ಶ್ರೀರಂಗಪಟ್ಟಣ: ಪಟ್ಟಣದ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಎಸ್‌ಎಸ್‌ಎಲ್‌ಸಿ- 97 ಬ್ಯಾಚ್‌ನ ವಿದ್ಯಾರ್ಥಿಗಳು ಪಾಲಹಳ್ಳಿ ಖಾಸಗಿ ರೆಸಾರ್ಟ್‌ನಲ್ಲಿ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಹಿರಿಯ ಶಿಕ್ಷಕರು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ನಂತರ ವಿದ್ಯೆ ಕಲಿಸಿದ ಶಿಕ್ಷಕರಿಗೆ 97 ಬ್ಯಾಚ್ ನ ಸ್ನೇಹ ಬಳದ ವಿದ್ಯಾರ್ಥಿಗಳು ಸನ್ಮಾನಿಸಿ ಗೌರವಿಸಿದರು. ಅಲ್ಲದೆ ತಮ್ಮ ಸಹಪಾಠಿ ಪ್ರಸ್ತುತ ಇನ್ಸ್‌ಪೆಕ್ಟರ್ ಆಗಿ ಸಿಎಂ ಪದಕ ಪಡೆದ ಬಿ.ಜಿ.ಕುಮಾರ್ ಅವರನ್ನೂ ಸಹ ಅಭಿನಂದಿಸಿ ಸನ್ಮಾನಿಸಲಾಯಿತು.ಈ ವೇಳೆ ಶಿಕ್ಷಕರಾದ ರಂಗಸ್ವಾಮಿ ಮಾತನಾಡಿ, ತಾವು ಕಲಿಸಿದ ವಿದ್ಯಾರ್ಥಿಗಳು ಇಂದು ಸಮಾಜದ ಸತ್ಪ್ರಜೆಗಳಾಗಿರುವುದು ನಿಜಕ್ಕೂ ಸಂತಸದ ವಿಚಾರ. ಅದರಲ್ಲೂ ಒಬ್ಬ ವಿದ್ಯಾರ್ಥಿ ಇನ್ಸ್ ಪೆಕ್ಟರ್ ಆಗಿ ಸಿಎಂ ಪದಕ ಪಡೆದಿರುವುದು ನಾವು ಕಲಿಸಿದ ವಿದ್ಯೆ ಸಾರ್ಥಕತೆ ತಂದಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಳಿಕ ಇನ್ಸ್‌ಪೆಕ್ಟರ್ ಬಿ.ಜಿ.ಕುಮಾರ್ ಮಾನಾಡಿ, ನಾವು ಸರ್ಕಾರಿ ಶಾಲೆಯಲ್ಲೇ ಓದಿ ಈ ಹುದ್ದೆವರೆಗೂ ಬಂದಿದ್ದೇವೆ. ಶಿಕ್ಷಕರು ನಮ್ಮನ್ನು ತಿದ್ದಿ ತೀಡಿದ್ದಾರೆ. ಅವರ ಋಣ ತೀರಿಸಲು ಸಾಧ್ಯವಿಲ್ಲ. ಇವರನ್ನು ನಾವೆಲ್ಲ ಸೇರಿ 29 ವರ್ಷಗಳ ಬಳಿಕ ಸನ್ಮಾನಿಸುತ್ತಿರುವುದು ನಮ್ಮ ಪುಣ್ಯ ಎಂದರು.ಕಾರ್ಯಕ್ರಮದಲ್ಲಿ 97ನೇ ಬ್ಯಾಚ್ ವಿದ್ಯಾರ್ಥಿಗಳಾದ ರಾಘವೇಂದ್ರ, ಪ್ರಕಾಶ್, ಕುಮಾರ್, ಶಿಲ್ಪ, ಪವಿತ್ರ, ಚಂಪಕ, ಉತ್ತಮ್, ನಾಗೇಶ್ ಸೇರಿದಂತೆ ಇತರರು ಇದ್ದರು.