ಪರೀಕ್ಷಾರ್ಥ ಸ್ಫೋಟಕ್ಕೆ ನನ್ನ ವಿರೋಧವಿದೆ: ಸುಮಲತಾ

| Published : Feb 22 2024, 01:46 AM IST

ಸಾರಾಂಶ

ಕೆಆರ್‌ಎಸ್ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದ ಮೇಲೆ ಪರೀಕ್ಷಾರ್ಥ ಸ್ಫೋಟ ನಡೆಸುವ ಅಗತ್ಯವೇನಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.

- ಅಣೆಕಟ್ಟು ಸುತ್ತ ೨೦ ಕಿ.ಮೀ. ಗಣಿಗಾರಿಕೆ ನಿಷೇಧವಿದ್ದ ಮೇಲೆ ಟ್ರಯಲ್ ಬ್ಲಾಸ್ಟ್ ಅಗತ್ಯವೇನಿದೆ?

ಕನ್ನಡಪ್ರಭ ವಾರ್ತೆ ಮಂಡ್ಯಕೆಆರ್‌ಎಸ್ ಅಣೆಕಟ್ಟು ಸುತ್ತ ೨೦ ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆಯನ್ನು ನಿಷೇಧಿಸಿ ಹೈಕೋರ್ಟ್ ಆದೇಶ ಹೊರಡಿಸಿದ ಮೇಲೆ ಪರೀಕ್ಷಾರ್ಥ ಸ್ಫೋಟ ನಡೆಸುವ ಅಗತ್ಯವೇನಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.

ಕೃಷ್ಣರಾಜಸಾಗರ ಅಣೆಕಟ್ಟು ಸಮೀಪ ಟ್ರಯಲ್ ಬ್ಲಾಸ್ಟ್ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿರುವ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಂಸದೆ, ಟ್ರಯಲ್ ಬ್ಲಾಸ್ಟ್‌ಗೆ ನನ್ನ ಸಂಪೂರ್ಣ ವಿರೋಧವಿದೆ. ಟ್ರಯಲ್ ಬ್ಲಾಸ್ಟ್‌ಗೂ ಅಲ್ಲಿ ನಡೆಯುವ ಗಣಿಗಾರಿಕೆಗೂ ವ್ಯತ್ಯಾಸ ಇದೆ. ಪರೀಕ್ಷಾರ್ಥ ಸ್ಫೋಟ ನಡೆಸಿ ಏನೂ ತೊಂದರೆ ಇಲ್ಲ ಎನ್ನಬಹುದು. ಆದರೆ ಅಲ್ಲಿ ನಡೆಯುವ ಸ್ಫೋಟದ ತೀವ್ರತೆ ಹೆಚ್ಚಾಗಿದ್ದು, ಅಣೆಕಟ್ಟೆಗೆ ಅಪಾಯ ಎದುರಾಗಲಿದೆ ಎಂದು ಹೇಳಿದರು. ಗಣಿಗಾರಿಕೆಯಿಂದ ಕೆಆರ್‌ಎಸ್ ಅಣೆಕಟ್ಟೆಗೆ ಅಪಾಯವಿದೆ. ಬೇಬಿಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆ. ಹಾಗಾಗಿ ಟ್ರಯಲ್ ಬ್ಲಾಸ್ಟ್‌ಗೆ ನನ್ನ ವಿರೋಧವಿದೆ. ಬೇಬಿಬೆಟ್ಟ ರಾಜಮನೆತನಕ್ಕೆ ಸೇರಿದ್ದು ಎಂಬ ವಿಚಾರ ನ್ಯಾಯಾಲಯದಲ್ಲಿದೆ. ಹೀಗಿರುವಾಗ ಪ್ರಾಯೋಗಿಕ ಸ್ಫೋಟ ನಡೆಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.ಟ್ರಯಲ್ ಬ್ಲಾಸ್ಟ್ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ. ಈ ವಿಷಯವಾಗಿ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿಕೆ ನನಗೆ ಆಶ್ಚರ್ಯ ತಂದಿದೆ. ಅಕ್ರಮ ಗಣಿಗಾರಿಕೆ ವಿರುದ್ಧ ನನ್ನ ಹೋರಾಟಕ್ಕೆ ಸ್ಪೂರ್ತಿಯಾಗಿದ್ದೇ ರೈತ ಸಂಘ. ಈಗ ಅವರ ಪಕ್ಷದ ಶಾಸಕರೇ ಟ್ರಯಲ್ ಬ್ಲಾಸ್ಟ್ ಪರ ಮಾತನಾಡುತ್ತಿದ್ದಾರೆ ಎಂದರೆ ಅದನ್ನು ಎಲ್ಲರೂ ವಿರೋಧಿಸಬೇಕು. ಅಣೆಕಟ್ಟುಸುತ್ತ ಗಣಿಗಾರಿಕೆ ಮಾಡೋದು ಅಪಾಯ ಎಂದು ಕೋರ್ಟ್ ಹೇಳಿದೆ. ಇದೊಂದು ಸೂಕ್ಷ್ಮ ವಿಷಯವಾಗಿದ್ದು, ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ನುಡಿದರು.