2020ರಿಂದ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಜಾತ್ರೆ ಪ್ರಯುಕ್ತ ಆರೋಗ್ಯ ಮೇಳ, ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ವರ್ಷ ಕಿತ್ತೂರು ಚೆನ್ನಮ್ಮ ವಿಜಯೋತ್ಸವದ ಸಮಾರೋಪ ಪ್ರಮುಖವಾಗಿದೆ.

ಹುಬ್ಬಳ್ಳಿ:

ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಜ.15ರಂದು ‘ಹರ ಜಾತ್ರಾ ಮಹೋತ್ಸವ’ವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಈ ವರ್ಷದಿಂದ ಸಾಧಕರೊಬ್ಬರಿಗೆ ಕಿತ್ತೂರುರಾಣಿ ಚೆನ್ನಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಶಸ್ತಿಯನ್ನು ಮಹಿಳೆಯರು ಮಾತ್ರವಲ್ಲದೆ ಪುರುಷರಿಗೂ ನೀಡಲಾಗುವುದು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯಮಟ್ಟದ ಸಾಧಕರನ್ನು ಗುರುತಿಸಲಾಗುವುದು. ಪ್ರಶಸ್ತಿ ಆಯ್ಕೆಗೆ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲೇ ಹೆಸರು ಪ್ರಕಟಿಸಲಾಗುವುದು ಎಂದು ಹೇಳಿದರು.

2020ರಿಂದ ಜಾತ್ರಾ ಮಹೋತ್ಸವವನ್ನು ನಡೆಸಲಾಗುತ್ತಿದೆ. ಜಾತ್ರೆ ಪ್ರಯುಕ್ತ ಆರೋಗ್ಯ ಮೇಳ, ಉದ್ಯೋಗ ಮೇಳ ಆಯೋಜಿಸಲಾಗಿತ್ತು. ಈ ವರ್ಷ ಕಿತ್ತೂರು ಚೆನ್ನಮ್ಮ ವಿಜಯೋತ್ಸವದ ಸಮಾರೋಪ ಪ್ರಮುಖವಾಗಿದೆ ಎಂದರು.

ಕಾಂಗ್ರೆಸ್ ಮುಖಂಡ ಮೋಹನ್ ಲಿಂಬಿಕಾಯಿ ಮಾತನಾಡಿ, ಹರ ಜಾತ್ರೆಯ ಪೂರ್ವದಲ್ಲಿ ಯೋಗ ಕಾರ್ಯಕ್ರಮ ಮಾಡುವ ಮೂಲಕ ಸಮಾಜ ರೋಗಮುಕ್ತವಾಗಬೇಕು ಎಂಬ ಸದುದ್ದೇಶವನ್ನು ಸ್ವಾಮೀಜಿ ಹೊಂದಿದ್ದಾರೆ. ಅವರು ಪೀಠಕ್ಕೆ ಬಂದ ನಂತರ ಜಾಗೃತಿ, ಪ್ರಗತಿಯ ಚಟುವಟಿಕೆಗಳು ನಡೆದಿವೆ ಎಂದು ಹೇಳಿದರು.

ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ಬಸವರಾಜ ವೀರಾಪುರ ಮಾತನಾಡಿ, ವಚನಾನಂದ ಸ್ವಾಮೀಜಿಯವರು ಪೀಠಕ್ಕೆ ಬಂದು 8 ವರ್ಷಗಳಾಗಿದ್ದು, ಇದೇ ಸಂದರ್ಭದಲ್ಲಿ ಅಷ್ಟಮ ವಾರ್ಷಿಕ ಪೀಠಾರೋಹಣ, ಮಹಾಂತ ಸ್ವಾಮೀಜಿಯವರ ಪುಣ್ಯಸ್ಮರಣೆ ಆಚರಿಸಲಾಗುವುದು ಎಂದರು.

ಗುರುಭವನ, ದಾಸೋಹ ಭವನ, ಹರ ಮಂದಿರ, ಧ್ಯಾನ ಮಂದಿರ ನಿರ್ಮಿಸಲಾಗಿದೆ. ಮುಂದಿನ ದಿನಗಳಲ್ಲಿ ಅತಿಥಿಗೃಹವನ್ನು ನಿರ್ಮಿಸಲಾಗುವುದು. ನಮ್ಮ ಕುಟುಂಬದಿಂದ ಶಾಶ್ವತ ನಿಧಿ ಸ್ಥಾಪಿಸಿ ಪ್ರತಿ ವರ್ಷ ಚೆನ್ನಮ್ಮ ಪ್ರಶಸ್ತಿ ನೀಡಲಾಗುವುದು ಎಂದು ಹೇಳಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಇದ್ದರು.

ಕಿತ್ತೂರು ರಾಣಿ ಚೆನ್ನಮ್ಮ ಅವರ ದ್ವಿಶತಮಾನದ ವಿಜಯೋತ್ಸವದ ಸ್ಮರಣಾರ್ಥ ಕೇಂದ್ರ ಸರ್ಕಾರ ₹200 ನಾಣ್ಯ ಬಿಡುಗಡೆ ಮಾಡಿರುವುದು ಖುಷಿಯ ಸಂಗತಿ. ಜಾತ್ರಾ ಮಹೋತ್ಸವದಂದು, ಚನ್ನಮ್ಮ ಅವರ ದ್ವಿಶತಮಾನ ವಿಜಯೋತ್ಸವದ ಸಮಾರೋಪ ಸಮಾರಂಭವೂ ನಡೆಯಲಿದೆ.