ಎಂ. ಪ್ರಹ್ಲಾದ್

ಕನಕಗಿರಿ: ಈ ಬಾರಿ ಕನಕಗಿರಿ ಉತ್ಸವದ ವೇಳೆ ಜನರಿಗೆ ಹೆಲಿಕಾಪ್ಟರ್‌ನಲ್ಲಿ ಸುತ್ತಾಡುವ ಅವಕಾಶ ದೊರೆಯಲಿದೆ!

ಮೇ ೧೬, ೧೭ರಂದು ನಡೆಯಲಿರುವ ಕನಕಗಿರಿ ೫ನೇ ಉತ್ಸವದ ಸಂದರ್ಭದಲ್ಲಿ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ಹೆಲಿಕಾಪ್ಟರ್ ಪ್ರವಾಸದ ವ್ಯವಸ್ಥೆ ಮಾಡಲಿದೆ.

ರಾಜ್ಯದ ಹಲವು ಪ್ರಮುಖ ಉತ್ಸವಗಳಂತೆ ಕನಕಗಿರಿ ಉತ್ಸವವೂ ಅದ್ಧೂರಿಯಾಗಿ ನಡೆಯಬೇಕೆಂಬ ಕನಸು ಸಚಿವ ಶಿವರಾಜ ತಂಗಡಗಿ ಅವರದ್ದಾಗಿತ್ತು. ೨೦೧೦, ೨೦೧೩, ೨೦೧೫ ಹಾಗೂ ೨೦೨೪ರಲ್ಲಿ ಉತ್ಸವ ಆಚರಿಸಿದ್ದು, ತಂಗಡಗಿ ಅವರ ಪರಿಶ್ರಮವೂ ಇದೆ. ಈ ಮೊದಲು ನಡೆದ ಎರಡು ಉತ್ಸವಗಳಲ್ಲಿ ಹೆಲಿಕಾಪ್ಟರ್ ಪ್ರವಾಸ ವ್ಯವಸ್ಥೆ ಮಾಡುವ ಪ್ರಯತ್ನ ನಡೆಸಿದ್ದರು. ಆದರೆ ಹೆಲಿಕಾಪ್ಟರ್‌ ಪ್ರವಾಸದ ದರ ಹೆಚ್ಚಾಗಿದ್ದರಿಂದ ಆ ಆಲೋಚನೆ ಕೈ ಬಿಡಲಾಗಿತ್ತು. ಈ ಬಾರಿಯ ಉತ್ಸವದಲ್ಲಿ ಜನರಿಗೆ ಆಗಸದಿಂದ ಕನಕಗಿರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ನೋಡುವ ಅವಕಾಶ ಸಿಗಲಿದೆ. ಅದರಿಂದ ಸ್ಥಳೀಯರು ಸಂತಸಗೊಂಡಿದ್ದಾರೆ.

ಜಿಲ್ಲಾಡಳಿತ ಹಾಗೂ ಗಂಗಾವತಿಯ ಶೇಷಾದ್ರಿ ಶಿಕ್ಷಣ ಸಂಸ್ಥೆಯೊಂದಿಗೆ ಈಗಾಗಲೇ ಮಾತುಕತೆಯಾಗಿದ್ದು, ಬುಕ್ಕಿಂಗ್ ಸಹ ಆರಂಭಗೊಂಡಿದೆ. ಗಂಗಾವತಿ ಮೂಲದ ಶೇಷಾದ್ರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ. ಶರಣಕುಮಾರ ಒಡೆತನದ ಹೆಲಿಕಾಪ್ಟರ್ ಕನಕಗಿರಿ ಬಾನಿನಲ್ಲಿ ಹಾರಾಟ ನಡೆಸಲಿದೆ.


ಬಾನೆತ್ತರದಿಂದ ಕನಕಗಿರಿ ವೀಕ್ಷಿಸಲು ₹೩೬೪೯ ನಿಗದಿಯಾಗಿದ್ದು, ಬುಕ್ಕಿಂಗ್ ಮಾಡಿದವರಿಗೆ ಮಾತ್ರ ಈ ದರ ತೆಗೆದುಕೊಳ್ಳಲಾಗುತ್ತದೆ. ಬುಕ್ಕಿಂಗ್ ಮಾಡದೆ ಇರುವವರಿಗೆ ₹೩೮೦೦ ನಿಗದಿ ಮಾಡಲಾಗಿದೆ. ಬುಕ್ಕಿಂಗ್ ಮಾಡಿದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಗ್ರಾಹಕರು ಬುಕ್ಕಿಂಗ್ ಮಾಡಿಕೊಳ್ಳಲು ಮುಂದಾಗಿದ್ದಾರೆ. ೯೧೧೦೮೯೨೫೬೮ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ.

ಪ್ಯಾಮಿಲಿ ಪ್ಯಾಕೆಜ್ ವ್ಯವಸ್ಥೆ: ಕನಕಗಿರಿಯಿಂದ ಯುನೆಸ್ಕೋ ಪಟ್ಟಿಯಲ್ಲಿರುವ ಹಿರೇಬೆಣಕಲ್ ಮೊರೆರ್ ಗುಹೆ, ಅಂಜನಾದ್ರಿ ಪರ್ವತ, ಹಂಪಿ, ಆನೆಗೊಂದಿ, ನವವೃಂದಾವನ, ಪಂಪಾ ಸರೋವರ ಸೇರಿದಂತೆ ನಾನಾ ಐತಿಹ್ಯ ಕೇಂದ್ರಗಳ ವೀಕ್ಷಣೆಗೆ ಫ್ಯಾಮಿಲಿ ಪ್ಯಾಕೇಜ್ ವ್ಯವಸ್ಥೆಯೂ ಮಾಡಲಾಗಿದೆ. ಫ್ಯಾಮಿಲಿ ಪ್ಯಾಕೇಜ್‌ನ ದರ ಇನ್ನೂ ನಿಗದಿಗೊಳಿಸಿಲ್ಲ. ಇಂಧನ ದುಬಾರಿಯಾದ ಹಿನ್ನೆಲೆ ದರ ಹೆಚ್ಚಿಸುವುದು ಅನಿವಾರ್ಯವಾಗಿದೆ. ರಾಜ್ಯದ ಹಲವು ಉತ್ಸವಗಳ ಪೈಕಿ ಈ ಉತ್ಸವದಲ್ಲಿ ಹೆಲಿಕಾಪ್ಟರ್ ದರ ನಿಗದಿ ಕಡಿಮೆ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ಕನಕಗಿರಿ ಕ್ಷೇತ್ರದ ಜನ ಬಡವರಿದ್ದಾರೆ. ಬಡವರು ಸಹ ಹೆಲಿಕಾಪ್ಟರನಲ್ಲಿ ಓಡಾಡಲಿ ಎನ್ನುವುದು ನನ್ನ ಆಸೆಯಿಂದ ನಾನೆ ಮುತುವರ್ಜಿ ವಹಿಸಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ್ದೇನೆ. ಸಾಧ್ಯವಾದಷ್ಟು ದರ ಕಡಿಮೆಗೊಳಿಸಲು ಕಂಪನಿಯವರ ಜತೆ ಚರ್ಚಿಸಿದ್ದೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.