ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಮಹಿಳಾ ಮೀಸಲಾತಿಗೆ ವಿರೋಧ ಪಕ್ಷಗಳು ವಿರೋಧ ವ್ಯಕ್ತಪಡಿಸಿದ್ದು, ಅವರಿಗೆ ಮಹಿಳೆಯರ ಶಾಪ ತಟ್ಟುತ್ತದೆ ಎಂದು ಸಂಸದ ಪಿ.ಸಿ. ಗದ್ದಿಗೌಡರ ಹೇಳಿದರು.ಬಾಗಲಕೋಟೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೀಸಲಾತಿ ವಿಧೇಯಕ ಮಂಡನೆ ಆಗಿದ್ದರೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಮಹಿಳೆಯರು ಪ್ರತಿನಿಧಿಸುವ ಹಕ್ಕು ಇರುತ್ತಿತ್ತು. ಮಹಿಳಾ ಮೀಸಲಾತಿ ಜಾರಿಗೆ ತರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಅವರ ಕನಸಾಗಿತ್ತು. ಆದರೆ ವಿರೋಧ ಪಕ್ಷಗಳು ಅನಾವಶ್ಯಕವಾಗಿ ಮಸೂದೆ ತಡೆಗಟ್ಟಿ ಮಹಿಳೆಯರನ್ನು ಕಡೆಗಣಿಸಿದ್ದಾರೆ, ಮಹಿಳೆಯರ ಸ್ವಾತಂತ್ರ್ಯ ಹತ್ತಿಕ್ಕುವಲ್ಲಿ ವಿರೋಧ ಪಕ್ಷಗಳು ಒಂದಾಗಿವೆ. ಸ್ವಾರ್ಥ ರಾಜಕಾರಣದಿಂದ ಮಹಿಳೆಯರನ್ನು ಇಂಡಿ ಕೂಟ ಬಲಿಪಶು ಮಾಡುತ್ತಿದೆ ಎಂದು ಆಪಾದಿಸಿದರು.

ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಬಿಜೆಪಿ ಸೇರ್ಪಡೆ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದು, ಐದು ರಾಜ್ಯಗಳ ಚುನಾವಣೆ ನಂತರ ಸ್ಪಷ್ಟ ರಾಜಕೀಯ ಚಿತ್ರಣ ಹೊರಬರಲಿದೆ ಎಂದು ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಭಯೋತ್ಪಾದಕ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿ, ಗಾಂಧಿ ಕುಟುಂಬವನ್ನು ಓಲೈಕೆ ಮಾಡುವುದಕ್ಕೋಸ್ಕರ ಖರ್ಗೆ ಅವರು ಇಂಥ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಶಾಂಭವಿ, ಅಶ್ವತ್ಥಪುರ, ಬಾ.ವಿಜಯಲಕ್ಷ್ಮಿ ತುಂಗಳ, ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ, ಸುಜಾತಾ ಶಿಂಧೆ, ಶಕುಂತಲಾ ಡೋಣಿ, ಶಿವಾನಂದ ಸುರಪೂರ ಇದ್ದರು.