ಆದರ್ಶ ವಿದ್ಯಾಲಯದಲ್ಲಿ 6ರಿಂದ 10ನೇ ತರಗತಿಯವರೆಗೆ ತರಗತಿಗಳಿವೆ. 500ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ನಿತ್ಯ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಸರಿಯಾದ ವೇಳೆಗೆ ಬಸ್ಸಿನ ವ್ಯವಸ್ಥೆ ಇಲ್ಲ.
ಮುಂಡರಗಿ: ತಾಲೂಕಿನ ಕೊರ್ಲಹಳ್ಳಿ ಹತ್ತಿರವಿರುವ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸುಗಳನ್ನು ಬಿಡುವಂತೆ ಒತ್ತಾಯಿಸಿ ನೂರಾರು ವಿದ್ಯಾರ್ಥಿಗಳು ಹಾಗೂ ಪಾಲಕರು ಸೋಮವಾರ ಬೆಳಗ್ಗೆ ಬಸ್ ತಡೆದು ಪ್ರತಿಭಟನೆ ನಡೆಸಿದರು.
ಆದರ್ಶ ವಿದ್ಯಾಲಯದಲ್ಲಿ 6ರಿಂದ 10ನೇ ತರಗತಿಯವರೆಗೆ ತರಗತಿಗಳಿವೆ. 500ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಓದುತ್ತಿದ್ದಾರೆ. ನಿತ್ಯ ಮಕ್ಕಳು ಶಾಲೆಗೆ ಹೋಗುವ ಸಂದರ್ಭದಲ್ಲಿ ಸರಿಯಾದ ವೇಳೆಗೆ ಬಸ್ಸಿನ ವ್ಯವಸ್ಥೆ ಇರುವುದಿಲ್ಲ. ಸಂಜೆ ಶಾಲೆ ಬಿಟ್ಟ ನಂತರವಂತೂ ಇನ್ನಷ್ಟು ಅವ್ಯವಸ್ಥೆಯಿದ್ದು, ಮಕ್ಕಳು 4.30ರಿಂದ 6 ಗಂಟೆಯವರೆಗೂ ಬರುವ ಬಸ್ಸುಗಳಿಗೆ ಕೈ ಮಾಡುತ್ತಾ ನಿಲ್ಲಬೇಕು. ಎಷ್ಟೇ ಕೈ ಮಾಡಿದರೂ ಕೆಲವು ಬಸ್‌ಗಳು ನಿಲ್ಲಿಸುವುದಿಲ್ಲ. ಆದ್ದರಿಂದ ಶಾಲೆಯ ಮಕ್ಕಳಿಗೆಂದೇ ನಿರ್ದಿಷ್ಟವಾಗಿ ಬಸ್ಸು ಬಿಡಬೇಕೆಂದು ಪಾಲಕರು ಹಾಗೂ ಮಕ್ಕಳು ಒತ್ತಾಯಿಸಿದರು. ಬಿಇಒ ಜಿ.ಎಸ್. ಅಣ್ಣಿಗೇರಿ ಅವರು, ಮಕ್ಕಳಿಗೆ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದರು.ಕೆಎಸ್ಆರ್‌ಟಿಸಿ ಘಟಕ ವ್ಯವಸ್ಥಾಪಕ ಶೇಖರ್ ನಾಯಕ ಆಗಮಿಸಿ ಮಾತನಾಡಿ, ಇದು ಸರ್ಕಾರಿ ಘಟಕ ಆಗಿರುವುದರಿಂದ ನೇರವಾಗಿ ಶಾಲೆಗೆ ಬಸ್ಸುಗಳನ್ನು ಬಿಡಲು ಅವಕಾಶವಿಲ್ಲ. ಬೆಳಗ್ಗೆ ಒಂದು ಬೀಡನಾಳ ಹಾಗೂ ಕೊರ್ಲಹಳ್ಳಿ ಎಂದು ಬಿಟ್ಟು ಸಂಜೆಯೂ ಎರಡು ಬಸ್ಸುಗಳನ್ನು ಇದೇ ರೀತಿ ಬೇರೆ ಗ್ರಾಮಗಳಿಗೆಂದು ಬಿಟ್ಟು ಶಾಲಾ ಮಕ್ಕಳಿಗೆ ಹೋಗಿ ಬರಲು ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ನಂತರ ಪಾಲಕರು ಪ್ರತಿಭಟನೆ ಕೈಬಿಟ್ಟರು. ಸುಮಾರು ಎರಡು ಗಂಟೆಗೂ ಹೆಚ್ಚು ಸಮಯ ಪ್ರತಿಭಟನೆ ನಡೆಸಿದ್ದರ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿ ಪಾಲಕರಾದ ಹಿರೇವಡ್ಡಟ್ಟಿಯ ಬಸವರಾಜ ಅಂಕದ, ಬಸವರಾಜ ದೇಸಾಯಿ, ಆನಂದ ರಾಮೇನಹಳ್ಳಿ, ಶಂಬು ಲಿಂಗಶೆಟ್ಟರ್, ಶಿದ್ದಯ್ಯ ಹುಚ್ಚಯ್ಯನವರ, ಗುರುಪಾದಗೌಡ ಪಾಟೀಲ, ಜಿ.ಎಸ್. ಕವಲೂರ, ದೇವಪ್ಪ ಕತ್ತಿ, ಸುಭಾಸಪ್ಪ ಬಾಗೇವಾಡಿ, ಎಸ್.ಆರ್. ಪೂಜಾರ, ವಿರುಪಾಕ್ಷಪ್ಪ ಕುಂಬಾರ, ವಿ.ವಿ. ಹಂದ್ರಾಳ, ಆರ್.ಕೆ. ಡೊಳ್ಳಿನ, ಹೇಮಾ ಪಾಟೀಲ, ಗೀತಾ ಕರಿಗಾರ, ನೇತ್ರಾವತಿ ಮಡ್ಡಿ, ಶಿವಾನಂದ ಕೊರ್ಲಹಳ್ಳಿ, ರಾಜು ರಾಜೂರ, ಚೈತ್ರಾ ನಾಡಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.