ಸಾರಾಂಶ
ಕೂಡ್ಲಿಗಿ: ತಾಯಿಯಿಂದ ಮಗುವಿಗೆ ಎಚ್ಐವಿ ಸೋಂಕು ಮತ್ತು ಸಿಫಲಿಸ್ ಹೆಪಟೈಟಿಸ್ ಹರಡದಂತೆ ಪರೀಕ್ಷೆಗಳನ್ನು ಮಾಡಿಸಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಂಡರೆ ಹುಟ್ಟುವ ಮಕ್ಕಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಶಾಸಕ ಡಾ. ಎನ್ ಟಿ. ಶ್ರೀನಿವಾಸ್ ತಿಳಿಸಿದರು.
ಮಂಗಳವಾರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ, ತಾಲೂಕು ಸಾರ್ವಜನಿಕ ಆಸ್ಪತ್ರೆ ಸಹಯೋಗದೊಂದಿಗೆ ತಾಯಿಯಿಂದ ಮಗುವಿಗೆ ಎಚ್ಐವಿ ಸಿಪಿಲಿಸ್ ಹೆಪಟೈಟಿಸ್ ನಿರ್ಮೂಲನೆಗಾಗಿ ಗರ್ಭಿಣಿಯರಿಗೆ ಆಯೋಜಿಸಿದ್ದ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಎಚ್ಐವಿ ಸಿಪಿಲಿಸ್ ಹುಟ್ಟುವ ಮಕ್ಕಳಿಗೆ ಹರಡದಂತೆ ಕ್ರಮ ಕೈಗೊಳ್ಳುವಲ್ಲಿ ವೈದ್ಯರು ಮುಂದಾಗಬೇಕು. ಗರ್ಭಿಣಿಯರಿಗೆ ಆರೋಗ್ಯದ ಬಗ್ಗೆ ಅರಿವು ಅತಿ ಮುಖ್ಯ. ಗರ್ಭಿಣಿಯರಿಗೆ ವೈದ್ಯರು ಅರಿವು ಮೂಡಿಸಬೇಕು ಎಂದರು.
ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಧು ಮಾತನಾಡಿ, ಹೆಪಟೈಟಿಸ್ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ನೀಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ. ಎಸ್.ಪಿ. ಪ್ರದೀಪ್ ಕುಮಾರ್ ಮಾತನಾಡಿ, ಗರ್ಭಿಣಿಯಾದಾಗಿನಿಂದ ಹೆರಿಗೆ ಆಗುವ ತನಕ ಸೂಕ್ತ ತಪಾಸಣೆ ಮಾಡಿಸಿದರೆ ಹುಟ್ಟುವ ಮಕ್ಕಳು ಆರೋಗ್ಯದಿಂದ ಇರಲು ಸಾಧ್ಯವಾಗುತ್ತದೆ. ಕಾಯಿಲೆಗಳ ಬಗ್ಗೆ ಜಾಗೃತಿ ವಹಿಸಿದರೆ ಗರ್ಭಿಣಿಯರು ಸಹ ಸುರಕ್ಷಿತವಾಗಿ ಇರುತ್ತಾರೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಗದೀಶ್ ನಾಯ್ಕ, ಆಪ್ತ ಸಮಾಲೋಚಕರಾದ ಕೆ. ಪ್ರಶಾಂತ್ ಕುಮಾರ್, ನಾಗರತ್ನ, ಗಂಗಮ್ಮ, ಜೆ.ಜಿ. ಸೋಮಶೇಖರ್, ಗಂಗಮ್ಮ, ಪತ್ರಿಗೌಡ, ದೇವಮ್ಮ, ಉಮಾ, ರೇಣುಕಾ, ತಿಪ್ಪೇಸ್ವಾಮಿ, ನಾಗರಾಜ ಇದ್ದರು. ಕಾರ್ಯಕ್ರಮದಲ್ಲಿ 40ಕ್ಕೂ ಹೆಚ್ಚು ಗರ್ಭಿಣಿಯರು, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.