ಸಾರಾಂಶ
ಹಾನಗಲ್ಲ: ನ. 19ರೊಳಗಾಗಿ ರೈತರ ಸಮಸ್ಯೆಗಳನ್ನು ಪರಿಹರಿಸದಿದ್ದರೆ. ನ. 24ರಂದು ಹಾವೇರಿಯಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಎಚ್ಚರಿಕೆ ನೀಡಿದರು.
ಇಲ್ಲಿಯ ತಹಸೀಲ್ದಾರ್ ಕಚೇರಿ ಎದುರು ರೈತ ಸಂಘದ ಪದಾಧಿಕಾರಿಗಳು ಬುಧವಾರ ಪ್ರತಿಭಟನೆ ನಡೆಸಿ ಆನಂತರ ತಹಸೀಲ್ದಾರ್ ಎಸ್. ರೇಣುಕಾ ಅವರಿಗೆ ಮನವಿ ಸಲ್ಲಿಸಿದರು. ಕಳೆದ ಮುಂಗಾರು ಹಂಗಾಮಿನಲ್ಲಿ ಸತತ ಮಳೆಯಿಂದಾಗಿ ಹಸಿ ಬರಗಾಲ ಎದುರಾಗಿ, ಗೋವಿನಜೋಳ ಸೇರಿದಂತೆ ಹಲವು ಬೆಳೆಗಳು ತಾಲೂಕಿನಾದ್ಯಂತ ರೈತರಿಗೆ ಕೈಕೊಟ್ಟಿದೆ. ರಾಜ್ಯ ಸರ್ಕಾರ ರೈತರಿಗೆ ಬೆಳೆಹಾನಿ ಪರಿಹಾರ ವಿತರಿಸುತ್ತಿಲ್ಲ ಎಂದು ಆರೋಪಿಸಿದರು.ತಾಲೂಕಿನಲ್ಲಿ ಗೋವಿನಜೋಳ ಪ್ರಧಾನ ಬೆಳೆಯಾಗಿದ್ದು, ಪ್ರಸಕ್ತ ಮುಂಗಾರಿನಲ್ಲಿ ಆದ ಸತತ ಮಳೆಯಿಂದ ಗೋವಿನಜೋಳ ಸೇರಿದಂತೆ ವಿವಿಧ ಬೆಳೆಗಳು ಜೌಳು ಹಿಡಿದು ನಾಶವಾದವು. ಅದಕ್ಕಾಗಿ ರೈತರು ಸಾವಿರಾರು ರು.ಗಳಷ್ಟು ಸಾಲ ಮಾಡಿಕೊಂಡಿದ್ದಾರೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಗೋವಿನಜೋಳ ರೈತರ ಕೈ ಹಿಡಿದಿವೆ. ಆದರೆ ಮಾರುಕಟ್ಟೆಯಲ್ಲಿ ಗೋವಿನಜೋಳದ ದರ ಕುಸಿತವಾಗಿದೆ. ಕೂಡಲೇ ಸರ್ಕಾರ ಬೆಂಬಲಬೆಲೆ ಖರೀದಿ ಕೇಂದ್ರ ಆರಂಭಿಸಿ, ಕೇಂದ್ರ ಸರ್ಕಾರ ನಿಗದಿಪಡಿಸಿದ ಎಂಎಸ್‌ಪಿ ದರ ₹2400 ಮತ್ತು ರಾಜ್ಯ ಸರ್ಕಾರದ ₹600 ಪ್ರೋತ್ಸಾಹಧನ ಸೇರಿಸಿ ಪ್ರತಿ ಕ್ವಿಂಟಾಲ್‌ಗೆ ಒಟ್ಟು ₹3000 ನೀಡಬೇಕು ಎಂದು ಆಗ್ರಹಿಸಿದ್ದಾರೆ.ಅಡಕೆ ಬೆಳೆವಿಮಾ ಪರಿಹಾರ ವಿತರಣೆ ಸಮರ್ಪಕವಾಗಿ ಆಗಿಲ್ಲ. ತಾಲೂಕಿನ ಹಳೇಕೋಟಿ, ಅರಳೇಶ್ವರ ಹಾಗೂ ಶಿರಗೋಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರೈತರಿಗೆ ಜಮಾ ಆಗಿಲ್ಲ. ತಾಲೂಕಿನ 4900 ಮಾವು ಬೆಳೆಗಾರರಲ್ಲಿ 4000 ರೈತರಿಗೆ ಮಾತ್ರ ಪರಿಹಾರ ಜಮಾ ಆಗಿದೆ. ಇನ್ನುಳಿದ 900 ರೈತರಿಗೆ ಹಣ ಜಮಾ ಆಗಿಲ್ಲ. ಕಳೆದ ವರ್ಷದ ಬೆಳೆವಿಮಾ ಪರಿಹಾರದ ಪ್ರಕರಣಗಳು ಮಿಸ್‌ಮ್ಯಾಚ್ ಆಗಿದ್ದರಿಂದ ಬಾಕಿ ಉಳಿದಿವೆ. ನ. 19ರೊಳಗಾಗಿ ಈ ಎಲ್ಲ ಪ್ರಕರಣಗಳನ್ನು ಇತ್ಯರ್ಥಗೊಳಿಸಿ ಹಣ ಜಮಾ ಮಾಡಬೇಕು. ರೈತ ಸಂಪರ್ಕ ಕೇಂದ್ರದಲ್ಲಿ ರೈತರ ಬೇಡಿಕೆಯ ಕ್ರಿಮಿನಾಶಕಗಳನ್ನು ದಾಸ್ತಾನು ಮಾಡಬೇಕು. ಸ್ಪಿಂಕ್ಲರ್ ಪೈಪುಗಳನ್ನು ಫಲಾನುಭವಿಗಳಿಗೆ ಸರ್ಕಾರ 7 ವರ್ಷಕ್ಕೊಮ್ಮೆ ಸಹಾಯಧನದಲ್ಲಿ ವಿತರಿಸುವಂತೆ ಆದೇಶಿಸಿದೆ. ಸರ್ಕಾರ 5 ವರ್ಷಗಳಿಗೊಮ್ಮೆ ರೈತರಿಗೆ ಪೈಪ್ ವಿತರಿಸುವಂತೆ ಆದೇಶವನ್ನು ಮಾರ್ಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಸಹಾಯಕ ಕೃಷಿ ನಿದೇಶಕ ಸಿ.ಟಿ. ಸುರೇಶ, ಹೆಸ್ಕಾಂ ಎಇಇ ವಿ.ಎಸ್. ಮರಿಗೌಡ್ರ, ತೋಟಗಾರಿಕೆ ಅಧಿಕಾರಿ ಮೃತ್ಯುಂಜಯ ಹಿರೇಮಠ ಇದ್ದರು. ಪ್ರತಿಭಟನೆಯಲ್ಲಿ ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಪದಾಧಿಕಾರಿಗಳಾದ ಮಾಲತೇಶ ಪರಪ್ಪನವರ, ಸೋಮಣ್ಣ ಜಡೆಗೊಂಡರ, ಮಹೇಶ ವಿರೂಪಣ್ಣನವರ, ಶ್ರೀಕಾಂತ ದುಂಡಣ್ಣನವರ, ರುದ್ರಪ್ಪ ಹಣ್ಣಿ, ವಾಸುದೇವ ಕಮಾಟಿ, ಮಹಲಿಂಗಪ್ಪ ಅಕ್ಕಿವಳ್ಳಿ, ರಾಜೀವ ದಾನಪ್ಪನವರ ಇತರರಿದ್ದರು.ಮುಂಗಾರು ಹಂಗಾಮಿನ ಬೆಳೆಹಾನಿ ಪರಿಹಾರ ಗುರುವಾರದಿಂದ ರೈತರ ಖಾತೆಗಳಿಗೆ ಜಮಾ ಆಗಲಿದೆ. ಕಳೆದ ವರ್ಷದ ಮಿಸ್‌ಮ್ಯಾಚ್ ಪ್ರಕರಣಗಳ ಕುರಿತು ತೋಟಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು. ಅಡಕೆ ಮತ್ತು ಮಾವು ವಿಮಾ ಪರಿಹಾರ ನಾಳೆಯಿಂದಲೇ ಜಮಾ ಆಗುತ್ತವೆ ಎಂದು ಹಾನಗಲ್ಲ ತಹಸೀಲ್ದಾರ್ ಎಸ್. ರೇಣುಕಾ ಹೇಳಿದರು.
ರಾಜ್ಯದಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ಕೈಗೊಂಡಿದ್ದರ ಫಲವಾಗಿ ಸರ್ಕಾರ ಕ್ವಿಂಟಲ್‌ಗೆ ₹3300 ನಿಗದಿಪಡಿಸಿದೆ. ಹಾವೇರಿಯ ಸಂಗೂರು ಕಾರ್ಖಾನೆಯೂ ಸರ್ಕಾರ ನಿಗದಿಪಡಿಸಿದ ದರ ನೀಡಬೇಕಿದೆ. ಅದಕ್ಕಾಗಿ ಧರಣಿಯೂ ನಡೆದಿದೆ. ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರ ಪ್ರತಿಭಟನೆ ರಾಜ್ಯದ ರೈತರಿಗೆಲ್ಲ ಮಾದರಿಯಾಗಿದೆ. ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಜಿಲ್ಲೆಯಲ್ಲೂ ಅಂಥದೇ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))