ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅಂಧ ಬಾಲಕಿಯ ಸಾಧನೆ

| N/A | Published : May 03 2025, 12:19 AM IST / Updated: May 03 2025, 01:05 PM IST

ಸಾರಾಂಶ

ಆರಿಹಾ 9ನೇ ತರಗತಿಯವರೆಗೆ ಎಲ್ಲರಂತೆ ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಳು. ಬ್ರೈಲ್‌ ಶಿಕ್ಷಣ ಕುರಿತು ಯಾವುದೇ ರೀತಿಯ ತರಬೇತಿ ಇರಲಿಲ್ಲ. 10ನೇ ತರಗತಿಗೆ ಅಂಧ ಶಾಲೆಗೆ ಬಂದ ವೇಳೆ ಕಲಿಕೆಗೆ ಅಲ್ಪ ಪ್ರಮಾಣದ ಹಿನ್ನಡೆ ಅನುಭ‍ವಿಸುವಂತಾಯಿತು.

ಅಜೀಜ ಅಹ್ಮದ ಬಳಗಾನೂರ 

ಹುಬ್ಬಳ್ಳಿ : ಎಲ್ಲ ಅಂಗಗಳು ಸರಿಯಾಗಿದ್ದರೂ ಕಲಿಯಲು ಹಿಂಜರಿಕೆಯ ವಿದ್ಯಾರ್ಥಿಗಳಿರುವ ಇಂದಿನ ದಿನಮಾನಗಳಲ್ಲಿ ವಿಶೇಷಚೇತನ ಬಾಲಕಿಯೋರ್ವಳು ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 89.60 ಅಂಕ ಪಡೆದು ಇತರರಿಗೆ ಸ್ಪೂರ್ತಿಯಾಗಿದ್ದಾಳೆ.

ಇಲ್ಲಿನ ಆನಂದನಗರದ ಶ್ರೀ ಆರೂಢ ಅಂಗವಿಕಲ ಶಿಕ್ಷಣ ಸಂಸ್ಥೆಯ ಸದ್ಗುರು ಶ್ರೀಸಿದ್ಧಾರೂಢ ಅಂಧ ಮಕ್ಕಳ ವಸತಿಯುತ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಅರಿಹಾ ರಹೀಮ ಸಯ್ಯದ ಎಂಬ ಬಾಲಕಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 560 (ಶೇ. 89.60) ಅಂಕಗಳೊಂದಿಗೆ ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗುವ ಮೂಲಕ ಸಾಧನೆ ಮಾಡಿದ್ದಾಳೆ.

ಇಲ್ಲಿನ ಆಕ್ಷಯ ಕಾಲನಿ ನಿವಾಸಿಗಳಾದ ರಹೀಮ ಸಯ್ಯದ ಹಾಗೂ ತಸೀನಾ ಸಯ್ಯದ ದಂಪತಿಯ ಪುತ್ರಿ ಅರಿಹಾ ದೃಷ್ಟಿಹೀನಳಾಗಿದ್ದಾಳೆ.ಇರುವ ಎರಡು ಕಣ್ಣುಗಳಲ್ಲಿ ಒಂದು ಕಣ್ಣು ಪೂರ್ಣ ಪ್ರಮಾಣದಲ್ಲಿ ಕುರುಡಾಗಿದ್ದರೆ ಮತ್ತೊಂದು ಕಣ್ಣು ಶೇ.80ರಷ್ಟು ಕುರುಡಾಗಿದೆ.

ಮೊದಲು 1ನೇ ತರಗತಿಯಿಂದ 9ನೇ ತರಗತಿಯವರೆಗೆ ನಗರ ಸೈಂಟ್‌ ಅಂಥೋನಿ ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಅರಿಹಾಗೆ ದೊಡ್ಡವಳಾದಂತೆ ದೃಷ್ಟಿಹೀನತೆಯು ಕಲಿಕೆಗೆ ತೊಡಕಾಗಲು ಆರಂಭಿಸಿತು. ಇದರಿಂದ ತೀವ್ರ ಅತಂಕಕ್ಕೊಳಗಾಗಿ ತಂದೆಯ ಬಳಿ ತನ್ನ ಸಮಸ್ಯೆ ಹೇಳಿಕೊಂಡಳು. ಆಗ ತಂದೆ ರಹೀಮ ಮಗಳಿಗೆ ಧೈರ್ಯ ತುಂಬಿ ಸ್ನೇಹಿತರೋರ್ವರ ಸಲಹೆ ಮೇರೆಗೆ ಇಲ್ಲಿನ ಆನಂದನಗರದಲ್ಲಿರುವ ಶ್ರೀ ಆರೂಢ ಅಂಗವಿಕಲರ ಶಿಕ್ಷಣ ಸಂಸ್ಥೆಗೆ ಸೇರಿಸಿದರು.

ಒಂದೇ ವರ್ಷದಲ್ಲಿ ಬ್ರೈಲ್‌ ಶಿಕ್ಷಣ: ಆರಿಹಾ 9ನೇ ತರಗತಿಯವರೆಗೆ ಎಲ್ಲರಂತೆ ಸಾಮಾನ್ಯ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದಳು. ಬ್ರೈಲ್‌ ಶಿಕ್ಷಣ ಕುರಿತು ಯಾವುದೇ ರೀತಿಯ ತರಬೇತಿ ಇರಲಿಲ್ಲ. 10ನೇ ತರಗತಿಗೆ ಅಂಧ ಶಾಲೆಗೆ ಬಂದ ವೇಳೆ ಕಲಿಕೆಗೆ ಅಲ್ಪ ಪ್ರಮಾಣದ ಹಿನ್ನಡೆ ಅನುಭ‍ವಿಸುವಂತಾಯಿತು. ಛಲಬಿಡದ ಆರಿಹಾ ಒಂದೇ ವರ್ಷದಲ್ಲಿ ಬ್ರೈಲ್‌ ತರಬೇತಿ ಪಡೆಯುವುದರೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 89.60 ಅಂಕಗಳನ್ನು ಪಡೆಯುವುದರ ಮೂಲಕ ಸಂಸ್ಥೆಯ ಕೀರ್ತಿ ಹೆಚ್ಚಿಸಿದ್ದಾಳೆ.

ತಂದೆಯ ಪ್ರೋತ್ಸಾಹ: ಅರಿಹಾ ಅವರ ತಂದೆ ರಹೀಮ ಗ್ಯಾರೇಜ್‌ವೊಂದರಲ್ಲಿ ಕಾರ್‌ ಮೆಕ್ಯಾನಿಕ್‌ ಆಗಿ ಕೆಲಸ ಮಾಡುತ್ತಿದ್ದಾರೆ. ತನ್ನ ಮಗಳು ದೃಷ್ಟಿಹೀನತೆಯುಳ್ಳವಳು ಎಂದು ಗೊತ್ತಾಗುತ್ತಿದ್ದಂತೆ ಎದೆಗುಂದದೆ ಮಗಳಿಗೆ ಕಲಿಕೆಗೆ ಬೇಕಾದ ಎಲ್ಲ ರೀತಿಯ ಪ್ರೋತ್ಸಾಹ ನೀಡಿದ್ದಾರೆ. ಜತೆಗೆ ಅರಿಹಾ ತಾಯಿಯೂ ಸಹ ಇದಕ್ಕೆ ಕೈಜೋಡಿಸಿದ್ದಾರೆ.

ಶೇ. 100 ಫಲಿತಾಂಶ: ವರ್ಷದಲ್ಲಿ ಬ್ರೈಲ್‌ ಶಿಕ್ಷಣ ಪಡೆಯುವುದು ತುಂಬಾ ಕಷ್ಟದ ಕೆಲಸ ಹೀಗಿರುವಾಗ ಎಸ್ಸೆಸ್ಸೆಲ್ಸಿ ಪರೀಕ್ಷೆ ಎದುರಿಸಲು ಅರಿಹಾಳನ್ನು ಸನ್ನದ್ಧಳಾಗುವಂತೆ ಮಾಡಿದ್ದು ಶಾಲೆಯ ಶಿಕ್ಷಕ ವರ್ಗ. ನಿತ್ಯ ತರಗತಿಯೊಂದಿಗೆ ಸಂಜೆ 2 ಗಂಟೆಗಳ ಕಾಲ ಎಲ್ಲ ಮಕ್ಕಳಿಗೂ ವಿಶೇಷ ತರಗತಿ ಹಾಕಿ ಕಲಿಕೆಗೆ ಪ್ರೋತ್ಸಾಹಿಸಿದ್ದರ ಫಲವಾಗಿ ಶಾಲೆಯಲ್ಲಿ ಈ ವರ್ಷವೂ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕುಳಿತಿದ್ದ 15ಕ್ಕೆ 15 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ. 100ರಷ್ಟು ಫಲಿತಾಂಶ ದೊರಕಿದೆ.

ನನ್ನ ಮಗಳಲ್ಲಿಯೇ ಕುಟುಂಬದ ಭವಿಷ್ಯ ಅಡಗಿದೆ. ಅವಳಿಗೆ ಅಂಧತ್ವ ಎಂಬ ಕೊರಗು ಬಾರದಂತೆ ನೋಡಿಕೊಳ್ಳುವ ಇಚ್ಛೆಯಿದೆ. ಇದಕ್ಕೆ ನನ್ನ ಪತ್ನಿಯೂ ಕೈಜೋಡಿಸಿದ್ದಾಳೆ. ಅವಳು ಎಲ್ಲಿಯವರೆಗೆ ಕಲಿಯುತ್ತಾಳೆಯೋ ಅಲ್ಲಿಯ ವರೆಗೂ ಕಲಿಸುವ ಇಚ್ಛೆಯಿದೆ ಎಂದು ರಹೀಮ ಸಯ್ಯದ ಹೇಳಿದ್ದಾರೆ.ಕಳೆದ 22 ವರ್ಷಗಳಿಂದ ವಿಶೇಷ ಚೇತನ ಮಕ್ಕಳಿಗೆ ಶಿಕ್ಷಣ ನೀಡುತ್ತಾ ಬರುತ್ತಿರುವ ಸಂಸ್ಥೆ. ಪ್ರತಿ ವರ್ಷವೂ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುತ್ತಿರುವುದು ಸಂತಸ ತಂದಿದೆ. ಮಕ್ಕಳಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಶಿಕ್ಷಣ ನೀಡುವ ಉದ್ದೇಶ ಹೊಂದಲಾಗಿದೆ ಎಂದು ಶ್ರೀ ಆರೂಢ ಅಂಗವಿಕಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಗುರುಸಿದ್ದೇಶ್ವರ ಲಕ್ಕುಂಡಿ ತಿಳಿಸಿದ್ದಾರೆ.