ರಾಮನಗರ: ಜಿಲ್ಲೆಯ 31 ಗ್ರಾಮ ಪಂಚಾಯ್ತಿಗಳ 46 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಅಲ್ಲಿ ಟ್ಯಾಂಕರ್ ಮತ್ತು ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಮಸ್ಯೆ ಮತ್ತಷ್ಟು ಉಲ್ಬಣವಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ. ಮಂಜುನಾಥ್ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಪರಿಶೀಲಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 126 ಗ್ರಾಮ ಪಂಚಾಯ್ತಿಗಳಿದ್ದು, 1,520 ಗ್ರಾಮಗಳಿವೆ. ಕಳೆದ ಮಾರ್ಚ್-ಏಪ್ರಿಲ್ ಮಾಹೆಯ ಬೇಸಿಗೆ ಅವಧಿಯಲ್ಲಿ ಜಿಲ್ಲೆಯ 115 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಪ್ರಸ್ತುತ 31 ಗ್ರಾಮ ಪಂಚಾಯ್ತಿಗಳ 46 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಕಂಡುಬಂದಿದೆ ಎಂದರು.ಚನ್ನಪಟ್ಟಣ ತಾಲ್ಲೂಕಿನ 3 ಗ್ರಾಮ ಪಂಚಾಯತಿಗಳ ಪೈಕಿ 4 ಗ್ರಾಮಗಳಲ್ಲಿ, ಹಾರೋಹಳ್ಳಿ ತಾಲೂಕಿನ 5 ಗ್ರಾಮ ಪಂಚಾರತಿಗಳ ಪೈಕಿ 7 ಗ್ರಾಮಗಳಲ್ಲಿ, ಕನಕಪುರ ತಾಲೂಕಿನ 10 ಗ್ರಾಮ ಪಂಚಾಯತಿಗಳ ಪೈಕಿ 19 ಗ್ರಾಮಗಳಲ್ಲಿ, ಮಾಗಡಿ ತಾಲೂಕಿನ 10 ಗ್ರಾಮ ಪಂಚಾಯತಿಗಳ ಪೈಕಿ 13 ಗ್ರಾಮಗಳಲ್ಲಿ ಹಾಗೂ ರಾಮನಗರ ತಾಲೂಕಿನ 3 ಗ್ರಾಮ ಪಂಚಾಯತಿಗಳ ಪೈಕಿ 3 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ 46 ಗ್ರಾಮಗಳ ಪೈಕಿ 8 ಗ್ರಾಮಗಳಲ್ಲಿ ಖಾಸಗಿ ಟ್ಯಾಂಕರ್ ಮೂಲಕ ಹಾಗೂ 40 ಗ್ರಾಮಗಳಲ್ಲಿ ಖಾಸಗಿ ಕೊಳವೆಬಾವಿಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಸಮಸ್ಯೆಗೆ ಶಾಶ್ವತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯ ನಗರ ವ್ಯಾಪ್ತಿಯಲ್ಲಿ ಪ್ರಸ್ತುತ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿರುವುದಿಲ್ಲ ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರಿನ ಗುಣಮಟ್ಟವನ್ನು ನಿಯಮಿತವಾಗಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಪರೀಕ್ಷಿಸಿ ವರದಿ ನೀಡಬೇಕು. ಕುಡಿಯುವ ನೀರಿನ ಪೂರೈಕೆಯಲ್ಲಿನ ಮಾನದಂಡಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಜಿಲ್ಲೆಯಲ್ಲಿ ಅವಶ್ಯವಿರುವ ಬಿತ್ತನೆ ಬೀಜ, ರಸಗೊಬ್ಬರ, ಮೇವಿನ ಲಭ್ಯತೆ ಕುರಿತು ಪರಿಶೀಲಿಸಿದ ಕಾರ್ಯದರ್ಶಿಗಳು ಸಂಬಂಧಿಸಿದ ಇಲಾಖೆ ಅಧಿಕಾರಿಗಳು, ಜಿಲ್ಲೆಯ ಪರಿಸ್ಥಿತಿಗನುಗುಣವಾಗಿ ಮುಂಚಿತವಾಗಿ ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಬೇಕು ಎಂದರು.
ಒಂದು ಕೆರೆ ಮಾತ್ರ ಭರ್ತಿ:
ಬೆಂಗಳೂರು ನಗರ ಜಿಲ್ಲೆಗೆ ಹೊಂದಿಕೊಂಡಂತಿರುವ ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಕೃಷಿಯಲ್ಲಿ ನವ ತಂತ್ರಜ್ಞಾನವನ್ನು ಬಳಸಿಕೊಂಡು ವಿನೂತನ ಕ್ರಮಗಳನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ಹಮ್ಮಿಕೊಳ್ಳಬೇಕು. ಜಿಲ್ಲೆಯಲ್ಲಿ ಕಳೆದ 10 ವರ್ಷಗಳಲ್ಲಿ ಬದಲಾದ ಕೃಷಿ ಪರಿಸ್ಥಿತಿಯ ಅಂಕಿ ಅಂಶಗಳನ್ನು ಮುಂದಿನ ಸಭೆಗೆ ನಿಖರವಾಗಿ ಮಾಹಿತಿ ನೀಡಬೇಕೆಂದು ಮಂಜುನಾಥ್ ತಿಳಿಸಿದರು.
ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಜಿಲ್ಲೆಯ 102 ಕೆರೆಗಳೂ 2022ರಲ್ಲಿ ತುಂಬಿತ್ತು. ಪ್ರಸ್ತುತ ವರ್ಷದಲ್ಲಿ ಒಂದು ಕೆರೆ ಮಾತ್ರ ತುಂಬಿರುತ್ತದೆ. ಕೆರೆಯ ಬದಿಗಳಲ್ಲಿ ಗಿಡಗಳನ್ನು ನೆಡಬೇಕು. ಕೆರೆಗಳಿಗೆ ನೀರು ಬರುವ ಸಂಪರ್ಕ ಮಾರ್ಗಗಳಾದ ನಾಲೆಗಳು, ಕಾಲುವೆಗಳ ರಕ್ಷಣೆ ಸಂಬಂಧಿಸಿದ ಇಲಾಖೆಗಳ ಜವಾಬ್ದಾರಿಯಾಗಿರುತ್ತದೆ. ಕೆರೆಗಳು ತುಂಬಿದ್ದರೆ ಒತ್ತುವರಿಯಾಗುವುದಿಲ್ಲ. ಆದ್ದರಿಂದ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಬೇಕು ಎಂದರು.ಅಗತ್ಯ ಭೂಮಿ ಒದಗಿಸಲು ಕ್ರಮ:
ಜಿಲ್ಲೆಯಲ್ಲಿರುವ ಸರ್ಕಾರಿ ಭೂಮಿ, ಸರ್ಕಾರಿ ಕಟ್ಟಡಗಳು ಹಾಗೂ ಸಮಾಜ ಕಲ್ಯಾಣ, ಹಿಂದುಳಿದ, ಶಾಲಾ ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಇಲಾಖೆಯಡಿ ಸೇರಿದಂತೆ ವಿವಿಧ ಇಲಾಖೆಗಳಡಿ ಬರುವ ವಿದ್ಯಾರ್ಥಿ ನಿಲಯಗಳು ಶಾಲಾ ಕಟ್ಟಡಗಳು, ಅಂಗನವಾಡಿ ಕಟ್ಟಡಗಳು, ಆಸ್ಪತ್ರೆಗಳು ಸರ್ಕಾರದ ಹೆಸರಿನಲ್ಲಿಯೇ ಪಾಣಿ, ಇ-ಖಾತಾ ಇದೆಯೇ ಎಂಬುದನ್ನು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಮುಂದಿನ ಸಭೆಯೊಳಗೆ ಪೂರ್ಣ ಮಾಹಿತಿ ನೀಡಬೇಕು. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳು, ಅಂಗನವಾಡಿ ಕಟ್ಟಡಗಳಿಗೆ ಅಗತ್ಯವಾದ ಭೂಮಿ ಹಾಗೂ ಕಟ್ಟಡವನ್ನು ಒದಗಿಸಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳೂ ಅವಶ್ಯವಿರುವ ಮಾಹಿತಿ ವರದಿಯನ್ನು ಸಲ್ಲಿಸಿದರೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.ಜಿಲ್ಲೆಯಲ್ಲಿ ಕಸ ವಿಲೇವಾರಿ, ತ್ಯಾಜ್ಯ ನಿರ್ವಹಣಾ ಕಾರ್ಯವು ಸಮರ್ಪಕವಾಗಿ ನಿರ್ವಹಿಸಬೇಕು. ಪರಿಸರ ಉಳಿಯು ಪ್ರತೀ ಜೀವಿಯ ಉಳಿವಾಗಿರುವುದರಿಂದ ಜಿಲ್ಲೆಯ ನೈಸರ್ಗಿಕ ಪರಿಸರ, ಕೆರೆ, ಭೂಮಿ, ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯು ಮುಖ್ಯಮಂತ್ರಿಗಳ ಕ್ಷೇತ್ರವಾಗಿರುವುದರಿಂದ ಪ್ರತಿಯೊಬ್ಬ ಅಧಿಕಾರಿಯು ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರೊಂದಿಗೆ ಉತ್ತಮ ಸಂಪರ್ಕ ಹೊಂದಬೇಕು. ಕಚೇರಿ ಕೆಲಸಕ್ಕೆ ಸೀಮಿತವಾಗದೆ ಕ್ಷೇತ್ರ ಭೇಟಿ ನೀಡಬೇಕು ಎಂದು ಮಂಜುನಾಥ್ ಹೇಳಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಆರ್.ಚಂದ್ರಯ್ಯ, ಎಲ್ಲಾ ತಾಲೂಕಿನ ತಹಸೀಲ್ದಾರರು, ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.5ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಗಂಣದಲ್ಲಿ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜೆ.ಮಂಜುನಾಥ್ ಅವರು ಜಿಲ್ಲೆಯ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳ ಸಭೆ ನಡೆಸಿದರು.