ಸಾರಾಂಶ
ವಿಪರೀತ ಕಮಿಷನ್, ಹೊರ ರಾಜ್ಯಗಳಿಂದ ಕಮ್ಮಿ ಸಂಬಳಕ್ಕೆ ಚಾಲಕರನ್ನು ಕರೆ ತರುತ್ತಿರುವ ಆನ್‌ಲೈನ್ ವಾಹನ ಬಾಡಿಗೆ ಆ್ಯಪ್‌ಗಳ ಕಿರುಕುಳಕ್ಕೆ ಬೇಸತ್ತು ದಯಾ ಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೊಂದ ಚಾಲಕರ ವೇದಿಕೆಯು ಪತ್ರ ಬರೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ವಿಪರೀತ ಕಮಿಷನ್, ಹೊರ ರಾಜ್ಯಗಳಿಂದ ಕಮ್ಮಿ ಸಂಬಳಕ್ಕೆ ಚಾಲಕರನ್ನು ಕರೆ ತರುತ್ತಿರುವ ಆನ್‌ಲೈನ್ ವಾಹನ ಬಾಡಿಗೆ ಆ್ಯಪ್‌ಗಳ ಕಿರುಕುಳಕ್ಕೆ ಬೇಸತ್ತು ದಯಾ ಮರಣ ನೀಡುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ನೊಂದ ಚಾಲಕರ ವೇದಿಕೆಯು ಪತ್ರ ಬರೆದಿದೆ.ಜನಪ್ರಿಯ ಆನ್‌ಲೈನ್ ವಾಹನ ಬಾಡಿಗೆ ಆ್ಯಪ್ ಕಂಪನಿಗಳು ಚಾಲಕರನ್ನು ವಿಪರೀತವಾಗಿ ಶೋಷಿಸುತ್ತಿವೆ. ಒಂದು ಬಾಡಿಗೆಗೆ ಶೇ. 30, 25 ಮತ್ತು 20 ರಷ್ಟು ಕಮಿಷನ್ ಪಡೆಯುತ್ತಿದ್ದು, ಚಾಲಕರಿಂದ ಸುಲಿಗೆ ಮಾಡುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದರೆ ವಾರಗಳ ಕಾಲ ಬಾಡಿಗೆ ಸಿಗದಂತೆ ಬ್ಲಾಕ್ ಲಿಸ್ಟ್‌ಗೆ ಸೇರಿಸುತ್ತಿವೆ. ಇದರಿಂದಾಗಿ ಚಾಲಕರು ಬದುಕು ನಡೆಸುವುದೇ ಕಷ್ಟವಾಗಿದೆ.
ರಾಜ್ಯಸರ್ಕಾರಕ್ಕೆ 30ಕ್ಕೂ ಹೆಚ್ಚು ಬಾರಿ ಮನವಿ ನೀಡಿ ಈ ಸಮಸ್ಯೆ ಪರಿಹರಿಸಲು ಕೋರಿದರೂ ಸ್ಪಂದಿಸುತ್ತಿಲ್ಲ. ಹೀಗಾಗಿ ದಯಾಮರಣ ನೀಡಿ ಎಂದು ಪತ್ರ ಬರೆಯಲಾಗುತ್ತಿದೆ. ಸುಮಾರು 2-3ಸಾವಿರ ಚಾಲಕರು ಪತ್ರ ಬರೆದಿದ್ದು, ಎಲ್ಲವನ್ನೂ ಗುರುವಾರ ರಾಷ್ಟ್ರಪತಿಗಳಿಗೆ ರವಾನಿಸಲಾಗುವುದು ಎಂದು ವೇದಿಕೆ ಅಧ್ಯಕ್ಷ ರಾಜು ಎನ್. ಹೇಳಿದರು.ವೈಟ್ ಬೋರ್ಡ್ ದ್ವಿಚಕ್ರ ವಾಹನವನ್ನು ಬಾಡಿಗೆಗೆ ಬಳಸುತ್ತಿರುವುದರಿಂದ ವಿಪರೀತ ತೊಂದರೆಯಾಗಿದೆ. ರಾಜ್ಯ ಸಾರಿಗೆ ಇಲಾಖೆ ಅಧಿಕಾರಿಗಳು ಆರ್‌ಟಿಓ ಅಧಿಕಾರಿಗಳು ಮತ್ತು ಆನ್ಲೈನ್ ಬಾಡಿಗೆ ಸಂಸ್ಥೆಗಳು ಒಳ ಒಪ್ಪಂದ ಮಾಡಿಕೊಂಡಿವೆ. ಈ ಕಂಪನಿಗಳು ಹೊರರಾಜ್ಯದಿಂದ ಕಡಿಮೆ ಬಾಡಿಗೆ ಪಡೆವ ಚಾಲಕರನ್ನು ಕರೆತಂದು ದುಡಿಸುತ್ತಿವೆ. ಎಲೆಕ್ಟ್ರಿಕ್ ವೆಹಿಕಲ್ಸ್ ಗೂಡ್ಸ್ ಮತ್ತು ಆಟೋ ಮತ್ತು ಕಾರ್ ಬಲ್ಕ್ ಅಟ್ಯಾಚ್ಮೆಂಟ್ ಮಾಡಿಕೊಂಡು ನಮ್ಮ ದುಡಿಮೆ ಕಿತ್ತುಕೊಳ್ಳುತ್ತಿವೆ ಎಂದು ದೂರಿದರು.