ಸಿ.ಟಿ.ರವಿ ಕೇಸ್‌ ವಜಾಕ್ಕೆ ಹೈಕೋರ್ಟ್‌ ನಕಾರ

| N/A | Published : May 03 2025, 12:20 AM IST / Updated: May 03 2025, 10:58 AM IST

CT Ravi

ಸಾರಾಂಶ

  ಸಿ.ಟಿ.ರವಿ ಅವರಿಗೆ ಕಟುವಾಗಿ ತಿಳಿಸಿರುವ ಹೈಕೊರ್ಟ್‌, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿದೆ.

  ಬೆಂಗಳೂರು : ‘ಬೆಳಗಾವಿ ಅಧಿವೇಶನದ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದರೆ ನಿಮಗೆ ಪ್ರಾಸಿಕ್ಯೂಷನ್‌ನಿಂದ ರಕ್ಷಣೆ ಒದಗಿಸಲು ಸಾಧ್ಯವಿಲ್ಲ’ ಎಂದು ಬಿಜೆಪಿಯ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರಿಗೆ ಕಟುವಾಗಿ ತಿಳಿಸಿರುವ ಹೈಕೊರ್ಟ್‌, ಪ್ರಕರಣಕ್ಕೆ ಸಂಬಂಧಿಸಿದ ಎಫ್‌ಐಆರ್‌ ರದ್ದುಪಡಿಸಲು ನಿರಾಕರಿಸಿದೆ.

ಸಿ.ಟಿ ರವಿ ಅವರು ಸಚಿವೆ ಹೆಬ್ಬಾಳ್ಕರ್‌ ವಿರುದ್ಧ ಬಳಕೆ ಮಾಡಿದ್ದಾರೆ ಎನ್ನಲಾದ ಅಥವಾ ತೋರಿದ ನಡತೆ ನಿಸ್ಸಂದೇಹವಾಗಿ ಮಹಿಳೆಯ ಘನತೆಗೆ ಹಾನಿ ಮಾಡುವುದಾಗಿದೆ. ಇದು ಯಾವುದೇ ರೀತಿಯಲ್ಲೂ ಸದನದ ಕಾರ್ಯನಿರ್ವಹಣೆಗೆ ಸಂಬಂಧಿಸಿದ್ದಲ್ಲ. ಸದನದೊಳಗೆ ಇಂತಹ ಮಾತು ಆಡಿದ ಶಾಸಕರಿಗೆ ಪ್ರಾಸಿಕ್ಯೂಷನ್‌ನಿಂದ ವಿನಾಯಿತಿ ನೀಡಲಾಗುವುದಿಲ್ಲ ಎಂದು ತನ್ನ ಆದೇಶದಲ್ಲಿ ತಿಳಿಸಿದೆ.

ಈ ಪ್ರಕರಣ ಸಂಬಂಧ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದು ಕೋರಿ ಸಿ.ಟಿ ರವಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಶುಕ್ರವಾರ ಈ ಆದೇಶ ನೀಡಿದೆ.

ಬೆಳಗಾವಿ ಸುವರ್ಣಸೌಧದಲ್ಲಿ ನಡೆದಿದ್ದ ಅಧಿವೇಶನದ ವೇಳೆ ಹೆಬ್ಬಾಳ್ಕರ್‌ ವಿರುದ್ಧ ಅಶ್ಲೀಲ ಪದ ಬಳಸಿದ ಆರೋಪ ಹಿನ್ನೆಲೆಯಲ್ಲಿ ಬಾಗೇವಾಡಿ ಠಾಣಾ ಪೊಲೀಸರು, ಸಿ.ಟಿ. ರವಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಮಹಿಳೆ ಘನತೆಗೆ ಹಾನಿ ಆರೋಪದಡಿ 2024ರ ಡಿ.19ರಂದು ಎಫ್‌ಐಆರ್‌ ದಾಖಲಿಸಿದ್ದರು. ಅದನ್ನು ರದ್ದುಪಡಿಸಲು ಕೋರಿ ಸಿ.ಟಿ.ರವಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ ಈ ಆದೇಶ ನೀಡಿದ್ದು, ವಾಸ್ತವವಾಗಿ ಅರ್ಜಿದಾರರು ದೂರುದಾರರ ವಿರುದ್ಧ ಅಶ್ಲೀಲ ಪದ ಮಾತನಾಡಿದ್ದಾರೆಯೇ ಅಥವಾ ಉಚ್ಚರಿಸಿದ್ದಾರೆಯೇ ಅಥವಾ ಅವರ ಘನತೆ, ನಮ್ರತೆಯನ್ನು ಕುಗ್ಗಿಸುವ-ಕೆಣಕುವಂತಹ ಸನ್ನೆ ತೋರಿದ್ದಾರೆಯೇ? ಎಂಬುದು ಇಲ್ಲಿಯವರೆಗೆ ನಿಗೂಢವಾಗಿದೆ. ಆ ಕುರಿತು ತನಿಖೆ ಮಾಡಬೇಕಾಗಿದೆ ಎಂದು ಪೀಠ ಹೇಳಿದೆ.

ಮಹಿಳೆ ಗೌರವಕ್ಕೆ ಹಾನಿ ನಾಗರಿಕ ಸಮಾಜ ಒಪ್ಪಲ್ಲ:

ಮಹಿಳೆಯರಿಗೆ ಯಾವ ರೀತಿ ಗೌರವ ನೀಡಲಾಗುತ್ತದೆ ಎಂಬುದು ಆ ಸಮಾಜ ಯಾವ ಮಟ್ಟಿಗೆ ನಾಗರಿಕ ಎಂಬುದನ್ನು ತೋರಿಸುತ್ತದೆ. ನಾಗರಿಕ ಸಮಾಜದಲ್ಲಿ ಜವಾಬ್ದಾರಿ ಸ್ಥಾನದಲ್ಲಿರುವ ಶಾಸಕರು, ಮಹಿಳೆಯ ಗೌರವಕ್ಕೆ ಧಕ್ಕೆ ಉಂಟು ಮಾಡುವುದನ್ನು ಕಲ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಅಂತಹ ಚಿಂತನೆ ವಿಷಾದಕರ ಮಾತ್ರವಲ್ಲ; ಶೋಚನೀಯವೂ ಆಗಿದೆ. ಈ ಪ್ರಕರಣದಲ್ಲಿ ಅರ್ಜಿದಾರರು ಮಹಿಳೆಗೆ ದೈಹಿಕ ಸ್ವರೂಪದ ಘಾಸಿಗೊಳಿಸಿಲ್ಲ. ಆದರೆ, ಮಹಿಳೆಯ ಘನತೆಗೆ ಕುಂದು ತರುವಂತಹ ಹೇಳಿಕೆ ನೀಡಿದ್ದು, ಈ ರೀತಿ ಮಹಿಳೆಯನ್ನು ಅವಮಾನಿಸುವುದು ಶಿಕ್ಷಾರ್ಹ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹಾಗೆಯೇ, ಅರ್ಜಿದಾರರು ದೂರದಾರರ ಬಗ್ಗೆ ಬಳಸಿರುವ ಪದವು ನಿಸ್ಸಂದೇಹವಾಗಿ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಸೆಕ್ಷನ್‌ 75 (ಲೈಂಗಿಕ ಕಿರುಕುಳ) ಮತ್ತು ಮತ್ತು 79 ಅಡಿಯ (ಉದ್ದೇಶಪೂರ್ವಕವಾಗಿ ಮಹಿಳೆ ಘನತೆ ಹಾನಿ) ಅಪರಾಧದ ಅಂಶಗಳನ್ನು ಒಳಗೊಂಡಿದೆ. ಹೀಗಾಗಿ ಕ್ರಿಮಿನಲ್‌ ಪ್ರಾಸಿಕ್ಯೂಷನ್‌ನಿಂದ ಶಾಸಕರಿಗೆ ವಿನಾಯಿತಿ/ರಕ್ಷಣೆ ದೊರೆಯುವುದಿಲ್ಲ ಎಂದು ಪೀಠ ಹೇಳಿದೆ.

ಆದೇಶದಲ್ಲಿ ವ್ಯಕ್ತಪಡಿಸಿರುವ ಈ ಅಭಿಪ್ರಾಯಗಳು ಕೇವಲ ಪ್ರಕರಣ ರದ್ದುಪಡಿಸಬೇಕೆಂಬ ಅರ್ಜಿದಾರರ ಕೋರಿಕೆಗೆ ಸೀಮಿತವಾಗಿರುತ್ತದೆ. ಈ ಅಭಿಪ್ರಾಯ ಪ್ರಕರಣದ ತನಿಖೆ ಅಥವಾ ವಿಚಾರಣಾ ನ್ಯಾಯಾಲಯದ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ ಎಂದು ಪೀಠ ಸ್ಪಷ್ಟಪಡಿಸಿದೆ.