ಮುಂದಿನ 2028ಕ್ಕೆ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರಬೇಕು ಎನ್ನುವುದು ರಾಜ್ಯದ ಜನರ ಬಯಕೆಯಾಗಿದೆ.

ಮರಿಯಮ್ಮನಹಳ್ಳಿ: ಮುಂದಿನ 2028ಕ್ಕೆ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬರಬೇಕು ಎನ್ನುವುದು ರಾಜ್ಯದ ಜನರ ಬಯಕೆಯಾಗಿದೆ. ಸೂರ್ಯ,​ ಚಂದ್ರ ಹುಟ್ಟೋದು ಎಷ್ಟು ಸತ್ಯಾನೋ 2028ಕ್ಕೆಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವುದು ಕೂಡ ಅಷ್ಟೇ ಸತ್ಯ ಎಂದು ಶಾಸಕ ಕೆ.ನೇಮರಾಜ್‌ ನಾಯ್ಕ ಹೇಳಿದರು.

ಇಲ್ಲಿನ ಪಪಂ ನೂತನ ಕಟ್ಟಡ ನಿರ್ಮಾಣದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಡವರು, ರೈತಾಪಿ ವರ್ಗ, ಮಹಿಳೆಯರ ಪರವಾಗಿ ಕೆಲಸ ಮಾಡುವ ವ್ಯಕ್ತಿ ಕುಮಾರಣ್ಣ. ಹೀಗಾಗಿ ನಾವೆಲ್ಲ ಅವರನ್ನು ರಾಜ್ಯ ರಾಜಕಾರಣಕ್ಕೆ ಬರುವಂತೆ ಒತ್ತಾಯ ಮಾಡ್ತಿದ್ದೇವೆ. ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ರಾಜ್ಯದ ಹಿತದೃಷ್ಟಿಯಿಂದ ಎಚ್‌.ಡಿ. ಕುಮಾರಸ್ವಾಮಿ ರಾಜ್ಯ ರಾಜಕಾರಣಕ್ಕೆ ಬಂದೇ ಬರುತ್ತಾರೆ ಎಂದು ಪುನರುಚ್ಚರಿಸಿದರು.

ಕಲ್ಯಾಣ ಕರ್ನಾಟಕದಲ್ಲಿ ಈ ಸರ್ಕಾರದಿಂದ ಒಂದು ಮನೆನೂ ಕೊಟ್ಟಿಲ್ಲ. ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಫಲಾನುಭವಿಗಳಿಗೆ ಎರಡೆರಡು ತಿಂಗಳು ಕೊಡೋದು ಮತ್ತೆ ಎರಡು ತಿಂಗಳು ಬಿಡೋದು, ಅನೇಕ ತಿಂಗಳಿಂದು ಗೃಹಲಕ್ಷ್ಮಿ ಯೋಜನೆಯ ಹಣ ಸುಮಾರು ತಿಂಗಳಿಂದ ಗ್ಯಾಪ್‌ ಆಗಿದೆ. ಯುವನಿಧಿ ಯೋಜನೆಯ ಹಣ ಇದುವರೆಗೂ ಯಾರಿಗೂ ಸರಿಯಾಗಿ ಬಂದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಹಣ ಸರಿದೂಗಿಸುವ ಕೆಲಸದಲ್ಲಿ ಮುಳುಗಿದ್ದಾರೆಯೇ ಹೊರತು ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಅನುದಾನ ಬಿಡುಗಡೆ ನೀಡುತ್ತಿಲ್ಲ ಎಂದು ಅವರು ಹೇಳಿದರು.

ಮರಿಯಮ್ಮನಹಳ್ಳಿಗೆ ತುಂಗಭದ್ರಾ ಜಲಾಶಯದಿಂದ ಶಾಶ್ವತ ಕುಡಿಯುವ ನೀರಿನ್ನು ಒದಗಿಸುವ ಅಮೃತ್‌ 2 ಯೋಜನೆಯ ಕಾಮಗಾರಿಯಲ್ಲಿ ಮನೆ ಮನೆಗೆ ನಳ ಹಾಕುವ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನು ಕೆಲ ವಾರ್ಡುಗಳಲ್ಲಿ ನಳ ಅಳವಡಿಸುವ ಕೆಲಸ ನಡೆಯುತ್ತಿದೆ. ಅತೀ ಶೀಘ್ರದಲ್ಲೇ ಕಾಮಗಾರಿ ಮುಗಿಸುವಂತೆ ಸೂಚಿಸಲಾಗಿದೆ. ನಳ ಹಾಕುವ ಕೆಲಸಗಳಿಂದ ಪಟ್ಟಣದ ಎಲ್ಲ ವಾರ್ಡಿನ ರಸ್ತೆಗಳು ಹಾಳಾಗಿವೆ. ನಳ ಹಾಕುವ ಕೆಲಸ ಮುಗಿದ ತಕ್ಷಣವೇ ಎಲ್ಲ ವಾರ್ಡುಗಳಲ್ಲಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು.

ಹಗರಿಬೊಮ್ಮನಹಳ್ಳಿಯ ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಲ್ಲಿ ಒಂದು ಕೆರೆಗೆ ನಾಲ್ಕು ಉಪ ಕೆರೆಗಳು ಇವೆ. ಕ್ಷೇತ್ರದ 68 ಕೆರೆಗಳಿಗೆ ನೀರು ತುಂಬಿಸಿದಂತಾಗುತ್ತದೆ. ಇದರಿಂದ ಹಗರಿಬೊಮ್ಮನಹಳ್ಳಿ ಕ್ಷೇತ್ರದ ಅರ್ಥ ಭಾಗದ ಕೆರೆಗಳಿಗೆ ನೀರು ತುಂಬಿಸಿದಂತಾಗುತ್ತದೆ. ಒಂದು ಕೆರೆಯಿಂದ ಅಂದಾಜು ಆರು ಸಾವಿರ ಎಕರೆಗೆ ನೀರು ಹರಿಸಿದರೆ, 45 ಸಾವಿರ ಎಕರೆ ಕ್ಷೇತ್ರದಲ್ಲಿ ನೀರಾವರಿಯನ್ನಾಗಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ಕ್ಷೇತ್ರದ 17 ಕೆರೆಗಳಿಗೆ ನೀರು ತುಂಬಿಸಲು ಸುಮಾರು ₹550 ಕೋಟಿ ಬೇಕಾಗಿದೆ. ನೀರಾವರಿ ಯೋಜನೆಗೆ ರಾಜ್ಯ ಸರ್ಕಾರದಿಂದ ಪೂರ್ಣಪ್ರಮಾಣದ ಹಣ ಒದಗಿಸಲು ಆಗಲಿಲ್ಲ ಎನ್ನುವುದಾದರೆ ಅರ್ಧ ಹಣ ನೀಡಿ ಉಳಿದ ಅರ್ಧ ಕೇಂದ್ರ ಸರ್ಕಾರದಿಂದ ತರಿಸಿಕೊಳ್ಳುತ್ತೇವೆ. ತಕ್ಷಣವೇ ರಾಜ್ಯ ಸರ್ಕಾರ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಹಣ ಬಿಡುಗಡೆಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.

ಪಪಂ ಅಧ್ಯಕ್ಷ ಆದಿಮನಿ ಹುಸೇನ್‌ ಬಾಷಾ, ಪಪಂ ಸದಸ್ಯರಾದ ಬಿ.ಎಂ.ಎಸ್‌. ರಾಜೀವ್‌, ಎಸ್‌.ಮಹಮ್ಮದ್‌, ಮರಡಿ ಸುರೇಶ್‌, ಪರಶುರಾಮ, ಪಪಂ ಮುಖ್ಯಾಧಿಕಾರಿ ಜಿ.ಕೆ. ಮಲ್ಲೇಶ್, ಜೆಇಟಿ ಎಸ್‌.ಹನುಮಂತಪ್ಪ, ಸ್ಥಳೀಯ ಮುಖಂಡರಾದ ಎಚ್‌. ಪಾಂಡುರಂಗ ಶೆಟ್ಟಿ, ಬಿ.ಸುರೇಶ್‌, ವೆಂಕಟೇಶ್‌, ಮಂಜುನಾಥ, ಕಲ್ಲಾಳ್‌ ಪರಶುರಾಮಪ್ಪ, ವೈ.ಮಲ್ಲಿಕಾರ್ಜುನ, ರಾಜಭಕ್ಷ್ಮಿ ಉಪಸ್ಥಿತರಿದ್ದರು.