ನಿರ್ವಾಹಕನ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

| Published : Feb 28 2025, 12:51 AM IST

ಸಾರಾಂಶ

ಎಂಇಎಸ್ ಸಂಘಟನೆ ರೌಡಿಗಳ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಎಂಇಎಸ್‌ ಪದೇ ಪದೇ ವಿವಿಧ ಕಾರಣಗಳಿಗಾಗಿ ಕ್ಯಾತೆ ತೆಗೆಯುವುದನ್ನು ನಿಲ್ಲಿಸಬೇಕು. ಈ ಸಂಘಟನೆ ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕರವೇ ಸೇರಿದಂತೆ ನಾಡಿನ ಕನ್ನಡ ಪರ ಸಂಘಟನೆಗಳು ಎಂ.ಇಎಸ್ ಸಂಘಟನೆಗೆ ತಕ್ಕಪಾಠ ಕಲಿಸಬೇಕು

ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ

ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕೆಎಸ್‍ಆರ್‌ಟಿಸಿ ನಿರ್ವಾಹಕನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪಂಜಿನ ಮೆರವಣಿಗೆ ಮಾಡಿ ಪ್ರತಿಭಟನೆ ನಡೆಸಿದರು.

ಡಾ.ಹೆಚ್.ಎನ್. ವೃತ್ತದಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಕರವೇ ಕಾರ್ಯಕರ್ತರು ಪಂಜಿನ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ ನಡೆಸಿ ಎಂಇಎಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಎಂಇಎಸ್‌ಗೆ ಪಾಠ ಕಲಿಸಬೇಕು

ಈ ಸಂದರ್ಭದಲ್ಲಿ ಕರವೇ ಹರೀಶ್ ಮಾತನಾಡಿ, ಎಂಇಎಸ್ ಸಂಘಟನೆ ರೌಡಿಗಳ ರೀತಿಯಲ್ಲಿ ನಡೆದುಕೊಳ್ಳುತ್ತಿದೆ. ಎಂಇಎಸ್‌ ಪದೇ ಪದೇ ವಿವಿಧ ಕಾರಣಗಳಿಗಾಗಿ ಕ್ಯಾತೆ ತೆಗೆಯುವುದನ್ನು ನಿಲ್ಲಿಸಬೇಕು. ಈ ಸಂಘಟನೆ ವಿರುದ್ಧ ಸರ್ಕಾರ ಕ್ರಮಕೈಗೊಳ್ಳದಿದ್ದರೆ ಕರವೇ ಸೇರಿದಂತೆ ನಾಡಿನ ಕನ್ನಡ ಪರ ಸಂಘಟನೆಗಳು ಎಂ.ಇಎಸ್ ಸಂಘಟನೆಗೆ ತಕ್ಕಪಾಠ ಕಲಿಸಬೇಕಾಗುತ್ತೆ ಎಂದು ಎಚ್ಚರಿಸಿದರು.

ನೆಲದ ಕಾನೂನು ಪಾಲಿಸಿ

ನಾಡಿನ ಭಾಷೆ,ನೆಲ, ಜಲ ಇತ್ಯಾಧಿಗಳಿಗೆ ಧಕ್ಕೆ ಉಂಟಾದಾಗ ನಾಡಿನ ಎಲ್ಲಾ ಕನ್ನಡಪರ ಸಂಘಟನೆಗಳು ಒಂದಾಗಬೇಕು. ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಎಂಇಎಸ್‌ ಪಾಲಿಸಬೇಕು ಇಲ್ಲವೇ ಕರ್ನಾಟಕದಿಂದ ಜಾಗ ಖಾಲಿ ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಮಹಿಳಾಧ್ಯಕ್ಷ ಸುಜಾತಮ್ಮ, ಪ್ರಧಾನ ಕಾರ್ಯದರ್ಶಿ ರಿಯಾಜ್ ಉಪಾಧ್ಯಕ್ಷ ಅಲೀಮ್ ಆಟೋ ಘಟಕದ ಜಬೀವುಲ್ಲಾ , ಸಂಪತ್ ಕುಮಾರ್, ಮಂಜುನಾಥ್ ತಾಲೂಕು ಮುಖಂಡರಾದ ಶಿವಕುಮಾರ್, ರಘು, ಚಾಂದ್ ಪಾಷ , ಕೃಷ್ಣ ನಾಯಕ್ , ನಗರ ಘಟಕದ ಆಖಿಲ್ ನರಸಿಂಹ ಮೂರ್ತಿ ವಿದ್ಯಾರ್ಥಿ ಘಟಕದ ಗಂಗರಾಜ ಇದ್ದರು.