ಬೆಳಗ್ಗೆ ಎದ್ದು ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಅಮ್ಮನವರ ದರ್ಶನ ಭಾಗ್ಯ ಪಡೆದರು
ಮುನಿರಾಬಾದ: ಇಲ್ಲಿಯ ಪ್ರಸಿದ್ಧ ಪುಣ್ಯಕ್ಷೇತ್ರ ಶ್ರೀಹುಲಿಗೆಮ್ಮ ದೇವಸ್ಥಾನಕ್ಕೆ ಬನದ ಹುಣ್ಣಿಮೆ ಪ್ರಯುಕ್ತ ಶನಿವಾರ 4.5ಲಕ್ಷಕ್ಕೂ ಅಧಿಕ ಜನ ಭಕ್ತರು ಆಗಮಿಸಿ ದೇವಿಯ ದರ್ಶನ ಭಾಗ್ಯ ಪಡೆದುಕೊಂಡಿದ್ದಾರೆ.
ಶುಕ್ರವಾರ ರಾತ್ರಿಯಿಂದಲೇ ದೇವಸ್ಥಾನಕ್ಕೆ ಭಕ್ತಾದಿಗಳು ಆಗಮಿಸಲು ಪ್ರಾರಂಭಿಸಿದ್ದು, ಶುಕ್ರವಾರ ರಾತ್ರಿ ಸುಮಾರು 50,000 ಕ್ಕಿಂತ ಅಧಿಕ ಜನ ಭಕ್ತಾದಿಗಳು ದೇವಸ್ಥಾನದ ಮುಂಭಾಗದಲ್ಲಿರುವ ಶೆಡ್ಡಿನಲ್ಲಿ ಕೊರೆಯುವ ಚಳಿ ಲೆಕ್ಕಿಸದೆ ಮಲಗಿದರು. ಬೆಳಗ್ಗೆ ಎದ್ದು ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಅಮ್ಮನವರ ದರ್ಶನ ಭಾಗ್ಯ ಪಡೆದರು. ಬೆಳಗ್ಗೆ 10 ಗಂಟೆಗೆ ಸುಮಾರಿಗೆ 1ಲಕ್ಷ ಜನ ಭಕ್ತಾದಿಗಳು ಅಮ್ಮನ ದರ್ಶನ ಪಡೆದಿದ್ದರು.ಮಧ್ಯಾಹ್ನ 12ಗಂಟೆ ಸುಮಾರಿಗೆ 2ಲಕ್ಷಕ್ಕೂ ಅಧಿಕ ಜನ ಭಕ್ತಾದಿಗಳು ದೇವಿ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆ ವೇಳೆಗೆ ದೇಗುಲಕ್ಕೆ ಭೇಟಿ ನೀಡಿದ ಭಕ್ತರ ಸಂಖ್ಯೆ 3 ಲಕ್ಷ ದಾಟಿತ್ತು ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ. ಸಂಜೆ ವೇಳೆಗೆ ಅಮ್ಮನವರ ದರ್ಶನ ಪಡೆದ ಭಕ್ತರ ಸಂಖ್ಯೆ 4.5 ಲಕ್ಷ ತಲುಪಿತು.
ಅಮ್ಮನ ದರ್ಶನಕ್ಕೆ ಬಂದ ಲಕ್ಷಾಂತರ ಭಕ್ತರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆಯಿಂದ ವ್ಯಾಪಕ ಬಂದೋಬಸ್ತ್ ಮಾಡಲಾಯಿತು.ಶೌಚಾಲಯದ ಕೊರತೆ:ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಶೌಚಾಲಯದ ಕೊರತೆಯಿಂದ ಭಕ್ತಾದಿಗಳು ಭಾರಿ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಿದೆ.
ಹಿಟ್ನಾಳ್ ರಸ್ತೆಯಿಂದ ಹುಲಿಗಿ ರೈಲ್ವೆ ನಿಲ್ದಾಣದವರೆಗಿನ 3 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ಶೌಚಾಲಯವಿಲ್ಲ. ಸಾವಿರಾರು ಜನ ಭಕ್ತರು ಹಿಟ್ನಾಳ್ ಕತ್ತರಿಯಿಂದ ಹುಲಿಗೆಮ್ಮ ದೇವಸ್ಥಾನಕ್ಕೆ ನಡೆದುಕೊಂಡು ಬರುತ್ತಾರೆ. ಕಳೆದ ತಿಂಗಳು ಹುಲಿಗೆ ಗ್ರಾಮದಲ್ಲಿ ಅನಧಿಕೃತ ಕಟ್ಟಡಗಳ ತೆರವು ಕಾರ್ಯಾಚರಣೆ ಜಿಲ್ಲಾಡಳಿತ ಕೈಗೊಂಡಾಗ ರೈಲ್ವೆ ನಿಲ್ದಾಣದ ಮುಂದೆ ಕೋಟ್ಯಂತರ ಬೆಲೆಯ ಸರ್ಕಾರಿ ಆಸ್ತಿ ಪತ್ತೆಯಾಯಿತು. ಇದಲ್ಲದೆ ಹುಲಿಗೆಮ್ಮ ದೇವಸ್ಥಾನದ ರಾಜಬೀದಿಯಲ್ಲಿ ಹುಲಿಗಾಂಬಿಕ ಫಾಸ್ಟ್ ಪಕ್ಕದಲ್ಲಿ ಸಹ ಸರ್ಕಾರಿ ಆಸ್ತಿ ಪತ್ತೆಯಾಯಿತು. ಈ ಆಸ್ತಿಯು ಕೃಷಿ ಇಲಾಖೆಗೆ ಸೇರಿದ್ದು ಎನ್ನಲಾಗಿದೆ. ಆಡಳಿತ ಮಂಡಳಿಯು ಹುಲಿಗೆಮ್ಮದೇವಿ ಭಕ್ತರಿಗೆ ಮೂಲಭೂತ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಈ ಆಸ್ತಿ ದೇವಸ್ಥಾನ ಪ್ರಾಧಿಕಾರಕ್ಕೆ ನೀಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ಆಸ್ತಿಯು ದೇವಸ್ಥಾನ ಆಡಳಿತ ಮಂಡಳಿ ಕೈವಶವಾದರೆ ಇಲ್ಲಿ ಶೌಚಾಲಯ ನಿರ್ಮಿಸಲಾಗುವುದು ಎಂದು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಕಾಶ್ ರಾವ್ ಕನ್ನಡಪ್ರಭಕ್ಕೆ ತಿಳಿಸಿದರು.ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದು ವರ್ಷವಾದರೂ ಭಕ್ತರಿಗಾಗಿ ಇದುವರೆಗೂ ಹೊಸ ಶೌಚಾಲಯ ನಿರ್ಮಾಣವಾಗಿಲ್ಲ. ದೇವಸ್ಥಾನಕ್ಕೆ ಬರುವ ಬಹುತೇಕ ಮಹಿಳೆಯರು ಬಯಲು ಶೌಚಾಲಯ ಅವಲಂಬಿಸುತ್ತಾರೆ. ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದೆ. ಭಕ್ತರಿಗಾಗಿ ಶೌಚಾಲಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದೇವಸ್ಥಾನದ ಪ್ರಾಧಿಕಾರ ಆಸಕ್ತಿ ತೋರುತ್ತಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ. ಇನ್ನೂ ಹಲವಾರು ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ.