ಸಾರಾಂಶ
ಹಿಂದು ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ (32) ಹತ್ಯೆ ಬೆನ್ನಲ್ಲೇ ಮಂಗಳೂರು ಪ್ರಕ್ಷುಬ್ಧಗೊಂಡಿದೆ.
ಮಂಗಳೂರು : ಹಿಂದು ಕಾರ್ಯಕರ್ತ, ರೌಡಿಶೀಟರ್ ಸುಹಾಸ್ ಶೆಟ್ಟಿ (32) ಹತ್ಯೆ ಬೆನ್ನಲ್ಲೇ ಮಂಗಳೂರು ಪ್ರಕ್ಷುಬ್ಧಗೊಂಡಿದೆ. ಹತ್ಯೆಗೆ ಪ್ರತೀಕಾರವಾಗಿ ಮಂಗಳೂರಿನ 2 ಕಡೆ ಹಾಗೂ ಉಡುಪಿಯ 1 ಕಡೆ ಸೇರಿ 3 ಕಡೆ ಚೂರಿ ಇರಿತ ಘಟನೆ ಹಾಗೂ 1 ಕಡೆ ತಲವಾರ್‌ನಿಂದ ಹಲ್ಲೆ ಸಂಭವಿಸಿದ್ದು, ಐವರಿಗೆ ಗಾಯಗಳಾಗಿವೆ. ಇದೇ ವೇಳೆ, ಪರಾರಿ ಆಗಿರುವ ಸುಹಾಸ್ ಹಂತಕರ ಪತ್ತೆಗೆ ಯತ್ನಗಳು ಮುಂದುವರಿದಿವೆ.
ಈ ಮಧ್ಯೆ, ಹತ್ಯೆ ಖಂಡಿಸಿ ಹಿಂದುಪರ ಸಂಘಟನೆಗಳು ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ಕರೆ ನೀಡಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಅಂಗಡಿ-ಮಂಗಟ್ಟುಗಳು ಬಂದ್ ಆಗಿದ್ದವು. ಬಂದ್ ವೇಳೆ, ಬಸ್‌ಗಳಿಗೆ ಕಲ್ಲು ತೂರಲಾಗಿದ್ದು, 9 ಬಸ್‌ಗಳು ಜಖಂಗೊಂಡಿವೆ. ಜೊತೆಗೆ, ಬಲವಂತವಾಗಿ ಅಂಗಡಿ ಬಂದ್ ಮಾಡಿಸಲು ಮುಂದಾದ ಪ್ರತಿಭಟನಾಕಾರರು ಹಾಗೂ ಪೊಲೀಸರ ಮಧ್ಯೆ ಅಲ್ಲಲ್ಲಿ ಮಾತಿನ ಚಕಮಕಿ ಕೂಡ ನಡೆದಿದೆ. ಮುಂಜಾಗ್ರತಾ ಕ್ರಮವಾಗಿ ಮೇ 6ರವರೆಗೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮದ್ಯ ಮಾರಾಟ ನಿಷೇಧಿಸಲಾಗಿದೆ.
3 ಕಡೆ ಪ್ರತೀಕಾರದ ಇರಿತ, 2 ಹಲ್ಲೆ:ಸುಹಾಸ್ ಶೆಟ್ಟಿ ಹತ್ಯೆ ಬೆನ್ನಿಗೇ ಪ್ರತೀಕಾರದ ಕ್ರಮವಾಗಿ ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನ ಜಾವದವರೆಗೆ ಮಂಗಳೂರಿನ ವಿವಿಧೆಡೆ 3 ಪ್ರತ್ಯೇಕ ಘಟನೆಗಳಲ್ಲಿ ಮೂವರು ಮುಸ್ಲಿಂ ಯುವಕರಿಗೆ ಚೂರಿಯಿಂದ ಇರಿಯಲಾಗಿದೆ. ಅಡ್ಯಾರಿನ ಕಣ್ಣೂರು ಬಳಿ ನೌಷಾದ್, ಮಂಗಳೂರಿನ ಕೊಂಚಾಡಿಯಲ್ಲಿ ಮಹಮ್ಮದ್ ಲುಕ್ಮಾನ್ ಹಾಗೂ ತೊಕ್ಕೊಟ್ಟಿನ ಮಾಯಾ ಬಜಾರ್ ಬಳಿ ಅಳೇಕಲ ನಿವಾಸಿ ಫೈಝಲ್ ಎಂಬುವರಿಗೆ ಯುವಕರ ಗುಂಪು ಚೂರಿ ಇರಿದಿದ್ದು ಮೂವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ.ಇದೇ ವೇಳೆ, ಪಕ್ಕದ ಜಿಲ್ಲೆ ಉಡುಪಿಯ ಶೇಡಿಗುಡ್ಡೆ ಬಳಿ ಗುರುವಾರ ರಾತ್ರಿ ಮುಸ್ಲಿಂ ಆಟೋ ಚಾಲಕ ಅಬೂಬಕ್ಕರ್ (57) ಎಂಬುವರ ಮೇಲೆ ಹಿಂದು ಸಂಘಟನೆಯ ಯುವಕರು ಹಲ್ಲೆ ನಡೆಸಿದ್ದು, ಅವರು ತೀವ್ರವಾಗಿ ಗಾಯಗೊಂಡು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಮಧ್ಯೆ, ಶುಕ್ರವಾರ ಸಂಜೆಯ ವೇಳೆ, ಮಂಗಳೂರಿನ ಪಂಜಿಮೊಗರು ಬಳಿ ಇಬ್ಬರು ದುಷ್ಕರ್ಮಿಗಳು ತಲ್ವಾರ್ ನಿಂದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಸುಹಾಸ್ ಅಂತ್ಯಕ್ರಿಯೆ:
ಈ ಮಧ್ಯೆ, ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಸುಹಾಸ್ ಶೆಟ್ಟಿಯ ಅಂತ್ಯಕ್ರಿಯೆ ಅವರ ಹುಟ್ಟೂರು ಬಂಟ್ವಾಳ ತಾಲೂಕು ಕಾರಿಂಜದ ಪುಳಿಮಜಲಿನಲ್ಲಿ ಶುಕ್ರವಾರ ಮಧ್ಯಾಹ್ನ ಬಂಟ ಸಂಪ್ರದಾಯದ ಪ್ರಕಾರ ನಡೆಯಿತು. ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತಿತರ ನಾಯಕರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಈ ವೇಳೆ, ‘ಸುಹಾಸ್ ಅಮರ್ ರಹೇ’, ‘ರಾಜ್ಯ ಸರ್ಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳು ಮೊಳಗಿದವು. ಇದಕ್ಕೂ ಮೊದಲು, ಮಂಗಳೂರಿನ ಎ.ಜೆ.ಆಸ್ಪತ್ರೆಯಿಂದ ಪುಳಿಮಜಲಿನವರೆಗೆ ನಡೆದ ಅಂತಿಮಯಾತ್ರೆಯಲ್ಲಿ ಅಪಾರ ಸಂಖ್ಯೆಯ ಬೆಂಬಲಿಗರು ಪಾಲ್ಗೊಂಡಿದ್ದರು.
ಮಂಗಳೂರು ಸಂಪೂರ್ಣ ಬಂದ್:
ಹತ್ಯೆ ಖಂಡಿಸಿ ಹಿಂದು ಸಂಘಟನೆಗಳು ನೀಡಿದ್ದ ಕರೆಗೆ ಮಂಗಳೂರು ನಗರ ಪೂರ್ಣ ಬಂದ್ ಆಗಿತ್ತು. ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದವು. ಕೆಲವೆಡೆ ಬಲವಂತವಾಗಿ ಬಂದ್ ಮಾಡಿಸಲು ಹಿಂದು ಸಂಘಟನೆಗಳು ಮುಂದಾದಾಗ ಪೊಲೀಸರು ತಡೆದರು. ಈ ವೇಳೆ, ಕಾರ್ಯಕರ್ತರು, ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು.
ಬಂದ್ ವೇಳೆ, ಮಂಗಳೂರಿನ ಹಂಪನಕಟ್ಟೆ ಬಳಿ ಉದ್ರಿಕ್ತರು ಕಲ್ಲು ತೂರಾಟ ನಡೆಸಿದ್ದು, 9 ಬಸ್‌ಗಳಿಗೆ ಹಾನಿಯಾಗಿದೆ. ಬಳಿಕ, ಬಸ್ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಪ್ರಯಾಣಿಕರು ಪರದಾಡುವಂತಾಯಿತು. ಪ್ರತಿಭಟನಾಕಾರರು ಕೆಲವಡೆ ಟೈರ್ ಗೆ ಬೆಂಕಿ ಹಾಕಿ, ರಸ್ತೆ ತಡೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ದುರ್ಲಾಭಕ್ಕೆ ಬಿಜೆಪಿ ಯತ್ನ
ಯಾರದೇ ಕೊಲೆಯಾಗಿರಲಿ ಮನುಷ್ಯನ ಪ್ರಾಣ ಮುಖ್ಯ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸೂಚಿಸಲಾಗಿದೆ. ಬಿಜೆಪಿ ಅವರು ಇಂತಹ ದುಷ್ಕೃತ್ಯ ನಡೆಯಲಿ ಎಂದು ಕಾಯುತ್ತಿರುತ್ತಾರೆ. ಕೃತ್ಯಗಳು ನಡೆದಾಗ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಂದಾಗುತ್ತಾರೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಎನ್‌ಐಎ ತನಿಖೆಗೆ ಪಟ್ಟುಮಾನವಕುಲವನ್ನು ಬೆಚ್ಚಿಬೀಳಿಸುವ ರೀತಿಯಲ್ಲಿ ಈ ಹತ್ಯೆ ನಡೆದಿರುವುದು ಖಂಡನಾರ್ಹ. ಘಟನೆಯಲ್ಲಿ ಪೊಲೀಸ್ ವೈಫಲ್ಯ ಸ್ಪಷ್ಟವಾಗಿ ಕಾಣುತ್ತಿದೆ ಕೇಂದ್ರದ ರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ನೈಜ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು.- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ಹಂತಕರನ್ನು ಬಿಡಲ್ಲ
ಸುಹಾಸ್ ಕೊಲೆ ತನಿಖೆಗೆ 4 ತಂಡ ರಚಿಸಲಾಗಿದೆ. ಇಂಥ ಘಟನೆಗಳು ಮುಂದುವರಿಯಲು ಬಿಡುವುದಿಲ್ಲ. ಹಂತಕರಿಗೆ ಶೋಧ ನಡೆದಿದ್ದು ಎಲ್ಲರನ್ನೂ ಹಿಡಿದು ಹಾಕುತ್ತೇವೆ. ಕಾಂಗ್ರೆಸಲ್ಲೂ ಹಿಂದುಗಳಿದ್ದಾರೆ. ನಾವೂ ಹಿಂದುಗಳು. ಘಟನೆಗೆ ರಾಜಕೀಯ ಬಣ್ಣ ಕಟ್ಟುವುದು ಬೇಡ.
- ಡಾ। ಜಿ. ಪರಮೇಶ್ವರ, ಗೃಹ ಸಚಿವ
ಸುಹಾಸ್ ಕುಟುಂಬಕ್ಕೆ ₹30 ಲಕ್ಷ ಪರಿಹಾರ
ಮಂಗಳೂರು: ಮೃತ ಹಿಂದು ಕಾರ್ಯಕರ್ತ ಸುಹಾಸ್ ಶೆಟ್ಟಿ ಕುಟುಂಬಕ್ಕೆ ರಾಜ್ಯ ಬಿಜೆಪಿ ವತಿಯಿಂದ 25 ಲಕ್ಷ ರು.ಗಳ ಪರಿಹಾರ ಮೊತ್ತವನ್ನು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ. ವಿಜಯೇಂದ್ರ ಘೋಷಿಸಿದ್ದಾರೆ. ಇದೇ ವೇಳೆ ಬಿಜೆಪಿ ಉಚ್ಚಾಟಿತ ನಾಯಕ ಬಸನಗೌಡ ಪಾಟೀಲ ಯತ್ನಾಳ ವೈಯಕ್ತಿಕವಾಗಿ 5 ಲಕ್ಷ ರು. ಘೋಷಿಸಿದ್ದಾರೆ.