ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ಪೀಠದಲ್ಲಿ ಜ.15ರಂದು ಹರ ಜಾತ್ರಾಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಉತ್ಸವದ ಅಂಗವಾಗಿ ಸಾಧಕರಿಗೆ ರಾಣಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಹಾವೇರಿ: ದಾವಣಗೆರೆ ಜಿಲ್ಲೆ ಹರಿಹರದ ಪಂಚಮಸಾಲಿ ಪೀಠದಲ್ಲಿ ಜ.15ರಂದು ಹರ ಜಾತ್ರಾಮಹೋತ್ಸವ ಹಮ್ಮಿಕೊಳ್ಳಲಾಗಿದ್ದು, ಇದೇ ಮೊದಲ ಬಾರಿಗೆ ಉತ್ಸವದ ಅಂಗವಾಗಿ ಸಾಧಕರಿಗೆ ರಾಣಿ ಚನ್ನಮ್ಮ ಹೆಸರಿನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ಅವರು, ಈ ವರ್ಷ ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ಯುದ್ಧದಲ್ಲಿ ಜಯ ಗಳಿಸಿ 200 ವರ್ಷ ಸಂದಿವೆ. ನಮ್ಮ ಮನವಿಯ ಮೇರೆಗೆ ಕಿತ್ತೂರ ರಾಣಿ ಚನ್ನಮ್ಮರ ದ್ವಿಶತಮಾನ ವಿಜಯೋತ್ಸವದ ನಿಮಿತ್ತ ಕೇಂದ್ರ ಸರ್ಕಾರ ₹200 ಮುಖಬೆಲೆ ನಾಣ್ಯವನ್ನು ಬಿಡುಗಡೆ ಮಾಡಿದೆ. ಈ ವೇಳೆ ನಮ್ಮ ಪೀಠಾರೋಹಣಕ್ಕೆ ಎಂಟು ವರ್ಷಗಳು ಸಂದಿವೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.ತೇರು ಎಳೆಯುವ ಸಂಕಲ್ಪ..ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಪಾಟೀಲ ಮಾತನಾಡಿ, ವರ್ಷಕ್ಕೊಮ್ಮೆ ಸಮಾಜದ ಬಂಧುಗಳು ಸೇರಿ ವಿಜಯೋತ್ಸವ ಆಚರಿಸುವ ಹಿನ್ನಲೆಯಲ್ಲಿ ಹರ ಜಾತ್ರೆ ಆರಂಭಿಸಲಾಯಿತು. 2026ರ ಹರ ಜಾತ್ರೆಯ ಪ್ರಸಾದಕ್ಕಾಗಿ ಕೊಟ್ಟೂರು ಹಾಗೂ ಹೊಸಪೇಟೆಯ ಭಕ್ತರು ತಲಾ ಐದು ಸಾವಿರ ರೊಟ್ಟಿ ನೀಡುವ ಸಂಕಲ್ಪ ಮಾಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ 10 ಸಾವಿರ ಜನರು ಆಗಮಿಸುವ ನಿರೀಕ್ಷೆ ಇದೆ. ಅಲ್ಲದೇ ಮುಂದಿನ ವರ್ಷದ ಹರ ಜಾತ್ರೆಯಲ್ಲಿ ತೇರು ಎಳೆಯುವ ಸಂಕಲ್ಪ ಮಾಡಲಾಗಿದೆ ಎಂದರು.ಉತ್ತರಾಯಣ ಪುಣ್ಯ ಕಾಲಕ್ಕೆ ಸೂರ್ಯ ಪಥ ಬದಲಿಸುವ ಮಕರ ಸಂಕ್ರಾಂತಿ ಹಬ್ಬದ ದಿನ ನಡೆಯುವ ಹರಜಾತ್ರೆಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ 2026ರ ಹರ ಜಾತ್ರೆಯ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು. ಬಿ. ಶಂಕರ್, ಡಾ.ಬಸವರಾಜ ವೀರಾಪುರ, ಮಲ್ಲಿಕಾರ್ಜುನ ಅಗಡಿ, ಮಲ್ಲಿಕಾರ್ಜುನ ಹಾವೇರಿ, ವಸಂತಾ ಹುಲ್ಲತ್ತಿ, ನಾಗರತ್ನ ಗುಡಿಹಾಳ, ನಾಗೇಂದ್ರ ಮಾಳಿ, ನಂಜುಂಡೇಶ ಕಳ್ಳೇರ, ಪ್ರಭು ಭಿಷ್ಟನಗೌಡ್ರ ಇತರರು ಇದ್ದರು.