ರಾಮನಗರ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿಗೆ ಅನುಮೋದನೆ ದೊರೆತಿದ್ದು, ಇದಕ್ಕಾಗಿ ಕೈಲಾಂಚ ಹೋಬಳಿಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.
ತಾಲೂಕಿನ ಕೈಲಾಂಚ ಹೋಬಳಿ ಬನ್ನಿಕುಪ್ಪೆ ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶುಕ್ರವಾರ 6 ಕೋಟಿ ರು. ವೆಚ್ಚದ ಅಭಿವೃದ್ಧಿ ಕೆಲಸಗಳಿಗೆ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೈಲಾಂಚ ಹೋಬಳಿ ಎಲ್ಲ ಹಳ್ಳಿಗಳಲ್ಲಿರುವ ವಿದ್ಯುತ್ ತಂತಿ ತೆರವುಗೊಳಿಸಿ ಭೂಗತ ವಿದ್ಯುತ್ ಕೇಬಲ್ ಅಳವಡಿಸುತ್ತಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ. ಆನಂತರ ನಗರ ಪ್ರದೇಶ ಸೇರಿದಂತೆ ಎಲ್ಲೆಡೆ ಭೂಗತ ವಿದ್ಯುತ್ ಕೇಬಲ್ ಅಳವಡಿಸಲಾಗುವುದು ಎಂದರು.ಬಿಎಂಐಸಿಪಿಯಿಂದ 2 ಕೋಟಿ ರು.ಅನುದಾನ ಬಂದಿದೆ. ಅದರಲ್ಲಿ ಬನ್ನಿಕುಪ್ಪೆ, ಜಕ್ಕನಹಳ್ಳಿ-ಲಕ್ಕೋಜನಹಳ್ಳಿ ಭಾಗದ ಕೆರೆಗಳನ್ನು ಅಭಿವೃದ್ಧಿ ಪಡಿಸಿ, ಸೌಂದರೀಕರಣದ ಜೊತೆಗೆ ನೀರು ತುಂಬಿಸುವ ಕೆಲಸಕ್ಕೂ ಚಾಲನೆ ನೀಡಿದ್ದೇನೆ. ಇದರಿಂದ ಪ್ರಾಣಿ, ಪಕ್ಷಿ ಸಂಕುಲಗಳಿಗೆ ನೀರುಣಿಸುವ ಜೊತೆಗೆ ಅಂತರ್ಜಲವೂ ವೃದ್ಧಿಯಾಗಿ ಕುಡಿಯುವ ನೀರಿನ ಬವಣೆ ತಪ್ಪಲಿದೆ. ಜೊತೆಗೆ ರೈತರ ಕೃಷಿ ಚಟುವಟಿಕೆಗೂ ನೆರವಾಗಲಿದೆ ಎಂದರು.
ಗಾಣಾಳು ಏತ ನೀರಾವರಿ ಯೋಜನೆ ಮುಖಾಂತರ ಕನಕಪುರದ 7 ಕೆರೆಗಳು ಸೇರಿದಂತೆ ಕೈಲಾಂಚ ಭಾಗದ ಎಲ್ಲ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದ್ದು, ಟೆಂಡರ್ ಸಹ ಮುಗಿದಿದೆ. ಈ ಯೋಜನೆ ಕೆಲಸಕ್ಕೆ ಶೀಘ್ರದಲ್ಲಿ ಚಾಲನೆ ಸಹ ನೀಡಲಾಗುವುದು. ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ವಹಿಸುವಂತೆ ಇಒ, ಪಿಡಿಒಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.ವಿಷ ಬೀಜ ಬಿತ್ತುವ ಬಿಜೆಪಿ:
ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು ಕಾಂಗ್ರೆಸ್ ಪಕ್ಷ, ಈ ಹಿಂದೆಯೆ ಸ್ಥಳೀಯ ಸಂಸ್ಥೆಯಲ್ಲಿ ಶೇ.೫೦ ಮಹಿಳೆಯರಿಗೆ ಮೀಸಲಾತಿ ಕೊಟ್ಟಿದ್ದು, ಸದಸ್ಯ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ಕೊಟ್ಟು ರಾಜಕೀಯ ಸೂಕ್ತ ಸ್ಥಾನಮಾನ ಕೊಟ್ಟಿದೆ. ಬಿಜೆಪಿಯವರು ಯಾವ ಪುರುಷಾರ್ಥಕ್ಕಾಗಿ ಕಾಂಗ್ರೆಸ್ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೋ ಗೊತ್ತಿಲ್ಲ. ಎಲ್ಲ ವರ್ಗದವರು ಸೇರಿ ಕಟ್ಟಿದ ಕಾಂಗ್ರೆಸ್ ಪಕ್ಷ, ಇಲ್ಲಿ ನ್ಯಾಯ, ಧರ್ಮ, ನೀತಿ ಬದ್ದತೆ ಸಿಗುವ ಪಕ್ಷ, ಆದರೆ ಬೇರೆ ಪಕ್ಷಗಳಲ್ಲಿ ವಿಷಬೀಜ ಬಿತ್ತಿ ಜಾತಿಜಾತಿಗಳ ನಡುವೆ ಎತ್ತಿಕಟ್ಟುವ ಕೆಲಸ ಮಾಡುತ್ತಿವೆ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.
ಕಾಮಗಾರಿಗಳಿಗೆ ಭೂಮಿಪೂಜೆ :
ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಾಣ ಹಂತದಲ್ಲಿರುವ ಕೆಪಿಎಸ್ ಶಾಲಾ ಕಟ್ಟಡವನ್ನು ವೀಕ್ಷಿಸಿದರು. ಲಕ್ಕೋಜನಹಳ್ಳಿ ಗ್ರಾಮದಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ನಿರ್ಮಿಸಿರುವ ಕಾಂಕ್ರೀಟ್ ರಸ್ತೆಗೆ ಚಾಲನೆ, ಬಿಎಂಐಸಿಪಿ ಅನುದಾನದಲ್ಲಿ ಬನ್ನಿಕುಪ್ಪೆ ಕೆರೆ ಅಭಿವೃದ್ಧಿ, ಹೊಸದೊಡ್ಡಿ ಗ್ರಾಮದಲ್ಲಿ ಎಂಪಿಸಿಎಸ್ ಕಟ್ಟಡಕ್ಕೆ ಭೂಮಿಪೂಜೆ ಸೇರಿದಂತೆ ಚೌಡಯ್ಯನದೊಡ್ಡಿ, ವಡ್ಡರದೊಡ್ಡಿ, ನಂಜಾಪುರ, ಕಾಡನಕುಪ್ಪೆ, ಜಕ್ಕನಹಳ್ಳಿ, ಲಕ್ಕಪ್ಪನ ಹಳ್ಳಿ, ಮರಿಸಿದ್ದೇಗೌಡನ ದೊಡ್ಡಿ, ಲಾಲನಾಯಕನದೊಡ್ಡಿ ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.ಈ ವೇಳೆ ಗ್ಯಾರಂಟಿ ಸಮಿತಿ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ.ರಾಜು, ಕೆಎಂಎಪ್ ಮಾಜಿ ಅಧ್ಯಕ್ಷ ಪಿ.ನಾಗರಾಜು, ರಾಮನಗರ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಹೆಚ್.ರಾಜು, ಮಾಜಿ ಅಧ್ಯಕ್ಷ ಜಯಣ್ಣ, ಟಿಎಪಿಸಿಎಂಎಸ್ ನಿರ್ದೇಶಕ ಶಂಕರ್, ಬನ್ನಿಕುಪ್ಪೆ ಗ್ರಾಪಂ ಮಾಜಿ ಅಧ್ಯಕ್ಷರಾದ ಹೇಮಂತ್, ರವಿಕುಮಾರ್ ಮುಖಂಡರಾದ ಅಂಕನಹಳ್ಳಿ ಮಹೇಶ್, ಸಿದ್ದು, ಉಮಾಶಂಕರ್, ಸುಂದರ್, ಸ್ವಾಮಿ ಶ್ರೀನಿವಾಸ್, ವೆಂಕಟೇಶ್ ಮತ್ತಿತರರು ಇದ್ದರು.
( ಕೋಟ್ ಅನ್ನು ಪ್ಯಾನಲ್‌ನಲ್ಲಿ ಬಳಸಿ)...ನಾನೊಬ್ಬ ರೈತನ ಮಗ, ನನ್ನ ಕ್ಷೇತ್ರದಲ್ಲಿ ನಗರ ಪ್ರದೇಶದ ಮಕ್ಕಳಂತೆ ಗ್ರಾಮೀಣ ಮಕ್ಕಳಿಗೂ ಸಮಾನ ಶಿಕ್ಷಣ ಕೊಡಬೇಕೆಂಬ ಚಿಂತನೆ ನನ್ನದು. ಹೀಗಾಗಿ ಪಾದರಹಳ್ಳಿ ಮತ್ತು ಅವ್ವೇರಹಳ್ಳಿಯಲ್ಲಿ ತಲಾ 12 ಕೋಟಿ ವೆಚ್ಚದಲ್ಲಿ ಕೆಪಿಎಸ್ ಶಾಲೆಗಳು ನಿರ್ಮಾಣ ಮಾಡಲಾಗಿದೆ. ಈ ಸಂಬಂಧ ಡಿಡಿಪಿಐ, ಬಿಇಒ ಅವರನ್ನೊಳಗೊಂಡ ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿ ಏಕ ರೀತಿಯ ಸಮವಸ್ತ್ರ, ಬಸ್ ವ್ಯವಸ್ಥೆ ಸೇರಿದಂತೆ ಎಲ್ಲ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ. ಈ ಶೈಕ್ಷಣಿಕ ವರ್ಷದಿಂದಲೇ ಕೆಪಿಎಸ್ ಶಾಲೆಗಳನ್ನು ಪ್ರಾರಂಭಿಸಲು ಎಲ್ಲ ಸಿದ್ದತೆ ಮಾಡಿಕೊಳ್ಳಲಾಗಿದೆ.
- ಇಕ್ಬಾಲ್ ಹುಸೇನ್ , ಶಾಸಕರು, ರಾಮನಗರ ಕ್ಷೇತ್ರ24ಕೆಆರ್ ಎಂಎನ್ 3.ಜೆಪಿಜಿ
ರಾಮನಗರ ತಾಲೂಕಿನ ಲಕ್ಕೋಜನಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆಯನ್ನು ಶಾಸಕ ಇಕ್ಬಾಲ್ ಹುಸೇನ್ ಉದ್ಘಾಟಿಸಿದರು.