ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಪ್ರತಿಯೊಬ್ಬರು ಜೀವನದಲ್ಲಿ ಒಂದು ಗುರಿ ಇಟ್ಟುಕೊಳ್ಳಬೇಕು. ಆ ಗುರಿಯೆಡೆಗೆ ಪರಿಶ್ರಮದಿಂದ ಕಾರ್ಯ ನಿರ್ವಹಿಸಿದಾಗ ಪ್ರತಿಫಲ ಸಿಕ್ಕೇ ಸಿಗುತ್ತದೆ. ಗುರಿ ಇದ್ದರೆ ಸಾಧನೆ ಸಾಧ್ಯವಾಗುತ್ತದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಬಡಿಗೇರ ಹೇಳಿದರು.ಪಟ್ಟಣದ ತಾಪಂ ಕಾರ್ಯಾಲಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗ್ರಾಪಂಗಳಲ್ಲಿ 2025-26ನೇ ಸಾಲಿನಲ್ಲಿ ಕರ ವಸೂಲಿ, ನರೇಗಾ ಹಾಗೂ ಇನ್ನಿತರ ವಿಷಯಗಳಲ್ಲಿ ಸಾಧನೆ ಮಾಡಿರುವ ಅಧಿಕಾರಿ ಮತ್ತು ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವ ಹಾಗೂ ಪ್ರಶಂಸನಾ ಪತ್ರ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗುಳೇದಗುಡ್ಡ ತಾಪಂ ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದೆ. ತಾಪಂ ವ್ಯಾಪ್ತಿಯ ಕಟಗೇರಿ ಗ್ರಾಪಂ ಶ್ರೀ ಚಾಮುಂಡೇಶ್ವರಿ ಸಂಜೀವಿನಿ ಗ್ರಾಪಂ ಮಹಿಳಾ ಒಕ್ಕೂಟ ಕೇಂದ್ರ ಪುರಸ್ಕೃತ ಆತ್ಮ ನಿರ್ಭರ ಸಂಘಟನಾ ರಾಷ್ಟ್ರಮಟ್ಟದ ಪ್ರಶಸ್ತಿ ಪಡೆಯಿತು. ಕಟಗೇರಿ ಗ್ರಾಪಂ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪಡೆಯಿತು. 2025-26ನೇ ಸಾಲಿನಲ್ಲಿ ಗುಳೇದಗುಡ್ಡ ತಾಪಂ ವಿವಿಧ ವಿಭಾಗಗಳಲ್ಲಿ ಜಿಲ್ಲೆಗೆ ಪ್ರಥಮ ಬಂದಿದೆ. ಒಟ್ಟು 12 ಗ್ರಾಪಂಗಳಿಗೆ ₹1,48,35,163 ತೆರಿಗೆ ಬೇಡಿಕೆ ಸಂಗ್ರಹದ ಗುರಿ ನಿಗದಿಯಾಗಿತ್ತು. ಅದರಲ್ಲಿ ₹1,83,41,429 ತೆರಿಗೆ ಸಂಗ್ರಹಿಸಿ ಶೇ.123.63ರಷ್ಟು ಪ್ರಗತಿ ಸಾಧಿಸಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶೇ.93.93ರಷ್ಟು ಸಾಧನೆ ಮಾಡಿದೆ. ವಸತಿ ಯೋಜನೆ ಅಡಿಯಲ್ಲಿ 12 ಗ್ರಾಪಂಗಳು ಪ್ರಗತಿ ಸಾಧಿಸಿವೆ ಎಂದರು.
ನರೇಗಾ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕ ರಾಮಚಂದ್ರ ಮೇತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, ನರೇಗಾ ಯೋಜನೆಯಡಿ ಒಟ್ಟು 450000 ಮಾನವ ದಿನಗಳ ಗುರಿಗೆ ಎದುರಾಗಿ ಒಟ್ಟು 309492 ಮಾನವ ದಿನಗಳ ಸೃಜನೆ ಮಾಡಿ ಗುಳೇದಗುಡ್ಡ ತಾಪಂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದೆ. ಎಸ್.ಸಿ.ಪಿ. ಕೂಲಿಕಾರರಿಗೆ ಕೆಲಸ ನೀಡುವಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದೆ. ಇದಕ್ಕೆ ತಾಪಂ ಇಒ ಅವರ ಮಾರ್ಗದರ್ಶನ, ಗ್ರಾಪಂ ಸಿಬ್ಬಂದಿ ಪರಿಶ್ರಮ ಕಾರಣ ಎಂದರು.ಪಿಡಿಒ ಗೂಳಪ್ಪ ಹೊರಟ್ಟಿ, ಕಾರ್ಯದರ್ಶಿ ಶಂಕರ ಹುಲ್ಯಾಳ, ಸಂಗಮೇಶ ವಂದಾಲ, ಸಂತೋಷ ಲೋಕೂರ, ಶಿವಾನಂದ ಬನ್ನಿ ತಮ್ಮ ಅನುಭವಗಳನ್ನು ಹಂಚಿಕೊಂಡರು. 12 ಗ್ರಾಪಂಗಳ ಪಿಡಿಒ, ಕಾರ್ಯದರ್ಶಿಗಳು, ವಿವಿಧ ಶಾಖೆಗಳ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು. ತಾಪಂ ಯೋಜನಾಧಿಕಾರಿ ಶೇಖರ ಅಂಗಡಿ, ಪಿಡಿಒ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮಣ ಶಾಂತಗೇರಿ, ಪಿಡಿಒ ರಾಜನಾಳ, ಕೋಟಿ ವೇದಿಕೆ ಮೇಲಿದ್ದರು.