ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ

| Published : Mar 30 2024, 12:50 AM IST

ಸಾರಾಂಶ

ಬೀದರ್ ನಗರದ ಪ್ರಸಾದ ನಿಲಯದಲ್ಲಿ ಅಕ್ಕ ಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್

ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಮಹಿಳೆಯರಿಗೆ ಉನ್ನತ ಸ್ಥಾನ ನೀಡಲಾಗಿದೆ. “ಮಾತೃ ದೇವೋಭವ” ಎಂದು ಮಹಿಳೆಯನ್ನು ಪೂಜ್ಯತೆಯಿಂದ ಕರೆಯಲಾಗುತ್ತದೆ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಮಹಾಲಿಂಗ ಸ್ವಾಮಿ ನುಡಿದರು.

ಅವರು ನಗರದ ಪ್ರಸಾದ ನಿಲಯದಲ್ಲಿ ಅಕ್ಕ ಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜವು ಮಹಿಳೆಯನ್ನು ಗೌರವ, ಆದರದಿಂದ ಕಂಡಾಗ ಕುಟುಂಬದ ಸಮಗ್ರ ಬೆಳೆವಣಿಗೆಯಾಗವುದು. ಮಹಿಳೆಯೇ ಪ್ರಮುಖ ಶಕ್ತಿಯಾಗಿದ್ದಾಳೆ. ಮಗುವಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರಯುತ ಶಿಕ್ಷಣ ನೀಡುವದು ಮಹಿಳೆಯ ಪ್ರಮುಖ ಕರ್ತವ್ಯವಾಗಿದೆ ಎಂದರು.

ಜಗತ್ತಿನ ಶ್ರೇಷ್ಠ ಚಿಂತಕರು, ವಿಜ್ಞಾನಿಗಳು, ಸಮಾಜದ ಧುರೀಣರು ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವಲ್ಲಿ ಮಾತೆಯ ಪ್ರಮುಖ ಪಾತ್ರವಾಗಿದೆ. ಮಹಿಳೆ ದೇವ ಸ್ವರೂಪವೆಂದು ಬಸವಾದಿ ಶರಣರು ಗೌರವಿಸುತ್ತಾರೆ. ಯಾವ ಕುಟುಂಬದಲ್ಲಿ ಮಹಿಳೆಯನ್ನು ಗೌರವ, ಪ್ರೀತಿಯಿಂದ ಕಾಣುತ್ತಾರೋ ಆ ಮನೆಯು ದೇವ ಮಂದಿರವಾಗುತ್ತದೆ ಎಂದು ನುಡಿದರು.

ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯು ಎಲ್ಲಾ ರಂಗದಲ್ಲಿ ತನ್ನ ಪ್ರತಿಭೆ ಅರಳಿಸುತ್ತಿದ್ದಾಳೆ. ಆಕೆಯ ಪ್ರತಿಭೆಯು ಸಮಾಜದಲ್ಲಿ ಪ್ರದರ್ಶಿಸಬೇಕಾದರೆ ಸಂಘಟನೆ ಮುಖಾಂತರ ಕಾರ್ಯ ಮಾಡುವುದರ ಜೊತೆಗೆ ಆಕೆಯ ಸಾಮರ್ಥ್ಯ ಕೂಡ ಸಮಾಜಕ್ಕೆ ತೋರಿಸಬೇಕಾಗಿದೆ ಎಂದರು.

ಪ್ರೊ.ಎಸ್.ಬಿ. ಬಿರಾದಾರ ಮಾತನಾಡಿ, ಭಾರತೀಯ ಮಹಿಳೆಯು ಭಾರತೀಯ ಸಂಸ್ಕೃತಿಯ ಪದ್ಧತಿ ಅನುಸಾರವಾಗಿ ಉಡುಗೆ-ತೊಡುಗೆ ಧರಿಸುವುದರ ಜೊತೆಗೆ ಸಂಪ್ರದಾಯಕ್ಕೆ ಗೌರವಿಸಬೇಕು ಎಂದರು. ಜಿಲ್ಲಾ ಮಹಿಳಾ ಘಟಕದ ಭಾರತೀಯ ಬಸವದಳದ ಅಧ್ಯಕ್ಷರಾದ ಶಕುಂತಲಾ ಬೆಲ್ದಾಳೆ ಮಾತನಾಡಿ, ಮಹಿಳೆಯು ಇನ್ನು ಹೆಚ್ಚು-ಹೆಚ್ಚಿನ ಸೇವೆ ಮಾಡಬೇಕಾದರೆ ಹಣಕಾಸಿನ ಸಹಕಾರ ಅಗತ್ಯತೆ ಇದೆ ಅದನ್ನು ಸಮಾಜ ಮಾಡಿಕೊಡಬೇಕೆಂದರು.

ಸಾಹಿತಿಗಳಾದ ಕಸ್ತೂರಿ ಎಸ್. ಪಟಪಳ್ಳಿ ಅವರು ‘ಮಹಿಳೆ ಮತ್ತು ಸಮಾಜ’ ಕುರಿತು ಉಪನ್ಯಾಸ ಮಂಡಿಸಿದರು.

ಅಕ್ಕಮಹಾದೇವಿ ಮಹಿಳಾ ಸಾಂಸ್ಕೃತಿಕ ಸಂಘದ ಅಧ್ಯಕ್ಷರಾದ ಮೀನಾಕ್ಷಿ ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅನುಭವ ಮಂಟಪ ಸಂಸ್ಕೃತಿ ವಿದ್ಯಾಲಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಡಾ.ಸಂಜೀವಕುಮಾರ ಅತಿವಾಳೆರನ್ನು ಸನ್ಮಾನಿಸಲಾಯಿತು.

ಲಕ್ಷ್ಮಿ ಬಿರಾದಾರ ಸ್ವಾಗತಿಸಿ, ವಿಜಯಲಕ್ಷ್ಮಿ ಹುಗ್ಗೆಳ್ಳಿ ನಿರೂಪಿಸಿ, ಪ್ರೇಮಾ ಮುಚಳಂಬೆ ವಂದಿಸಿದರು. ಪ್ರಮುಖರಾದ ಪ್ರೊ. ಭಾರತಿ ಕೊಂಡಾ, ಮಹಾದೇವಿ ಬಿರಾದಾರ, ಮಹಾನಂದಾ ಸ್ವಾಮಿ, ಜಗದೇವಿ, ಇಂದುಮತಿ ಬಿರಾದಾರ, ಸವಿತಾ, ಕಸ್ತೂರಬಾಯಿ ಬಿರಾದಾರ, ಪ್ರೊ. ಉಮಾಕಾಂತ ಮೀಸೆ, ಶ್ರೀಕಾಂತ ಸ್ವಾಮಿ, ಸಂಗ್ರಾಮಪ್ಪಾ ಬಿರಾದಾರ, ಶಿವಲೀಲಾ, ಸುನಿತಾ, ತೀರ್ಥಮ್ಮ, ವಿಜಯಕುಮಾರ ಹದನೂರೆ, ಪ್ರೊ. ಸಂಗ್ರಾಮ್ ಏಂಗಳೆ ಭಾಗವಹಿಸಿದ್ದರು.