ಚಿಕ್ಕಮಗಳೂರುತಾಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಶಸ್ವಿ ಮಾದರಿ ಶಾಲೆಗಳ ಉತ್ತಮ ಸಾಧನೆಗಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
- ಹಳ್ಳಿ ಶಾಲೆ ಯಶೋಗಾಥೆ ದೆಹಲಿಗೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುತಾಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಯಶಸ್ವಿ ಮಾದರಿ ಶಾಲೆಗಳ ಉತ್ತಮ ಸಾಧನೆಗಾಗಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಎಜುಕೇಶನ್ ಪ್ಲಾನಿಂಗ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ನಡೆಸುವ ಸರ್ಕಾರಿ ಹಾಗೂ ಅನು ದಾನಿತ ಶಾಲೆಗಳ ‘ಯಶಸ್ವಿ ಶಾಲಾ ನಾಯಕತ್ವ ರಾಷ್ಟ್ರೀಯ ಸಮಾವೇಶ’ಕ್ಕೆ ಮಾದರಿ ಶಾಲೆ ಅತ್ಯುತ್ತಮ ಅಭ್ಯಾಸಗಳ ಅಡಿ ಈ ಶಾಲೆ ಆಯ್ಕೆಯಾಗಿದ್ದು, ಸಮಾವೇಶದಲ್ಲಿ ಶಾಲೆ ಯಶೋಗಾಥೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗುತ್ತಿದೆ. ವಿಕಸಿತ ಭಾರತ-2047 ಸೃಜನಶೀಲ ಹಾದಿಗೆ ಪೂರಕವಾಗಿ ಎನ್‌ಐಇಪಿಎಯಿಂದ ಆಯೋಜನೆಗೊಳ್ಳುವ ‘ಯಶಸ್ವಿ ಶಾಲಾ ನಾಯಕತ್ವ’ ರಾಷ್ಟ್ರೀಯ ಸಮಾವೇಶಕ್ಕಾಗಿ ದೇಶದಾದ್ಯಂತ 300ಕ್ಕೂ ಹೆಚ್ಚು ಶಾಲೆಗಳು ನಾಮ ನಿರ್ದೇಶನಗೊಂಡಿದ್ದು, ಇದರಲ್ಲಿ 55 ಮಾದರಿ ಶಾಲೆಗಳನ್ನು ಆಯ್ಕೆ ಮಾಡಿದ್ದರೆ, ರಾಜ್ಯದಿಂದ ಆಯ್ಕೆ ಮಾಡಿದ ಎರಡು ಶಾಲೆಗಳಲ್ಲಿ ಚಿಕ್ಕ ಮಗಳೂರು ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಹೂದಲಮನೆ ಸರ್ಕಾರಿ ಪ್ರೌಢಶಾಲೆ ಆಯ್ಕೆಗೊಂಡಿವೆ. ಆಯಾ ಶಾಲೆ ಮುಖ್ಯೋಪಾಧ್ಯಾಯರು ಈ ಸಮಾವೇಶದಲ್ಲಿ ಭಾಗವಹಿಸಿ ಶಾಲೆ ಯಶೋಗಾಥೆಯನ್ನು ಕುರಿತು 15 ನಿಮಿಷಗಳ ಕಾಲ ಪ್ರಾತ್ಯಕ್ಷಿಕೆ ನೀಡಲಿದ್ದಾರೆ.75 ವರ್ಷಗಳ ಇತಿಹಾಸವಿರುವ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ1951 ರಲ್ಲಿ ಕೂಲಿಮಠ ಹೆಸರಿನಲ್ಲಿ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನದೇಗುಲವಾಗಿತ್ತು. ಹಂಗರವಳ್ಳಿ ಸುತ್ತ ಮುತ್ತಲಿನ ಹತ್ತಾರು ಗ್ರಾಮ ಗಳಿಂದ ವಿದ್ಯಾರ್ಥಿಗಳು ಶಾಲೆಗೆ ಬಂದು ವಿದ್ಯಾಭ್ಯಾಸ ಮಾಡುತ್ತಿದ್ದರು. ಕ್ರಮೇಣ ಖಾಸಗಿ ಕಾನ್ವೆಂಟ್ ಶಾಲೆಗಳ ಹೊಡೆ ತಕ್ಕೆ ಸಿಲುಕಿ 2018 ರ ವೇಳೆಗೆ ಕೇವಲ 13 ಮಕ್ಕಳ ದಾಖಲಾತಿಯೊಂದಿಗೆ ಮುಚ್ಚುವ ಹಂತ ತಲುಪಿತ್ತು.ಈ ಶಾಲೆಯಲ್ಲಿ ಕಲಿತ ಹಳೆ ವಿದ್ಯಾರ್ಥಿಗಳು, ಗ್ರಾಮಸ್ಥರು ಶಾಲೆ ಉಳಿಸಲು ಪಣತೊಟ್ಟು, ‘ಶ್ರೀ ಉದ್ದಂಡೇಶ್ವರ ಶಿಕ್ಷಣ ಸೇವಾ ಟ್ರಸ್ಟ್’ ಸ್ಥಾಪಿಸಿ ಸರ್ಕಾರಿ ಶಾಲೆಯಲ್ಲಿಯೇ ಸರ್ಕಾರದ ಅನುಮತಿಯೊಂದಿಗೆ ಎಲ್.ಕೆ.ಜಿ, ಯುಕೆಜಿ ಶಿಕ್ಷಣ ಆರಂಭಿಸಿ ಕ್ರಮೇಣ ದ್ವಿಭಾಷಾ ಮಾಧ್ಯಮದಲ್ಲಿ ಬೋಧನೆ ಆರಂಭಿಸಲಾಯಿತು. ಸಂದರ್ಶನದ ಮೂಲಕ ಖಾಸಗಿ ಶಿಕ್ಷಕರನ್ನು ಈ ಶಾಲೆಗೆ ನೇಮಿಸಿ ಟ್ರಸ್ಟ್ ಮೂಲಕ ವೇತನ ನೀಡಲಾಯಿತು. ವಿದ್ಯಾರ್ಥಿಗಳ ಪ್ರಯಾಣಕ್ಕಾಗಿ ದಾನಿಗಳ ನೆರವಿನಿಂದ 2 ಬಸ್ ವ್ಯವಸ್ಥೆ ಕಲ್ಪಿಸಲಾಯಿತು. ಸರ್ಕಾರ ನೀಡುವ ಸಮವಸ್ತ್ರದ ಜೊತೆಗೆ ಹೆಚ್ಚು ವರಿಯಾಗಿ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ನೋಟ್‌ಬುಕ್ ಮತ್ತು ಲೇಖನ ಸಾಮಗ್ರಿಗಳನ್ನು ಟ್ರಸ್ಟ್ ಮೂಲಕ ನೀಡಲಾ ಗುತ್ತಿದೆ. ಅಳಿವಿನಂಚಿನಲ್ಲಿದ್ದ ಶಾಲೆ ಕ್ರಮೇಣ ವಿದ್ಯಾರ್ಥಿಗಳ ದಾಖಲಾತಿಯಲ್ಲಿ ಏರಿಕೆ ಕಂಡು ಪ್ರಸಕ್ತ ವರ್ಷ 265 ವಿದ್ಯಾರ್ಥಿ ಗಳು ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿದ್ದಾರೆ. ಹಳೆ ಕಟ್ಟಡದ ಮೂಲ ಸೌಕರ್ಯಗಳ ಕೊರತೆ ಮನಗಂಡ ಗ್ರಾಮಸ್ಥರು, ಟ್ರಸ್ಟ್‌ನ ಪದಾಧಿಕಾರಿಗಳು ಸರ್ಕಾರದ ವಿವಿಧ ಇಲಾಖೆಗಳಿಂದ ₹4 ಕೋಟಿ ಮೊತ್ತದ ನೆರವು ಪಡೆದು 3 ಅಂತಸ್ತಿನ ಕಟ್ಟಡ ನಿರ್ಮಿಸುತ್ತಿದ್ದು, ನೂತನ ಕಟ್ಟಡ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿದೆ.ಪ್ರಸ್ತುತ ಶಾಲೆಯಲ್ಲಿ ವಿಶಾಲ ಬೋಧನಾ ಕೊಠಡಿಗಳು, ಸುಸಜ್ಜಿತ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, 500 ಆಸನ ವುಳ್ಳ ಆಡಿಟೋರಿಯಂ, ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ, ಶಿಕ್ಷಕರಿಗೆ ಪ್ರತ್ಯೇಕ ಕೊಠಡಿಗಳಿವೆ. 60 ಸಿ.ಸಿ. ಕ್ಯಾಮೆರಾಗಳನ್ನು ದಾನಿಗಳೊಬ್ಬರು ಅಳವಡಿಸಿದ್ದಾರೆ. ಪ್ರಸ್ತುತ ಸರ್ಕಾರಿ, ಅತಿಥಿ ಹಾಗೂ ಹೊರ ಸಂಪನ್ಮೂಲದ ಮೂಲಕ 13 ಶಿಕ್ಷಕರಿದ್ದಾರೆ. ಶಾಲೆಗೆ 265 ವಿದ್ಯಾರ್ಥಿಗಳು ದಾಖಲಾಗಿದ್ದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಪ್ರತೀ ಮಾಹೆ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಸಭೆಯನ್ನು ಟ್ರಸ್ಟ್‌ನ ಪದಾಧಿಕಾರಿಗಳೊಂದಿಗೆ ನಡೆಸಿ ಪ್ರತಿ ವಿದ್ಯಾರ್ಥಿಯ ಪ್ರಗತಿ ಪರಿಶೀಲಿಸಲಾಗುತ್ತಿದೆ.ಈ ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಕಲಿಕೆ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದು, ಇಂಗ್ಲಿಷ್‌ನಲ್ಲಿ ನಿರರ್ಗಳವಾಗಿ ಸಂವಹನ ನಡೆಸುವ ಕೌಶಲ ಹೊಂದಿದ್ದಾರೆ. ಇದರಿಂದ ಖಾಸಗಿ ಕಾನ್ವೆಂಟ್‌ಗಳಿಂದ ಮಕ್ಕಳನ್ನು ಬಿಡಿಸಿ ಈ ಸರ್ಕಾರಿ ಶಾಲೆಗೆ ಸ್ಥಳೀಯರು ಸೇರಿಸುತ್ತಿದ್ದಾರೆ. ಇದರಿಂದ ಪ್ರತಿ ಪೋಷಕರಿಗೆ ವಾರ್ಷಿಕವಾಗಿ ಕನಿಷ್ಠ ಒಂದುವರೆ ಲಕ್ಷ ಉಳಿತಾಯವಾಗುತ್ತಿದೆ.ಒಟ್ಟಾರೆ, ಗುಣಮಟ್ಟದ ಶಿಕ್ಷಣ, ಅತ್ಯಾಕರ್ಷಕ ಕಟ್ಟಡದಲ್ಲಿ ಮೂಲಭೂತ ಸೌಕರ್ಯ, ಬಸ್‌ಸೌಕರ್ಯ, ದ್ವಿಭಾಷಾ ಮಾಧ್ಯಮ ದಲ್ಲಿ ಬೋಧನೆ, ಟ್ರಸ್ಟ್‌ನ ಸಮಗ್ರ ಮೇಲ್ವಿಚಾರಣೆಯಿಂದ ಸಮುದಾಯದವರ ಭಾಗವಹಿಸುವಿಕೆಯಿಂದ ಮುಚ್ಚುವ ಹಂತ ದಲ್ಲಿದ್ದ ಕುಗ್ರಾಮದ ಶಾಲೆ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಿ, ಸಾಧನೆ ಹಾದಿಯಲ್ಲಿ ಸಾಗುತ್ತಿದೆ. 9 ಕೆಸಿಕೆಎಂ 4ಚಿಕ್ಕಮಗಳೂರು ತಾಲೂಕಿನ ಹಂಗರವಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.