ಸಾರಾಂಶ
ಹಾಸನದ ಸಿಟಿ ಬಸ್ ನಿಲ್ದಾಣದ ಪಕ್ಕ ಹೃದಯ ಭಾಗದಲ್ಲಿರುವ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ದಿನೇ ದಿನೇ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಅಲ್ಲಿ ಹಬ್ಬಗಳ ವೇಳೆ ವ್ಯಾಪಾರ ಮಾಡುವವರಿಗೆ ಹಾಗೂ ಗ್ರಾಹಕರಿಗೆ ಕಿರಿಕಿರಿಯಾಗಿದೆ.
ಚಿಕ್ಕ ರಸ್ತೆಯಲ್ಲಿ ಹೆಚ್ಚಿದ ವಾಹನ ಸಂಚಾರ । ವ್ಯಾಪಾರಸ್ಥರಿಗೆ ತೊಂದರೆ
ಕನ್ನಡಪ್ರಭ ವಾರ್ತೆ ಹಾಸನನಗರದ ಸಿಟಿ ಬಸ್ ನಿಲ್ದಾಣದ ಪಕ್ಕ ಹೃದಯ ಭಾಗದಲ್ಲಿರುವ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ದಿನೇ ದಿನೇ ವಾಹನಗಳ ಸಂಚಾರ ಹೆಚ್ಚಾಗಿದ್ದರಿಂದ ಅಲ್ಲಿ ಹಬ್ಬಗಳ ವೇಳೆ ವ್ಯಾಪಾರ ಮಾಡುವವರಿಗೆ ಹಾಗೂ ಗ್ರಾಹಕರಿಗೆ ಕಿರಿಕಿರಿಯಾಗಿದೆ. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.
ಹಾಸನ ನಗರದ ಕಟ್ಟಿನಕೆರೆ ಮಾರುಕಟ್ಟೆ ಎಂದರೆ ತರಕಾರಿಯಿಂದ ಹಿಡಿದು ಎಲ್ಲಾ ರೀತಿಯ ವ್ಯಾಪಾರಗಳು ಒಂದೆ ಕಡೆ ನಡೆಯುತ್ತವೆ. ಇಲ್ಲಿಗೆ ವ್ಯಾಪಾರ ಮಾಡಲು ಹಾಸನ ನಗರವಲ್ಲದೆ ಹಳ್ಳಿ ಹಳ್ಳಿಗಳಿಂದಲೂ ಜನರು ಪ್ರತಿನಿತ್ಯ ಆಗಮಿಸುತ್ತಾರೆ. ಈ ಭಾಗದಲ್ಲಿ ರಸ್ತೆ ಚಿಕ್ಕದಾಗಿದ್ದರೂ ಜನರ ಓಡಾಟ ಹೆಚ್ಚು ಇರುತ್ತದೆ. ಇದರ ಮಧ್ಯೆ ವಾಹನಗಳದ್ದೆ ಕಾರುಬಾರು ಎಂಬಂತೆ ಅತಿ ಹೆಚ್ಚು ಸಂಚಾರ ಕಂಡು ಬರುತ್ತದೆ. ಈ ವೇಳೆ ವ್ಯಾಪಾರಕ್ಕೆ ಬರುವ ಗ್ರಾಹಕರು ವಾಹನಗಳಿಂದ ತಪ್ಪಿಸಿಕೊಂಡು ವ್ಯಾಪಾರ ಮಾಡಲು ಹರಸಾಹಸ ಪಡಬೇಕು. ಏನಾದರೂ ಸಲ್ಪ ಪ್ರಜ್ಞೆ ತಪ್ಪಿ ರಸ್ತೆ ಮೇಲೆ ನಡೆದರೆ ವಾಹನ ಚಾಲಕರು ಅವರ ಮೇಲೆ ನುಗ್ಗಿಸಿಕೊಂಡು ಹೋಗುತ್ತಾರೆ. ಪ್ರಶ್ನೆ ಮಾಡಿದರೆ ವಾಹನ ಚಾಲಕರು ಅವಾಚ್ಯ ಪದಗಳಿಂದ ನಿಂದಿಸುತ್ತಾರೆ. ಇದುವರೆಗೂ ಅದೆಷ್ಟೊ ಅಪಘಾತವಾಗಿ ಜಗಳಗಳು ನಡೆದಿವೆ. ಇದು ಸಾಮಾನ್ಯ ದಿನಗಳಲ್ಲಿ ನಡೆಯುತ್ತದೆ. ಇನ್ನು ಉಳಿದಂತೆ ಹಬ್ಬಗಳಲ್ಲಿ ಕಟ್ಟಿನಕೆರೆ ಮಾರುಕಟ್ಟೆಯಲ್ಲಿ ಸಾರ್ವಜನಿಕರು ಕಾಲಿಡುವಂತಿಲ್ಲ. ವಾಹನಗಳಿಂದ ತುಂಬಿ ಸಂಚಾರ ದಟ್ಟಣೆ ಆಗುತ್ತದೆ. ಕಸ್ತೂರಬಾ ರಸ್ತೆ, ಮಹಾವೀರ ವೃತ್ತದಲ್ಲೂ ಕೂಡ ಇದೇ ಸಮಸ್ಯೆ. ವ್ಯಾಪಾರಕ್ಕೆ ಬಂದ ಅನೇಕರು ಈ ಸನ್ನಿವೇಶ ನೋಡಿ ವಾಪಸ್ ಹೋದ ಪ್ರಸಂಗ ನಡೆದಿದೆ. ಇದು ವ್ಯಾಪಾರಕ್ಕೆ ಮೀಸಲಿಟ್ಟಿರುವ ಮಾರುಕಟ್ಟೆಯೋ ಇಲ್ಲವೇ ವಾಹನ ಸಂಚಾರಕ್ಕಾಗಿ ಬಿಟ್ಟಿರುವ ಜಾಗವೋ ತಿಳಿಯುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.ಕೂಡಲೇ ಸಂಬಂಧಪಟ್ಟ ಇಲಾಖೆ ಗಮನಹರಿಸಿ ಕಟ್ಟಿನಕೆರೆ ಮಾರುಕಟ್ಟೆ ಒಳಗೆ ಯಾವ ವಾಹನ ಸಂಚಾರ ಮಾಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ ಎಂದು ಸಾರ್ವಜನಿಕರು ಜಿಲ್ಲಾಡಳಿತಕ್ಕೆ ಕೋರಿದ್ದಾರೆ.
ಕಟ್ಟಿನಕೆರೆ ಮಾರುಕಟ್ಟೆ ಜನ ಜಂಗುಳಿ