ಸಾರಾಂಶ
ಬಂಟ್ವಾಳ : ದುಷ್ಕರ್ಮಿಗಳಿಂದ ಹತ್ಯೆ ಗೀಡಾದ ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ತಾಯಿ ಮನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಪುಳಿಮಜಲುವಿನಲ್ಲಿ ಮೃತದೇಹದ ಅಂತ್ಯಸಂಸ್ಕಾರ ನಡೆಯಿತು. ಅಗ್ನಿ ಸ್ಪರ್ಶದ ವೇಳೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುಟುಂಬಿಕರ ಜೊತೆ ಇದ್ದು, ತುಳಸಿ ನೀರು ಬಿಟ್ಟು ಚಿತೆಗೆ ತುಪ್ಪ ಅರ್ಪಿಸಿದರು. ವಿಪಕ್ಷ ನಾಯಕ ಆರ್. ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ , ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್, ಸಿಟಿ ರವಿ ಮತ್ತಿತರ ಪ್ರಮುಖರು ಪಾಲ್ಗೊಂಡರು.
ಕರಾವಳಿ ಜಿಲ್ಲೆಯ ಶಾಸಕರಾದ ರಾಜೇಶ್ ನಾಯ್ಕ್, ಡಾ.ವೈ ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಉಮಾನಾಥ ಕೋಟ್ಯಾನ್, ಯಶ್ಪಾಲ್ ಸುವರ್ಣ, ಕಿಶೋರ್ ಕುಮಾರ್ ಪುತ್ತೂರು, ಆರೆಸ್ಸೆಸ್ ಪ್ರಮುಖರಾದ ಡಾ.ಪ್ರಭಾಕರ ಭಟ್ ಕಲ್ಲಡ್ಕ, ಹಿಂದೂ ಸಂಘಟನೆಯ ಪ್ರಮುಖರಾದ ಶರಣ್ ಪಂಪ್ ವೆಲ್, ಅರುಣ್ ಕುಮಾರ್ ಪುತ್ತಿಲ, ಪುನೀತ್ ಕೆರೆಹಳ್ಳಿ ಹಾಗೂ ವಿಶ್ವ ಹಿಂದು ಪರಿಷತ್, ಆರೆಸ್ಸೆಸ್, ಬಜರಂಗದಳ, ಹಿಂದು ಜಾಗರಣಾ ವೇದಿಕೆ ಪ್ರಮುಖರು ಅಂತಿಮ ಯಾತ್ರೆಯಲ್ಲಿ ಭಾಗವಹಿಸಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಅಂತ್ಯಸಂಸ್ಕಾರದಲ್ಲೂ ಕ ಭಾಗಿಯಾಗಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಬಂದೋಬಸ್ತ್ ಕೈ ಗೊಂಡರು.
ತಾಲೂಕಿನ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು. ತಹಸೀಲ್ದಾರ್ ಅರ್ಚನ ಭಟ್ ಉಪಸ್ಥಿತರಿದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ಮಾರ್ಗದರ್ಶನ ಮಾಡಿದರು.
ಅಭಿಮಾನಿಗಳಿಂದ ಸಿದ್ಧತೆ:ಬಂಟ್ವಾಳ, ವಗ್ಗ ಮೂಲಕ ಕಾರಿಂಜದ ಅವರ ನಿವಾಸಕ್ಕೆ ತೆರಳಿದಾಗ ಮಧ್ಯಾಹ್ನವಾಗಿತ್ತು. ಅಷ್ಟರಾಗಲೇ ಬೈಕ್, ಕಾರುಗಳಲ್ಲಿ ಅಭಿಮಾನಿಗಳು ಆಗಮಿಸಿ, ಮನೆಗೆ ತೆರಳುವ ದಾರಿಯನ್ನು ಸಮತಟ್ಟು ಮಾಡಿ ವಾಹನ ಬರಲು ಅನುವುಮಾಡಿಕೊಟ್ಟರು. ಆವರಣದಲ್ಲಿ ಶಾಮೀಯಾನ, ಕುರ್ಚಿ ಮತ್ತಿತರ ವ್ಯವಸ್ಥೆಗೆ ಅಭಿಮಾನಿಗಳು ಸಿದ್ಧತೆ ನಡೆಸಿದ್ದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ಮಾರ್ಗದರ್ಶನ ನೀಡಿದರು.ಬಂಟ್ವಾಳ ಮಂಗಳೂರು ಹೊರವಲಯದ ಬಜಪೆಯ ಕಿನ್ನಿಪದವಿನಲ್ಲಿ ಗುರುವಾರ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಭೀಕರ ಹತ್ಯೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಖಂಡನೆ ವ್ಯಕ್ತಪಡಿಸಿದ್ದಾರೆ.ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೊಲೆ ಸುಲಿಗೆಗಳು,ಗಲಭೆಗಳು ನಿರಂತರವಾಗಿ ನಡೆಯುತ್ತಿದೆ ಎಂದು ಆರೋಪಿಸಿದರು.