ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್‌ ಜ್ಯೋತಿ ಪಾಟೀಲ ನೇತೃತ್ವದ ನಿಯೋಗವೂ ಬಿಎಂಸಿ (ಬೃಹತ್‌ ಮುಂಬೈ ಪಾಲಿಕೆ)ಗೆ ಭೇಟಿ ನೀಡಿ ಆಡಳಿತ ವೈಖರಿ ಹಾಗೂ ಅಭಿವೃದ್ಧಿ ಯೋಜನೆಗಳ ಕುರಿತು ಚರ್ಚಿಸಿದೆ.

ಗುರುವಾರ ಬೃಹನ್ ಮುಂಬೈ ಮಹಾನಗರ ಪಾಲಿಕೆಗೆ ಭೇಟಿ ನೀಡಿ, ಅಲ್ಲಿನ ವಿವಿಧ ಪ್ರಮುಖ ಇಲಾಖೆಗಳ ಕಾರ್ಯವೈಖರಿ ಪರಿಚಯಿಸಿಕೊಂಡು ಹುಬ್ಬಳ್ಳಿ-ಧಾರವಾಡದಲ್ಲೂ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುವ ಕುರಿತು ಚರ್ಚಿಸಲಾಯಿತು ಎಂದು ಪಾಲಿಕೆಯ ಸಾಮಾಜಿಕ ಜಾಲತಾಣದಲ್ಲಿ ಮೇಯರ್ ಹೇಳಿಕೊಂಡಿದ್ದಾರೆ.

ಮುಂಬೈಯಲ್ಲಿ ಜಾರಿಗೊಳಿಸಲಾಗುತ್ತಿರುವ ಆಧುನಿಕ ಯೋಜನೆ ಹಾಗೂ ಆಡಳಿತಾತ್ಮಕ ಕಾರ್ಯಗಳ ಕುರಿತು ವಿವರವಾದ ಮಾಹಿತಿ ಪಡೆಯಲಾಯಿತು. ಮಹಾನಗರ ಕಾರ್ಯದರ್ಶಿ ಇಲಾಖೆ, ವ್ಯವಹಾರ ಅಭಿವೃದ್ಧಿ ಇಲಾಖೆ, ಘನ ತ್ಯಾಜ್ಯ ನಿರ್ವಹಣಾ ಇಲಾಖೆ, ಪರಿಸರ ಹಾಗೂ ಹವಾಮಾನ ಬದಲಾವಣೆ ಇಲಾಖೆ ಮತ್ತು ಮೂಲಸೌಕರ್ಯ ಇಲಾಖೆಗಳ ಕಾರ್ಯಗಳನ್ನು ಹು-ಧಾ ಪಾಲಿಕೆಯಲ್ಲಿ ಅಳವಡಿಸಿಕೊಳ್ಳಬಹುದಾದ ವಿನೂತನ ಸಂಗತಿಗಳು ತಿಳಿದು ಬಂದವು ಎಂದು ನಿಯೋಗದೊಂದಿಗೆ ತೆರಳಿರುವ ಪಾಲಿಕೆ ವಿರೋಧ ಪಕ್ಷದ ನಾಯಕ ಇಮ್ರಾನ್‌ ಯಲಿಗಾರ ತಿಳಿಸಿದ್ದಾರೆ.

ಹು-ಧಾ ಮಹಾನಗರ ಪಾಲಿಕೆಯು ಜಿಐ ಸರ್ವೆ ನಡೆಸಲು ಮುಂಬೈನ ಖಾಸಗಿ ಕಂಪನಿಗೆ ವಹಿಸಿದ್ದು, ಅದಕ್ಕಾಗಿ ₹ 24 ಕೋಟಿ ಖರ್ಚು ಮಾಡುತ್ತಿದೆ. ಸರ್ವೆಯ ಸ್ಥಿತಿಗತಿ ಏನಿದೆ, ಯಾವಾಗ ಅದರ ಅಂತಿಮ ವರದಿ ಸಿಗಲಿದೆ ಎನ್ನುವುದರ ಕುರಿತು ಬುಧವಾರ ಪಾಲಿಕೆ ನಿಯೋಗವೂ ಖಾಸಗಿ ಕಂಪನಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದೆ ಎಂದು ತಿಳಿಸಿದ್ದಾರೆ.


ನಿಯೋಗದಲ್ಲಿ ಉಪಮೇಯರ್‌ ಸಂತೋಷ್ ಚವಾಣ್, ಸಭಾನಾಯಕ ಈರೇಶ ಅಂಚಟಗೇರಿ, ಪ್ರತಿಪಕ್ಷದ ನಾಯಕ ಇಮಾಮ್ ಹುಸೇನ್ ಯಲಿಗಾರ, ಉಪ ಆಯುಕ್ತ (ಅಭಿವೃದ್ಧಿ) ವಿಜಯಕುಮಾರ ಹಾಗೂ ಇತರರು ಇದ್ದರು.