ಸಾರಾಂಶ
ಕನ್ನಡಪ್ರಭ ವಾರ್ತೆ ಗುತ್ತಲ
ಐತಿಹಾಸಿಕ ಹಿನ್ನೆಲೆಯ ಹಾವನೂರ ಗ್ರಾಮ ದೇವತಾ ಜಾತ್ರೆ ಸಂಭ್ರಮದ ನಡುವೆ ಬುಧವಾರ ಸಂಜೆ ವೇಳೆ ಗ್ರಾಮ ದೇವಿಯನ್ನು ಗಡಿಗೆ ಕಳುಹಿಸುವುದರ ಮೂಲಕ ಸಂಪನ್ನಗೊಂಡಿತು.ಬುಧವಾರ ಬೆಳಗ್ಗೆ ೪ ಗಂಟೆ ಸುಮಾರಿಗೆ ದೇವಸ್ಥಾನದಿಂದ ದೇವಿಯನ್ನು ಪೆಟ್ಟಿಗೆಯಿಂದ ಹೊರ ತಂದು ಹಳಿಬಂಡಿಯ ಮೂಲಕ ದೇವಿಯನ್ನು ಚೌತಮನೆ ಕಟ್ಟೆಯವರೆಗೆ ವಿವಿಧ ವಾದ್ಯಗಳೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಸಮಯದಲ್ಲಿ ಭಾರಿ ತಮಾಷೆ ಮದ್ದುಗಳನ್ನು ಹಚ್ಚಲಾಯಿತು. ಹೆಡೆ ಎತ್ತಿದ ನಾಗಸರ್ಪ, ಚಕ್ರದಲ್ಲಿ ತಿರುಗು ಬಾಣ, ಕಮಲದ ಹೂ, ಆಕಾಶದಲ್ಲಿ ರಂಗು ರಂಗಿನ ಮದ್ದುಗಳು, ಬಾನೆತ್ತರದಲ್ಲಿ ಹಾರುವ ಮದ್ದುಗಳನ್ನು ಭಕ್ತರು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು.
ಬೆಳಗಿನ ಜಾವ ೬ ಗಂಟೆಗೆ ದೇವಿಯನ್ನು ಚೌತಮನೆ ಕಟ್ಟೆಗೆ ಕುಳ್ಳರಿಸಿ ಭಕ್ತರ ದರ್ಶನಕ್ಕೆ ಇಡಲಾಯಿತು. ಸಹಸ್ರಾರು ಭಕ್ತರು ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದರು.ಭಕ್ತಾಧಿಗಳು ತಮ್ಮ ಹರಕೆಯ ಮುಡುಪುಗಳನ್ನು ಭಕ್ತಿಯಿಂದ ತೀರಿಸಿದರು. ದೇವಿಯು ದೇವಸ್ಥಾನದಿಂದ ಚೌತಮನೆ ಕಟ್ಟೆ ಮತ್ತು ಚೌತಮನೆ ಕಟ್ಟೆಯಿಂದಿ ಗಡಿಗೆ ತೆರಳುವ ಮೆರವಣಿಗೆಯಲ್ಲಿ ವಿವಿಧ ಸಂಪ್ರದಾಯಿಕ ವಾದ್ಯಗಳು ಮೆರವಣಿಗೆಯನ್ನು ಆಕರ್ಷಕಗೊಳಿಸಿದವು. ಮೆರವಣಿಗೆ ಸಂದರ್ಭದಲ್ಲಿ ದೇವಿಗೆ ಹಾರುಗೋಳಿ ತೂರುವುದು ವಿಶೇಷವಾಗಿತ್ತು.
ಇನ್ನು ಸಂಪ್ರದಾಯಿಕ ಕೊಲ್ಲಾರಿ ಬಂಡಿಯನ್ನು (ಚಕ್ಕಡಿ)ಗಳನ್ನು ಶೃಂಗರಿಸಿಕೊಂಡು ರೈತ ಸಮೂಹ ಪ್ರತಿ ವರ್ಷದಂತೆ ಜಾತ್ರೆಗೆ ಆಗಮಿಸಿ ತುಂಗಭದ್ರಾ ನದಿಯ ತೀರದಲ್ಲಿ ವಿವಿಧ ಭಕ್ಷ್ಯಗಳನ್ನು ಸವಿದರು.ವರ್ಷಕೊಮ್ಮೆ ಮಾತ್ರ ಅದರಲ್ಲೂ ಕೇವಲ ೧೩ ಗಂಟೆಗಳ ದರ್ಶನ ನೀಡುವ ದೇವಿಯ ದರ್ಶನವನ್ನು ಅಸಂಖ್ಯಾತ ಭಕ್ತರು ಪಡೆದರು. ನಂತರ ಸಾಯಂಕಾಲ ೫ ಗಂಟೆ ಸುಮಾರಿಗೆ ದೇವಿಯನ್ನು ಗಡಿಗೆ ಕಳಿಸಲಾಯಿತು.
ಟ್ಯಾಂಕರ್ ಮೂಲಕ ನೀರು ಪೂರೈಕೆ: ಸರ್ಕಾರ ಹಾಗೂ ಜಿಲ್ಲಾಡಳಿತದ ನಿರ್ದೇಶನದಂತೆ ಕೆಲವು ನಿಯಮಗಳು ಹಾಗೂ ಮುಂಜಾಗೃತೆಯಿಂದ ಜಾತ್ರೆ ಆಚರಿಸುವಂತೆ ಆದೇಶಿಸಲಾಗಿದ್ದು, ಅದರಂತೆ ವಿಜೃಂಭಣೆಯಿಂದ ಜಾತ್ರೆ ಆಚರಿಸಲಾಯಿತು. ತುಂಗಭದ್ರಾ ನದಿಯಲ್ಲಿ ನೀರು ಇಲ್ಲದ ಕಾರಣ ಟ್ಯಾಂಕರ್ ಮೂಲಕ ಭಕ್ತಾಧಿಗಳಿಗೆ ನೀರು ಪೂರೈಸುವ ಮೂಲಕ ಜನರಿಗೆ ಕುಡಿಯುವ ನೀರು ಪೂರೈಸಲಾಯಿತು ಎಂದು ಹಾವನೂರ ಗ್ರಾಪಂ ಪಿಡಿಒ ಬಸವರಾಜ ಮುಂಡವಾಡ ತಿಳಿಸಿದ್ದಾರೆ.