ಎಸ್ಸೆಸ್ಸೆಲ್ಸಿ ಫಲಿತಾಂಶ: 17ನೇ ಸ್ಥಾನಕ್ಕೆ ತೃಪ್ತಿಪಟ್ಟ ಗದಗ ಜಿಲ್ಲೆ

| Published : May 03 2025, 12:20 AM IST

ಎಸ್ಸೆಸ್ಸೆಲ್ಸಿ ಫಲಿತಾಂಶ: 17ನೇ ಸ್ಥಾನಕ್ಕೆ ತೃಪ್ತಿಪಟ್ಟ ಗದಗ ಜಿಲ್ಲೆ
Share this Article
  • FB
  • TW
  • Linkdin
  • Email

ಸಾರಾಂಶ

ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಸಾಲಿನಂತೆ ಈ ಬಾರಿಯೂ 17ನೇ ಸ್ಥಾನವನ್ನು ಕಾಯ್ದುಕೊಂಡಿರುವ ಗದಗ ಜಿಲ್ಲೆಯು ವಿದ್ಯಾಕಾಶಿ ಧಾರವಾಡ ಜಿಲ್ಲೆಗಿಂತಲೂ ಒಂದು ಸ್ಥಾನ ಮೇಲಿದೆ ಎನ್ನುವ ಅಲ್ಪ ತೃಪ್ತಿ ಪಡುವಂತಾಗಿದೆ.

ಗದಗ:ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟವಾಗಿದ್ದು, ಕಳೆದ ಸಾಲಿನಂತೆ ಈ ಬಾರಿಯೂ 17ನೇ ಸ್ಥಾನವನ್ನು ಕಾಯ್ದುಕೊಂಡಿರುವ ಗದಗ ಜಿಲ್ಲೆಯು ವಿದ್ಯಾಕಾಶಿ ಧಾರವಾಡ ಜಿಲ್ಲೆಗಿಂತಲೂ ಒಂದು ಸ್ಥಾನ ಮೇಲಿದೆ ಎನ್ನುವ ಅಲ್ಪ ತೃಪ್ತಿ ಪಡುವಂತಾಗಿದೆ.

ಜಿಲ್ಲೆಯ ಸರಕಾರಿ ಪ್ರೌಢಶಾಲೆ-138, ಅನುದಾನಿತ ಪ್ರೌಢಶಾಲೆ-102, ಅನುದಾನರಹಿತ- 66 ಪ್ರೌಢ ಶಾಲೆಗಳು ಸೇರಿದಂತೆ ಒಟ್ಟು 306 ಶಾಲೆಗಳ 14,521 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅವರಲ್ಲಿ 9834 ಮಕ್ಕಳು ಪಾಸಾಗಿ ಒಟ್ಟು ಶೇ 67.72ರಷ್ಟು ಫಲಿತಾಂಶ ಪಡೆದಿದೆ.

ಜಿಲ್ಲೆಯಲ್ಲಿ ಪರೀಕ್ಷೆಗೆ ಹಾಜರಾದ ಮಕ್ಕಳಲ್ಲಿ 7091 ವಿದ್ಯಾರ್ಥಿಗಳು ಹಾಗೂ 7430 ವಿದ್ಯಾರ್ಥಿನಿಯರಿದ್ದು, ಅವರಲ್ಲಿ 4059 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಒಟ್ಟು 5775 ವಿದ್ಯಾರ್ಥಿನಿಯರು ತೇರ್ಗಡೆಯಾಗುವ ಮೂಲಕ ಒಟ್ಟು ಪಾಸಾದವರ ಸಂಖ್ಯೆಯಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ವೈಯಕ್ತಿಕ ಫಲಿತಾಂಶದಲ್ಲಿ ಗದಗ ಜಿಲ್ಲೆ ಅತ್ಯುತ್ತಮ ಸಾಧನೆ ಮಾಡಿದ್ದು, 625ಕ್ಕೆ 623 ಅಂಕ ಪಡೆದಿರುವ (ಶೇ 99.68) 4 ವಿದ್ಯಾರ್ಥಿಗಳು ಜಿಲ್ಲೆಗೆ ಪ್ರಥಮ ಸ್ಥಾನವನ್ನು ಹಂಚಿಕೊಂಡಿದ್ದಾರೆ. 622 ಅಂಕ ಪಡೆದಿರುವ (ಶೇ 99.52) 5 ವಿದ್ಯಾರ್ಥಿಗಳು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. 621 ಅಂಕ ಪಡೆದಿರುವ (ಶೇ 99.36) ಇಬ್ಬರು ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದ್ದಾರೆ.

ನೂರಕ್ಕೆ ನೂರು ಫಲಿತಾಂಶ: ಜಿಲ್ಲೆಯ 11 ಪ್ರೌಢ ಶಾಲೆಗಳು ನೂರಕ್ಕೆ ನೂರು ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿವೆ. 5 ಸರ್ಕಾರಿ ಶಾಲೆಗಳು, 1 ಅನುದಾನಿತ ಹಾಗೂ 5 ಅನುದಾನ ರಹಿತ ಶಾಲೆಗಳಿವೆ. ಜಿಲ್ಲೆಯಲ್ಲಿ 39 ಶಾಲೆಗಳು ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದಿದ್ದು, 4 ಸರ್ಕಾರಿ, 10 ಅನುದಾನ ರಹಿತ, 25 ಅನುದಾನಿತ ಶಾಲೆಗಳಲ್ಲಿಯೇ ಕಡಿಮೆ ಫಲಿತಾಂಶ ಬಂದಿದೆ.

3 ಶಾಲೆಗಳು ಸೊನ್ನೆ ಸುತ್ತಿವೆ:ಜಿಲ್ಲೆಯ 3 ಶಾಲೆಗಳು ಶೂನ್ಯ ಫಲಿತಾಂಶ ಪಡೆದಿದ್ದು, ಅವುಗಳಲ್ಲಿ ಒಂದು ಅನುದಾನಿತ ಮತ್ತು ಎರಡು ಅನುದಾನ ರಹಿತ ಪ್ರೌಢಶಾಲೆಗಳಿವೆ. ಅನುದಾನಿತ ಪ್ರೌಢ ಶಾಲೆಗಳಲ್ಲೀಗ ಬೋಧನೆ ಸರಿಯಾಗಿಲ್ಲ ಎನ್ನುವ ಸಾರ್ವಜನಿಕರ ಮಾತಿಗೆ ಈ ಬಾರಿ ಫಲಿತಾಂಶ ಉತ್ತಮ ಉದಾಹರಣೆಯಾಗಿದ್ದು, ಶೇ 40ಕ್ಕಿಂತಲೂ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಸಂಖ್ಯೆಯಲ್ಲಿಯೇ ಅನುದಾನಿತ ಶಾಲೆಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ.

ಯಥಾಸ್ಥಿತಿ: ಎಸ್ಎಸ್ಎಲ್‌ಸಿ ಫಲಿತಾಂಶದಲ್ಲಿಯೂ ಗದಗ ಜಿಲ್ಲೆ ಕಳೆದ ಸಾಲಿನಂತೆ ಈ ಬಾರಿಯೂ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ನೇತೃತ್ವದಲ್ಲಿ ಫಲಿತಾಂಶ ಸುಧಾರಣೆಗಾಗಿ ಸಾಕಷ್ಟು ಕ್ರಮ ತೆಗೆದುಕೊಂಡು ವಿಶೇಷ ತರಗತಿಗಳನ್ನು ನಡೆಸಿದ್ದರೂ ಶೇಕಡಾ ಫಲಿತಾಂಶದಲ್ಲಿ ಸುಧಾರಣೆಯಾಗಿದೆ. ಆದರೆ ಜಿಲ್ಲಾವಾರು ಪಟ್ಟಿಯಲ್ಲಿ ಮೇಲೇರಿಲ್ಲ.

ವಿದ್ಯಾಕಾಶಿಗಿಂತಲೂ ಮೇಲೆ:ಗದಗ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ಎಂದರೆ ಪಕ್ಕದ ಧಾರಾವಾಡ ಜಿಲ್ಲೆಗೆ ಹೋಗಬೇಕು, ಅದು ವಿದ್ಯಾಕಾಶಿ ಎನ್ನುವ ಮಾತುಗಳು ಕೇಳಿಬರುತ್ತಿದ್ದವು, ಪ್ರಸಕ್ತ ಸಾಲಿನ ಫಲಿತಾಂಶದಲ್ಲಿ ಗದಗ ಜಿಲ್ಲೆ ಧಾರವಾಡ ಜಿಲ್ಲೆಗಿಂತಲೂ ಒಂದು ಸ್ಥಾನ ಮೇಲಿದ್ದು, ಇಲ್ಲಿನ ಶಿಕ್ಷಣ ಗುಣಮಟ್ಟವು ಸುಧಾರಣೆಯಾಗುತ್ತಿದೆ ಎನ್ನುವುದಕ್ಕೆ ಉತ್ತಮ ಉದಾಹರಣೆ. ಆದರೆ ಗದಗ ಜಿಲ್ಲೆ ಮುಂಬರುವ ದಿನಗಳಲ್ಲಿ ಮೊದಲ 10 ಸ್ಥಾನದಲ್ಲಿ ಬರಬೇಕು ಎನ್ನುವುದು ಎಲ್ಲರ ಹೆಬ್ಬಯಕೆಯಾಗಿದೆ.