ಸಾರಾಂಶ
ಹೊಸಪೇಟೆ : ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಸಂಭ್ರಮ ಗರಿಗೆದರಿದ್ದು, ಉತ್ಸವಕ್ಕಾಗಿ ವಿಜಯನಗರ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ. ಇಡೀ ಜಗತ್ತಿನ ಕಣ್ಮನ ಸೆಳೆಯುವ ನಿಟ್ಟಿನಲ್ಲಿ ಉತ್ಸವ ಸಜ್ಜುಗೊಳಿಸಲಾಗಿದ್ದು, ತುಂಗಭದ್ರಾ ನದಿ ತೀರದಲ್ಲಿರುವ ಹಂಪಿಯಲ್ಲಿ ಮತ್ತೆ ಜೀವ ಕಳೆ ಮೈದಾಳಿದೆ.
ನಾಡಹಬ್ಬ ಮೈಸೂರು ದಸರೆಗೆ ಪ್ರೇರಣೆಯಾಗಿರುವ ಹಂಪಿ ನೆಲದಲ್ಲೀಗ ಉತ್ಸವ ಗರಿಗೆದರಿದ್ದು, ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತದ ಸಹಯೋಗದಲ್ಲಿ ಆಯೋಜಿಸಲಾಗುತ್ತಿರುವ ಹಂಪಿ ಉತ್ಸವ-2025ಕ್ಕೆ ಫೆ.28ರಂದು ಸಂಜೆ 6 ಗಂಟೆಗೆ ಗಾಯತ್ರಿ ಪೀಠದ ಬಳಿ ನಿರ್ಮಿಸಲಾಗಿರುವ ಎಂ.ಪಿ. ಪ್ರಕಾಶ್ ಪ್ರಧಾನ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆಡ್.ಜಮೀರ್ ಅಹ್ಮದ್ ಖಾನ್, ಪ್ರವಾಸೋದ್ಯಮ ಇಲಾಖೆ ಸಚಿವ ಎಚ್.ಕೆ. ಪಾಟೀಲ್, ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪಾಲ್ಗೊಳ್ಳಲಿದ್ದು, ಶಾಸಕ ಎಚ್.ಆರ್. ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು ಭಾಗವಹಿಸಲಿದ್ದಾರೆ.
ಗತ ವೈಭವ:
ವಿಜಯನಗರ ಆಳರಸರ ಕಾಲದ ಸಂಸ್ಕೃತಿ, ಪರಂಪರೆ, ವಾಸ್ತು ಶಿಲ್ಪ, ಸಾಹಿತ್ಯವನ್ನು ಇಡೀ ಜಗತ್ತಿಗೆ ಪರಿಚಯಿಸಲು ಹಂಪಿ ಉತ್ಸವ ಜನ್ಮತಳೆದಿದೆ. ಗತ ವೈಭವ ಮರುಕಳಿಸಲು ಉತ್ಸವ ನಡೆಸಲಾಗುತ್ತಿದೆ. ಇದು ಬರೀ ಉತ್ಸವವಲ್ಲ, ಚಾರಿತ್ರಿಕ ಹಿನ್ನೆಲೆ ಕೂಡ ಹೊಂದಿದೆ. ಮೂರು ದಿನಗಳವರೆಗೆ ನಡೆಯಲಿರುವ ಉತ್ಸವದಲ್ಲಿ ಇಡೀ ಜಗತ್ತಿಗೆ ಅಂದಿನ ರೋಮಾಂಚನಕಾರಿ ಘಟನಾವಳಿಗಳ ಸ್ಮಾರಕ ಹಾಗೂ ಕುರುಹಾಗಿ ನಿಂತಿರುವ ಈ ವಿಶ್ವವಿಖ್ಯಾತ ಹಂಪಿಯನ್ನು ಯುನೆಸ್ಕೊ ವಿಶ್ವ ಪರಂಪರೆ ಪ್ರದೇಶವೆಂದು 1986ರಂದು ಘೋಷಿಸಿದ ಬಳಿಕ ಇದಕ್ಕೆ ಅಂತಾರಾಷ್ಟ್ರೀಯ ಮನ್ನಣೆ ದೊರೆತಿದೆ.
ಉಚಿತ ಬಸ್:
ಹಂಪಿಯಲ್ಲಿ 100 ಎಕರೆ ಜಾಗದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. 300 ಬಸ್‌ಗಳ ವ್ಯವಸ್ಥೆ ಮಾಡಲಾಗಿದ್ದು, ಹೊಸಪೇಟೆ, ಕಂಪ್ಲಿಯಿಂದ ಉಚಿತ ಬಸ್ ಓಡಿಸಲಾಗುತ್ತಿದೆ. ಪೊಲೀಸರು ಏಕಮುಖ ರಸ್ತೆ ಮಾರ್ಗಗಳನ್ನು ಸೂಚಿಸಿದ್ದಾರೆ.
ಗಜಶಾಲೆಯ ಬಳಿ ವಿಜಯನಗರ ವೈಭವ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ನಡೆಯಲಿದೆ. ಸ್ಥಳೀಯ ಹಾಗೂ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ತಮ್ಮ ಕಲೆಯನ್ನು ಪ್ರಸ್ತುತಪಡಿಸಲಿದ್ದಾರೆ. ರಂಗಭೂಮಿ, ಜಾನಪದ, ಹಿಂದೂಸ್ತಾನಿ, ಕರ್ನಾಟಕ ಸಂಗೀತ, ಕೂಚುಪುಡಿ ನೃತ್ಯ, ಕಥಕ್, ತೊಗಲುಗೊಂಬೆ, ಭರತ ನಾಟ್ಯ, ಲಂಬಾಣಿ ನೃತ್ಯ, ವಚನ ಸಂಗೀತ, ವೀಣಾ ವಾದನ ಸೇರಿದಂತೆ ವಿವಿಧ ಕಲಾ ಪ್ರಕಾರಕ್ಕೆ ವೇದಿಕೆ ಕಲ್ಪಿಸಲಾಗಿದೆ.
ಜಗಜಟ್ಟಿಗಳು ಕುಸ್ತಿ ಅಖಾಡದಲ್ಲಿ ಕಾಳಗ ನಡೆಸಲಿದ್ದಾರೆ. ಹಂಪಿಯ ಸ್ಮಾರಕಗಳ ನಡುವೆ ಕಲಾ ಲೋಕ ಸೃಷ್ಟಿಯಾಗಲಿದೆ. ಹಂಪಿಯಲ್ಲಿ ಪುಸ್ತಕ ಮೇಳ, ಫಲಪುಷ್ಪ ಪ್ರದರ್ಶನ, ಕೃಷಿ ವಸ್ತು ಪ್ರದರ್ಶನ, ಆಹಾರ ಪ್ರದರ್ಶನ, ಕರಕುಶಲ ಪ್ರದರ್ಶನ ಕೂಡ ಆಯೋಜಿಸಲಾಗಿದೆ. ಶಿಲ್ಪ ಕಲೆ, ಚಿತ್ರಕಲಾ ಪ್ರದರ್ಶನಕ್ಕೂ ಆದ್ಯತೆ ನೀಡಲಾಗಿದೆ.
ಹೀಗಾಗಿ ಹಂಪಿ ಉತ್ಸವದಲ್ಲಿ ವಿಜಯನಗರದ ವೈಭವ ಮನೆ ಮಾಡಿದೆ. ಹಂಪಿ ಉತ್ಸವದ ವೀಕ್ಷಣೆಗೆ ನಾಡಿನ ವಿವಿಧ ಕಡೆಯಿಂದಲೂ ಜನರು ಆಗಮಿಸುತ್ತಾರೆ. ದೇಶ-ವಿದೇಶಿ ಪ್ರವಾಸಿಗರು ಹಂಪಿ ನೆಲದಲ್ಲಿ ನಡೆಯುತ್ತಿರುವ ಉತ್ಸವದ ವೀಕ್ಷಣೆಗೆ ಹಾತೊರೆಯುತ್ತಿದ್ದಾರೆ.
ಹಂಪಿಗೆ ವಾರ್ಷಿಕ 40 ಲಕ್ಷ ದೇಶಿ ಪ್ರವಾಸಿಗರು ಹಾಗೂ 3 ಲಕ್ಷಕ್ಕೂ ಅಧಿಕ ವಿದೇಶಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹಂಪಿ ಉತ್ಸವ ಈ ನೆಲದ ಹಿರಿಮೆ-ಗರಿಮೆಯನ್ನು ಸಾರುತ್ತಿದೆ.
ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲಪುಷ್ಪ ಪ್ರದರ್ಶನ, ಸಾವಯವ ಮತ್ತು ಸಿರಿಧಾನ್ಯಗಳ ವಸ್ತು ಪ್ರದರ್ಶನ, ಸಿರಿಧಾನ್ಯಗಳ ಪಾಕ ಸ್ಪರ್ಧೆ, ಆಹಾರ ಮೇಳ, ವಿಜ್ಞಾನಿಗಳಿಂದ ಉಪನ್ಯಾಸ ಹಾಗೂ ಸಂವಾದ, ಪುಸ್ತಕ ಪ್ರದರ್ಶನ, ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ, ಚಿತ್ರ ಸಂತೆ, ಮತ್ಸ್ಯ ಮೇಳ ಹಾಗೂ ಮಹಿಳಾ ಗೋಷ್ಠಿ, ಹಂಪಿ ಬೈ ಸ್ಕೈ, ಯೋಗಾಸನ, ಕುಸ್ತಿ, ಟಗರು ಪ್ರದರ್ಶನ, ಶ್ವಾನ ಪ್ರದರ್ಶನ, ಜಾನಪದ ವಾಹಿನಿ ಮೆರವಣಿಗೆ ಚಾಲನೆ ನೀಡಲಾಗುವುದು.
ಉತ್ಸವದಲ್ಲಿ ಚಲನಚಿತ್ರ ಕಲಾವಿದರ ದಂಡು:
ನಟ ರಮೇಶ್ ಅರವಿಂದ್, ಚಲನಚಿತ್ರ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ನಿರ್ದೇಶಕ ತರುಣ್ ಸುಧೀರ್, ನಟಿಯರಾದ ಪ್ರೇಮಾ, ವೈಷ್ಣವಿ ಗೌಡ, ಬೇಬಿ ಸಿಹಿ, ಸೋನಲ್ ಮೊಂಥೆರೋ, ಗಾಯಕ ರಾಜೇಶ್ ಕೃಷ್ಣನ್, ಪ್ರಿಯಾಂಕಾ ಉಪೇಂದ್ರ, ವಸಿಷ್ಠ ಸಿಂಹ, ರ‍್ಯಾಪರ್ ರಚ್ಚು, ಶರಣ್ಯ ಶೆಟ್ಟಿ, ಮೋಕ್ಷ ಕುನಾಲ್, ಅನುಶ್ರೀ, ದಿವ್ಯಾ ಆಲೂರ್, ರಜನಿ ಬೀಟ್ ಗುರು, ಬಿಗ್ ಬಾಸ್ ಖ್ಯಾತಿಯ ಹನುಮಂತ ಲಮಾಣಿ ಭಾಗವಹಿಸುವರು. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ನೇತೃತ್ವದ ತಂಡ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದೆ. ನಟ, ನಟಿಯರಾದ ವಿಜಯ್ ರಾಘವೇಂದ್ರ, ರಮ್ಯ, ಅನು ಪ್ರಭಾಕರ್, ದಿಗಂತ್, ಐಂದ್ರಿತಾ ರೈ, ರಾಗಿಣಿ ದ್ವಿವೇದಿ, ಶೃತಿ ಹರಿಹರನ್, ಭಾವನಾ ರಾವ್ ಭಾಗವಹಿಸುವರು. ಸಂಗೀತ ನಿರ್ದೇಶಕ ಗುರುಕಿರಣ್ ರಸಮಂಜರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.