ಕನ್ನಡಪ್ರಭ ವಾರ್ತೆ ಗೋಣಿಕೊಪ್ಪ
ಒಕ್ಕಲಿಗರ ಯುವ ವೇದಿಕೆ ಹಾಗೂ ಹಾತೂರು ಗ್ರಾಮದ ಸಹಯೋಗದಲ್ಲಿ ಕೆಂಪೇಗೌಡ ಜಯಂತಿ ಅಂಗವಾಗಿ 5ನೇ ವರ್ಷದ ಕೆಸರುಗದ್ದೆ ಕ್ರೀಡಾಕೂಟವು ಜು. 12ರಂದು ನಡೆಯಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ವಿ.ಜಿ. ಮಧುಸೂದಧನ್ ತಿಳಿಸಿದ್ದಾರೆ.ವರ್ಷದಿಂದ ವರ್ಷಕ್ಕೆ ಸಮುದಾಯ ಬಾಂಧವರು ಒಂದೆಡೆ ಸೇರುವ ಮೂಲಕ ಈ ಕ್ರೀಡೆಯಲ್ಲಿ ಭಾಗವಹಿಸುತ್ತಿದ್ದಾರೆ. ಕೋಟೆಕೊಪ್ಪ, ಕಾಕೋಟೂಪರಂಬು, ಕಣ್ಣಂಗಾಲ -ಒಂಟಿಯಂಗಡಿ, ಕೈಕೇರಿ, ಗೊಟ್ಟಡ, ಕಳತ್ಮಾಡು ಮೈತಾಡಿ, ಅಮ್ಮತಿ, ಚೆನ್ನಂಗಿ, ತಿತಿಮತಿ, ದೇವರಪುರ, ಸೀಗೆತೋಡು, ಗೋಣಿಕೊಪ್ಪ, ಪೊನ್ನಂಪೇಟೆ-ಕಿರಗೂರು, ಕೋತೂರು, ಕುಟ್ಟ ಪೂಚೆಕಲ್ಲು, ಬಾಳೆಲೆ, ನಿಟ್ಟೂರು ಕಾರ್ಮಾಡು, ಕೊಟ್ಟಗೇರಿ, ವಿರಾಜಪೇಟೆ ಮಗ್ಗುಲ ಗ್ರಾಮದ ಸುಮಾರು 2000ಕ್ಕೂ ಅಧಿಕ ಒಕ್ಕಲಿಗ ಬಾಂಧವರು ಈ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಭಾಗವಹಿಸುವರು.ಕ್ರೀಡಾಕೂಟದ ಅಂಗವಾಗಿ ಬೆಳಿಗ್ಗೆ 8 ಗಂಟೆಗೆ ಶ್ರೀ ವನಭದ್ರಕಾಳಿ ದೇವಸ್ಥಾನದಿಂದ ಕಳಸ ಹೊತ್ತ ಮಹಿಳೆಯರು ಹೊರಡಲಿದ್ದಾರೆ. ಇವರೊಂದಿಗೆ ಪುರುಷರು, ಮಕ್ಕಳು ಸಾಂಪ್ರದಾಯಿಕ ಉಡುಗೆಯೊಂದಿಗೆ ಶ್ರೀ ಮಹಾದೇಶ್ವರ ದೇವಾಲಯ ಸಮೀಪದ ದೊಡ್ಡ ಮನೆ ತಮ್ಮಯ್ಯನವರ ಭತ್ತದ ಕೆಸರು ಗದ್ದೆ ಮೈದಾನಕ್ಕೆಸಾಗಿ ಬರಲಿದ್ದಾರೆ.ಮಹಿಳೆಯರಿಗಾಗಿ ತ್ರೋಬಾಲ್, ಹಗ್ಗಜಗ್ಗಾಟ, ಪುರುಷರಿಗಾಗಿ ವಾಲಿಬಾಲ್, ಹಗ್ಗ ಜಗ್ಗಾಟ ಏರ್ಪಡಿಸಲಾಗಿದೆ. 35 ವರ್ಷ ಮೇಲ್ಪಟ್ಟ ಪುರುಷರಿಗೆ, ಮಹಿಳೆಯರಿಗೆ ಮಡಿಕೆ ಒಡೆಯುವ ಸ್ಪರ್ಧೆ, 4ರಿಂದ 8 ವರ್ಷ ವಯಸ್ಸಿನ ಮಕ್ಕಳಿಗೆ ಪಾಸಿಂಗ್ ಬಾಲ್, ಪ್ರೌಢ ಬಾಲಕ, ಬಾಲಕಿಯರಿಗೆ ಓಟದ ಸ್ಪರ್ಧೆ, ವಯಸ್ಕರ ಓಟಗಳನ್ನು ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ನಗದು ಸೇರಿದಂತೆ ಪಾರಿತೋಷಕಗಳನ್ನು ನೀಡಲಾಗುತ್ತಿದೆ.ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಜಿ. ಮಧುಸೂಧನ್ ಅಧ್ಯಕ್ಷತೆಯಲ್ಲಿ ಜರುಗುವ ಉದ್ಘಾಟನಾ ಕಾರ್ಯಕ್ರಮಕ್ಕೆವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ರಾಜ್ಯಒಕ್ಕಲಿಗರ ಸಂಘದ ಕಾರ್ಯಾಧ್ಯಕ್ಷ ಅರಪಳ್ಳಿರವೀಂದ್ರ, ಮೈಸೂರಿನ ಪ್ರಸನ್ನರಾಮೇ ಗೌಡ, ಹಾತೂರು ಗ್ರಾಮದ ಕಾಫಿ ಬೆಳೆಗಾರರಾದ ದೊಡ್ಡಮನೆ ಕೀರ್ತಿ ಕಿರಣ್, ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಜಿ. ಅನಿಲ್ ಕುಮಾರ್, ಕೆಸರುಗದ್ದೆ ಕ್ರೀಡಾಕೂಟದ ಅಧ್ಯಕ್ಷ ಹಂಚಿನ ಮನೆ ಡಿ. ಶ್ರೀನಿವಾಸ್, ಸ್ಥಳದಾನಿಗಳಾದ ಡಿ.ಇ. ತಿಮ್ಮಯ್ಯ, ಒಲಂಪಿಯನ್ ವಿ.ಆರ್. ರಘುನಾಥ್, ನಿವೃತ್ತ ಎಇಇ ಮಹದೇವ್, ಡಾ. ದೊಡ್ಡಮನೆ ಸಿ. ಸಾತ್ಯಕಿ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ.ಸಮಾರೋಪ ಸಮಾರಂಭ ಸಂಜೆ 5 ಗಂಟೆಗೆ ನಡೆಯಲಿದ್ದು, ಕೆಸರು ಗದ್ದೆ ಕ್ರೀಡಾ ಕೂಟದ ಅಧ್ಯಕ್ಷ ಎಚ್.ಡಿ. ಶ್ರೀನಿವಾಸ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ.ಜೆ. ಮಧುಸೂಧನ್, ಹಾತೂರು ಒಕ್ಕಲಿಗರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್ ಕುಮಾರ್ ಭಾಗವಹಿಸುವರು ಎಂದು ತಿಳಿಸಿದ್ದಾರೆ.ಈ ವೇಳೆ ಸಂಘದ ಪ್ರಮುಖರಾದ ಕೆ.ಪಿ. ಅಜಿತ್, ಲವ ಮೈತಾಡಿ, ವಿ.ಪಿ. ಡಾಲು, ವಿ.ಜೆ. ಮನು, ಡಿ.ಜೆ. ನಿಖಿಲ್, ಜಗದೀಶ್ ಉಪಸ್ಥಿತರಿದ್ದರು.