ಸುಂಟಿಕೊಪ್ಪ: ಪಂಚ ರಾಜ್ಯ ಚುನಾವಣೆಯಲ್ಲಿ 3 ರಾಜ್ಯಗಳಲ್ಲಿ ಭರ್ಜರಿ ಜಯ ಗಳಿಸಿದ ಹಿನ್ನೆಲೆಯಲ್ಲಿ ಸುಂಟಿಕೊಪ್ಪ ಬಿಜೆಪಿ ಪಕ್ಷದ ಕಾರ್ಯಕರ್ತರು ಕನ್ನಡ ವೃತ್ತದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.

ಸೋಮವಾರ ಸಂಜೆ ಕನ್ನಡ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಕಾರ್ಯಕರ್ತರು ಪಕ್ಷದ ಧ್ವಜವನ್ನು ಹಿಡಿದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜಾಧ್ಯಕ್ಷ ಬಿ.ವೈ. ವಿಜೇಯೇಂದ್ರ, ಬಿಎಸ್. ಯಡಿಯೂರಪ್ಪ ಹಾಗೂ ಎನ್‌ಡಿಎಗೆ ಜಯಘೋಷಗಳನ್ನು ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.ಗ್ರಾಪಂ ಮಾಜಿ ಅಧ್ಯಕ್ಷ ಪಿ.ಆರ್. ಸುನಿಲ್‌ ಕುಮಾರ್ ವಿಜಯೋತ್ಸವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ನರೇಂದ್ರ ಮೋದಿಯವರು ವಿಶ್ವಗುರು ಅಲ್ಲದೆ ದೇಶದಲ್ಲಿ ಉತ್ತಮ ಆಡಳಿತಗಾರರಾಗಿದ್ದು, ದೇಶದ ಬಹುಪಾಲು ರಾಜ್ಯಗಳು ಬಿಜೆಪಿ ಹಾಗೂ ಎನ್‌ಡಿಎ ಮಿತ್ರ ಕೂಟ ಪಕ್ಷಗಳು ಆಡಳಿತದ ಚುಕ್ಕಾಣಿಯನ್ನು ಹಿಡಿದಿವೆ. ಈ ಬಾರಿ ನಡೆದ ಚುನಾವಣೆಯಲ್ಲಿ ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಪುದುಚೇರಿಗಳಲ್ಲಿ ಗೆಲುವು ಸಾಧಿಸಿ, ಕೇರಳದಲ್ಲಿ 3 ಸ್ಥಾನಗಳನ್ನು ಗೆಲುವು ಸಾಧಿಸಿದ್ದು, ಮುಂದಿನ ದಿನಗಳಲ್ಲಿ ಕೇರಳವನ್ನು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು. ಈ ಸಂದರ್ಭ ಸುಂಟಿಕೊಪ್ಪ ಸ್ಥಾನೀಯ ಸಮಿತಿ ಅಧ್ಯಕ್ಷ ಧನುಕಾವೇರಪ್ಪ, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಬಿ.ಕೆ. ಪ್ರಶಾಂತ್ (ಕೋಕಾ), ಪಕ್ಷದ ಹಿರಿಯ ಮುಖಂಡ ಡಿ. ನರಸಿಂಹ, ಕೆದಕಲ್ ಗ್ರಾಪಂ ಮಾಜಿ ಉಪಾಧ್ಯಕ್ಷ ಸಂಜು ಪೊನ್ನಪ್ಪ, ಗ್ರಾಪಂ ಮಾಜಿ ಅಧ್ಯಕ್ಷೆ ಬಿ.ಐ. ಭವಾನಿ, ಹಿರಿಯ ಮುಖಂಡೆ ಲೀಲಾ ಮೇದಪ್ಪ, ಸಹನಾ, ಕೆದಕಲ್ ಗ್ರಾಪಂ ಮಾಜಿ ಸದಸ್ಯ ಕೃಷ್ಣ ಹಾಗೂ ಬಿಜೆಪಿ ಕಾರ್ಯರ್ತರಿದ್ದರು.