ಜಿಲ್ಲೆಯಲ್ಲಿ ಯಾವುದೇ ಒಂದು ಕಾರ್ಖಾನೆ ಸ್ಥಾಪಿಸಬೇಕೆಂದರೆ ಆ ಕಂಪನಿಯವರು ಸಿಂಗಲ್ ವಿಂಡೋ ಸ್ಕೀಂನಲ್ಲಿ ರಾಜ್ಯ ಮಟ್ಟದ ಕೆಐಡಿಬಿಗೆ ಅರ್ಜಿ ಹಾಕಿದರೆ ಅದನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಜಾಗ ಮಂಜೂರು ಮಾಡಿಸಬಹುದು.
ಕನ್ನಡಪ್ರಭ ವಾರ್ತೆ ನಾಗಮಂಗಲ
ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಜಿಲ್ಲಾಧಿಕಾರಿಗಳು ಜಾಗ ಕೊಡುತ್ತಿಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸುಳ್ಳು ಹೇಳುವ ಮೂಲಕ ಜಿಲ್ಲೆಯ ಜನರ ದಿಕ್ಕು ತಪ್ಪಿಸಲು ಹೊರಟಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ದೂರಿದರು.ಪಟ್ಟಣದ ಟಿ.ಬಿ.ಬಡಾವಣೆಯ ಬಡಗೂಡಮ್ಮ ದೇವಸ್ಥಾನದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿ, ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹಳ ಚೆನ್ನಾಗಿ ಮಾತಾಡ್ತಾರೆ. ಅವರಂತೆ ಮಾತಾಡುವುದನ್ನು ನಾವು ಕಲಿತಿಲ್ಲ. ಅವರು ಹೇಳುವ ಸುಳ್ಳೇ ಸತ್ಯವೆಂದುಕೊಳ್ಳಬಾರದು ಎಂದರು.
ನಾನು ನಿಜವಾದ ಬಡವನಾಗಿ ಬಗರ್‌ಹುಕುಂನಲ್ಲಿ ಅರ್ಜಿ ಹಾಕಿದ್ದರೆ ಡೀಸಿ, ತಹಸೀಲ್ದಾರ್ ಮತ್ತು ಸಮಿತಿಯ ಅಧ್ಯಕ್ಷರು ಸಭೆಯಲ್ಲಿಟ್ಟು ಒಂದು ಎಕರೆ ಭೂಮಿ ಮಂಜೂರು ಮಾಡಿಕೊಡಬಹುದು. ಆದರೆ, ಮಾಜಿ ಸಿಎಂ ಕುಮಾರಸ್ವಾಮಿ ಅಥವಾ ನನಗಾಗಲಿ ಡೀಸಿಯವರು ಜಾಗ ಮಂಜೂರು ಮಾಡಿಕೊಡೋಕೆ ಆಗುತ್ತಾ ಎಂದು ಎಚ್ಡಿಕೆಗೆ ತಿರುಗೇಟು ಕೊಟ್ಟರು.ಜಿಲ್ಲೆಯಲ್ಲಿ ಯಾವುದೇ ಒಂದು ಕಾರ್ಖಾನೆ ಸ್ಥಾಪಿಸಬೇಕೆಂದರೆ ಆ ಕಂಪನಿಯವರು ಸಿಂಗಲ್ ವಿಂಡೋ ಸ್ಕೀಂನಲ್ಲಿ ರಾಜ್ಯ ಮಟ್ಟದ ಕೆಐಡಿಬಿಗೆ ಅರ್ಜಿ ಹಾಕಿದರೆ ಅದನ್ನು ಪರಿಶೀಲಿಸಿ ನಿಯಮಾನುಸಾರ ಅಗತ್ಯ ಜಾಗ ಮಂಜೂರು ಮಾಡಿಸಬಹುದು ಎಂದರು.
ಬೆಂಗಳೂರಿನ ಮೆಟ್ರೋಗೆ ಕೇಂದ್ರ ಸರ್ಕಾರ ಕೇವಲ ಶೇ.13ರಷ್ಟು ಹಣ ನೀಡಿದೆ. ರಾಜ್ಯ ಸರ್ಕಾರ ಇನ್ನುಳಿದ ಶೇ.87ರಷ್ಟು ಹಣ ಭರಿಸಿ ಕಾಮಗಾರಿ ಪೂರ್ಣಗೊಳಿಸಿದ ನಂತರ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಮೆಟ್ರೋಗೆ ಚಾಲನೆ ನೀಡಿದರು. ಜಲಧಾರೆ ಸೇರಿದಂತೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕೇಂದ್ರ ಸರ್ಕಾರ ಹಣ ನೀಡದೆ ಅನ್ಯಾಯ ಮಾಡುತ್ತಿದ್ದರೂ ಸಹ ನಾವು ಅಭಿವೃದ್ಧಿ ಕೆಲಸ ನಿಲ್ಲಿಸಿಲ್ಲ ಎಂದರು.ನನ್ನ ಅವಧಿಯಲ್ಲಿ ಮಂಜೂರಾಗಿದ್ದ ಅಭಿವೃದ್ಧಿ ಕೆಲಸವನ್ನು ಈಗ ಮಾಡುತ್ತಿದ್ದಾರೆ ಎನ್ನುವವರು ದಾಖಲಾತಿ ಸಹಿತ ಬಂದರೆ ಇದೇ ವೇದಿಕೆಯಲ್ಲಿ ತಪ್ಪಾಗಿದೆ ಎಂದು ಕ್ಷಮೆ ಕೇಳುತ್ತೇನೆ. ನಾನು ಅಂತವನಲ್ಲ. ಬೇರೆಯವರು ಮಂಜೂರು ಮಾಡಿಸಿದ್ದ ಕೆಲಸವನ್ನು ನನ್ನದು ಎಂದು ಹೇಳಿಕೊಳ್ಳುವ ಅಭ್ಯಾಸವೂ ನನಗಿಲ್ಲ ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರಿಗೆ ತಿರುಗೇಟು ಕೊಟ್ಟರು.
ನಾನು ಮಂಜೂರು ಮಾಡಿಸಿರುವ ಕೆಲಸಗಳನ್ನೇ ಹೇಳಲು ನನಗೆ ಸಮಯವಿಲ್ಲ. ಇತ್ತೀಚಿಗೆ ಕೆಲ ಕಾಮಗಾರಿಗಳಿಗೆ ಭುಮಿಪೂಜೆ ಮಾಡುವುದನ್ನೇ ಬಿಟ್ಟಿದ್ದೇನೆ. ಕಳೆದ 2013ರಿಂದ 2018ರ ಅವಧಿಯಲ್ಲಿ ನಾನು ಮಂಜೂರು ಮಾಡಿಸಿದ್ದ ನಾಗಮಂಗಲ ಶ್ರವಣಬೆಳಗೊಳ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಈಗ ಮತ್ತೆ ನಾನೇ ಬಂದು ಪೂರ್ಣಗೊಳಿಸಬೇಕಾಯಿತು ಎಂದರು.ಕಳೆದ ಎರಡೂವರೆ ವರ್ಷದಿಂದ ವಿಧಾನಸಭಾ ಕ್ಷೇತ್ರದ ಕೊಪ್ಪ ಸೇರಿದಂತೆ ತಾಲೂಕಿನ ರಸ್ತೆ, ಸೇತುವೆ ಮತ್ತು ನೀರಾವರಿ ಯೋಜನೆಗೆ 2.5 ಸಾವಿರ ಕೋಟಿ ಹಣ ಬಿಡುಗಡೆ ಮಾಡಿಸಿದ್ದೇನೆ. ಅದರ ದಾಖಲಾತಿ ಸಹಿತ ಕೊಡುತ್ತೇನೆ. ಇವೆಲ್ಲಾ ಯಾರ ಅವಧಿಯಲ್ಲಿ ಮಂಜೂರಾಗಿವೆ ಎಂಬುದನ್ನು ಯಾರು ಬೇಕಾದರೂ ನೋಡಬಹುದು ಎಂದರು.
ನಾವು ಸುಳ್ಳು ಹೇಳಲ್ಲ. ನಾಡಿನ ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಮತ್ತು ಸಾರ್ವಜನಿಕರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿಯನ್ನೂ ಮೀರಿ ಎಲ್ಲ ವರ್ಗದ ಜನರಿಗೂ ಒಂದಲ್ಲ ಒಂದು ರೀತಿಯ ಅನುಕೂಲ ಮಾಡಿಕೊಡುತ್ತಿದ್ದೇವೆ ಎಂದರು.