುದೇ ತಿಳಿಯುತ್ತಿಲ್ಲ. ಯಾವಾಗ ಸಚಿವ ಸ್ಥಾನಗಳು ಬದಲಾಗುತ್ತದೆಯೋ ಗೊತ್ತಿಲ್ಲ? ರಾಜಕಾರಣಿಗಳಲ್ಲಿ ನೈತಿಕತೆ ಹೋಗಿದೆ. ದುಡ್ಡು ಕೊಟ್ಟು ಮತ ಹಾಕಿಸಿಕ್ಕೊಳ್ಳುವುದು ಬೇಸರ ಎನಿಸಿದೆ. ಹಿಂದಿನಂತೆ ಇಂದು ರಾಜಕಾರಣ ಉಳಿದಿಲ್ಲ ಎಂದು ರಾಜಕಾರಣದ ಬಗ್ಗೆ ಬೇಸರದ ಮಾತುಗಳನ್ನಾಡಿದರು.

ಇನ್ನು, ಶಾಸಕ ಮುನಿರತ್ನ ಬಂಧನ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಹೊರಟ್ಟಿ, ಜವಾಬ್ದಾರಿ ಸ್ಥಾನದಲ್ಲಿರುವ ನಾವುಗಳು ಎಚ್ಚರದಿಂದ ಮಾತನಾಡಬೇಕು. ಕೆಟ್ಟ ಪದ ಬಳಸಬಾರದು. ಅವರ ಬಂಧನದ ವಿಷಯದಲ್ಲಿ ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.

ರಾಜ್ಯದಲ್ಲಿ ಕೋಮು-ಗಲಭೆಗಳ ವಿಚಾರವಾಗಿ ಮಾತನಾಡಿದ ಹೊರಟ್ಟಿ, ಜಾತಿ-ಧರ್ಮಗಳ ಮಧ್ಯೆ ಹೊಂದಾಣಿಕೆ ಇರಬೇಕು. ಅಂದಾಗ ಸಮಾಜ ಸಮ ಸ್ಥಿತಿಯಲ್ಲಿ ನಡೆಯುತ್ತದೆ. ಎಲ್ಲ ಜಾತಿ-ಧರ್ಮಗಳು ಒಂದಾಗುವ ವರೆಗೂ ಇಂತಹ ಗಲಾಟೆಗಳು ನಡೆಯುತ್ತಿರುತ್ತವೆ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಲಿದೆ ಎಂಬ ಅರಿವು ಇರಬೇಕು. ಆದರೆ, ಇಂತಹ ಸಂದರ್ಭದಲ್ಲಿ ನಾಲ್ಕು ದಿನ ಬಂಧನದಲ್ಲಿದ್ದು ಮತ್ತೆ ಹೊರ ಬರುತ್ತೇವೆ ಎಂಬ ಭಾವನೆ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಜತೆಗೆ ಪರಿಸ್ಥಿತಿಗಳನ್ನು ನಿಭಾಯಿಸಲು ರಾಜಕಾರಣ ಮೊದಲಿನಂತೆ ಶುದ್ಧವಾಗಿಲ್ಲ. ಕಲುಷಿತವಾಗಿದೆ. ಶಾಂತತೆ ಕಾಪಾಡಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೊರಟ್ಟಿ ಹೇಳಿದರು.