ದೊಡ್ಡಬಳ್ಳಾಪುರ: ವರನಟ ಡಾ. ರಾಜ್ ಕುಮಾರ್ ಅವರ ಕಠಿಣ ಪರಿಶ್ರಮ, ಶಿಸ್ತುಬದ್ದ ಜೀವನ, ಪ್ರತಿಭೆಯು ಎಲ್ಲರಿಗೂ ಮಾದರಿಯಾಗಿದ್ದು, ಸಿನಿಮಾ ರಂಗಕ್ಕೆ ಅವರ ಕೊಡುಗೆ ಅವಿಸ್ಮರಣೀಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ. ಕೆ.ಎನ್ ಅನುರಾಧ ತಿಳಿಸಿದರು.
ಶುಕ್ರವಾರ ಇಲ್ಲಿನ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಇವರ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವರನಟ ಡಾ. ರಾಜ್ ಕುಮಾರ್ ಅವರ 97ನೇ ಜನ್ಮದಿನಾಚರಣೆಯಲ್ಲಿ ಡಾ. ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು.ಬಳಿಕ ಮಾತನಾಡಿದ ಅವರು, ಚಾಮರಾಜನಗರ ಗ್ರಾಮದಲ್ಲಿ ಜನಿಸಿದ ಅವರು ನಟನೆ ಹಾಗೂ ಹಾಡುಗಾರಿಕೆಯಲ್ಲಿ ಪ್ರತಿಭಾವಂತರಾಗಿದ್ದರು. ನಟನೆ, ಹಾಡುಗಾರಿಕೆಯ ಪ್ರತಿಭೆಯಿಂದ ಚಲನಚಿತ್ರ ರಂಗದಲ್ಲಿ ಇಂದಿಗೂ ಶಾಶ್ವತ ಮೇರು ನಟರಾಗಿದ್ದಾರೆ. ಚಲನಚಿತ್ರ ರಂಗದಲ್ಲಿ ಡಾ.ರಾಜ್ ಕುಮಾರ್ ಅವರ ಇತರೆ ಭಾಷೆಯ ಸಮಕಾಲೀನ ನಟರೆಲ್ಲರೂ ರಾಜಕೀಯ ರಂಗಕ್ಕೆ ಪ್ರವೇಶಿಸಿದರು. ಇವರು ಮಾತ್ರ ಚಲನಚಿತ್ರ ರಂಗ ಬಿಟ್ಟು ಹೋಗಲಿಲ್ಲ. ಅವರು ಅತ್ಯಂತ ಸರಳ ಜೀವಿ ಹಾಗೂ ಸರಳ ಜೀವನ ನಡೆಸಿದರು. ರಾಜಕುಮಾರ್ ಅವರು ಸರಳತೆ, ವಿನಯ, ಶಿಸ್ತು ಮತ್ತು ಮನುಷ್ಯತ್ವದ ಸಾಕಾರಮೂರ್ತಿಯಾಗಿದ್ದರು ಎಂದು ಸ್ಮರಿಸಿದರು.
ಅಭಿಮಾನಿಗಳನ್ನು ದೇವರು ಎಂದು ಕರೆದ ಅವರು, ಅಹಂಕಾರವಿಲ್ಲದ, ನಿರ್ಮಾಪಕರನ್ನು ಅನ್ನದಾತ ಎಂದು ಗೌರವಿಸುವ, ಅಪಾರ ಕಲಾಪ್ರೇಮ ಹೊಂದಿದ್ದ ಕನ್ನಡದ ಧ್ರುವತಾರೆ. ನಟನಾಗಿ ಮಾತ್ರವಲ್ಲದೆ ಗಾಯಕರಾಗಿ, ಸಾಂಸ್ಕೃತಿಕ ರಾಯಭಾರಿಯಾಗಿ, ಸರಳ ಜೀವನಶೈಲಿಯಿಂದ ಕೋಟ್ಯಂತರ ಜನರ ಆರಾಧ್ಯ ದೈವವಾಗಿ ಇಂದಿಗೂ ಅಮರರಾಗಿದ್ದಾರೆ. ಡಾ. ರಾಜ್ ಕುಮಾರ್ ಅವರ ಬದುಕು ಕೇವಲ ಸಿನಿಮಾಗೆ ಸೀಮಿತವಾಗದೆ, ಒಂದು ಆದರ್ಶ ಜೀವನಕ್ಕೆ ಮಾದರಿಯಾಗಿದೆ ಎಂದು ಹೇಳಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ರಮೇಶ್ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ದೈನಂದಿನ ಜೀವನಕ್ಕೆ ಅಳವಡಿಸಿಕೊಂಡು ಲಕ್ಷಾಂತರ ಜನರು ಸುಸಜ್ಜಿತವಾದ ಜೀವನವನ್ನು ನಡೆಸುತ್ತಿದ್ದಾರೆ. ಕನ್ನಡ ಚಿತ್ರರಂಗಕ್ಕೆ ವರನಟ ಡಾ. ರಾಜ್ ಕುಮಾರ್ ವಿಶ್ವಕೋಶ ಇದ್ದಂತೆ. ಅದ್ಭುತ ಅಭಿನಯದ ಜತೆಗೆ ಪಾತ್ರಗಳಿಗೆ ಜೀವ ತುಂಬುವ ನಟರಾಗಿದ್ದರು. ಅವರ ಸಿನಿಮಾಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಬದಲಾವಣೆ ತರುತ್ತೆ. ಅವರ ಬಂಗಾರದ ಮನುಷ್ಯ ಸಿನಿಮಾದಿಂದ ಪ್ರೇರಣೆಗೊಂಡು ಅದೇಷ್ಟೋ ಜನರು ಕೃಷಿ ಕೆಲಸದತ್ತ ಮುಖ ಮಾಡಿದ್ದರು. ಆಗ ಕೃಷಿ ಕೆಲಸಕ್ಕೆ ಪ್ರೋತ್ಸಾಹ ಸಿಕ್ಕಿತು. ಕನ್ನಡ ಚಿತ್ರರಂಗದಲ್ಲಿ ಅವರನ್ನ ಮೀರಿಸುವ ನಟ ಯಾರು ಇಲ್ಲ. ನಾವು ಅವರ ಸರಳ ಜೀವನ ಮತ್ತು ಮಾರ್ಗದರ್ಶನವನ್ನು ನಮ್ಮ ಜೀವನದಲ್ಲಿ ಅನುಸರಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ವರನಟ ಡಾ. ರಾಜ್ ಕುಮಾರ್ ಅವರ ಗೀತಗಾಯನ ನಡೆಯಿತು. ಅಪರ ಜಿಲ್ಲಾಧಿಕಾರಿ ಸೈಯಿದ ಅಯಿಷಾ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕ ವಿಠ್ಠಲ್ ಕಾವ್ಳೆ, ಯೋಜನಾಧಿಕಾರಿ ರಾಮಕೃಷ್ಣಯ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕ ಅಶೋಕ್ ಕುಮಾರ್ ಡಿ, ಡಿವೈಎಸ್ಪಿ ಪಾಂಡುರಂಗ, ಕೃಷಿ ಜಂಟಿ ನಿರ್ದೇಶಕಿ ಕಲಾವತಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು
ಉಪಸ್ಥಿತರಿದ್ದರು.
24ಕೆಡಿಬಿಪಿ1- ಬೆಂ.ಗ್ರಾ ಜಿಲ್ಲಾಡಳಿತ ಭವನದಲ್ಲಿ ವರನಟ ಡಾ.ರಾಜ್‌ಕುಮಾರ್ ಜನ್ಮದಿನಾಚರಣೆ ಕಾರ್ಯಕ್ರಮ ನಡೆಯಿತು.