ಸಾರಾಂಶ
ಸಿರುಗುಪ್ಪ: ತುಂಗಭದ್ರಾ ಜಲಾಶಯದಿಂದ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು ಜಿಲ್ಲೆಗಳ ರೈತರ ಎರಡನೇ ಬೆಳೆಗೆ ನೀರು ಪೂರೈಸಬೇಕು ಹಾಗೂ ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್‌ಗಳನ್ನು ಜೂನ್ ಅಂತ್ಯದೊಳಗೆ ಅಳವಡಿಸಬೇಕು ಎಂದು ಒತ್ತಾಯಿಸಿ ತುಂಗಭದ್ರಾ ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ತಾಲೂಕಿನ ಕರೂರು ಗ್ರಾಮದಿಂದ ವಿಜಯನಗರ ಜಿಲ್ಲೆಯ ಹೊಸಪೇಟೆವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಬುಧವಾರ ಆರಂಭಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಅಧ್ಯಕ್ಷ ಕರೂರು ಆರ್.ಮಾಧವರೆಡ್ಡಿ ಅವರು ಮಾತನಾಡಿ, ಜಲಾಶಯದಲ್ಲಿ ನೀರು ಸಾಕಷ್ಟು ಸಂಗ್ರಹವಾಗಿದ್ದರೂ ಬೇಸಿಗೆ ಬೆಳೆಗೆ ನೀರು ಪೂರೈಕೆ ಮಾಡುವ ಕುರಿತು ಈವರೆಗೆ ಯಾವುದೇ ನಿರ್ಧಾರ ಕೈಗೊಂಡಿರುವುದು ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ಪ್ರತಿವರ್ಷವೂ ನಾನಾ ಕಾರಣಗಳಿಂದ ಬೆಳೆನಷ್ಟ ಎದುರಿಸುತ್ತಿರುವ ರೈತರಿಗೆ ಬೇಸಿಗೆ ಬೆಳೆಗೆ ನೀರು ಬಿಡದಿರುವ ಕುರಿತು ಯಾವುದೇ ಒಮ್ಮತದ ನಿರ್ಧಾರಕ್ಕೆ ಬರದಿರುವುದು ತೀವ್ರ ಖಂಡನೀಯ. ರಾಜ್ಯ ಸರ್ಕಾರ ಹಾಗೂ ಸಂಬಂಧಿಸಿದ ಸಚಿವರುಗಳು ಕೂಡಲೇ ಬೆಳೆಗೆ ನೀರು ಪೂರೈಕೆ ಕುರಿತು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ತುಂಗಭದ್ರಾ ಜಲಾಶಯದಲ್ಲಿ 79 ಟಿಎಂಸಿ ನೀರು ಲಭ್ಯ ಇದೆ. ಇದು ಎರಡನೆ ಬೆಳೆಗೆ ಹಾಗೂ ಕುಡಿಯುವ ನೀರಿನ ಬಳಕೆಗೆ ಸಾಕಾಗುತ್ತದೆ. ಮುಂಗಾರು ಮತ್ತು ಹಿಂಗಾರು ಹಾಗೂ ಜಲಾಶಯದ ಹೆಚ್.ಎಲ್.ಸಿ. ಕಾಲುವೆ ಮೂಲಕ ಸುಮಾರು 2 ಲಕ್ಷ ಎಕರೆ ಪ್ರದೇಶದಲ್ಲಿ ಒಣಮೆಣಸಿನಕಾಯಿ, ಜೋಳ, ತೊಗರಿ, ಹತ್ತಿ ಫಸಲು ಇರುವುದರಿಂದ ಡಿಸೆಂಬರ್‌ವರೆಗೆ ನೀರು ಪೂರೈಕೆ ಮಾಡಬೇಕು. ಇಲ್ಲವಾದಲ್ಲಿ ರೈತರ ಬೆಳೆಗಳು ಭಾಗಶಃ ನಾಶವಾಗಲಿವೆ. ಜಲಾಶಯದ ಎಲ್ಲ ಗೇಟ್ ಗಳನ್ನು ಮುಂದಿನ ಜೂನ್ ವೇಳೆಗೆ ಅಳವಡಿಸಬೇಕು. ವಿಜಯನಗರ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ಅಣೆಕಟ್ಟಿನ ನೀರನ್ನು ಸಂಪೂರ್ಣವಾಗಿ ಎರಡು ಬೆಳೆಗೆ ಹಾಗೂ ಬೇಸಿಗೆಯಲ್ಲಿ ಕುಡಿವ ನೀರಿಗೆ ಅನುಕೂಲ ಮಾಡಿಕೊಡಬೇಕೆಂದು ಎಂದು ಒತ್ತಾಯಿಸಿದರು. ಪಾದಯಾತ್ರೆಯಲ್ಲಿ ಹಿರಿಯ ರೈತ ಮುಖಂಡರಾದ ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಬಸವರಾಜಸ್ವಾಮಿ, ಸುರೇಂದ್ರ, ಓಂಕಾರಗೌಡ, ವಿಶ್ವನಾಥ ನಾಗಲೀಕರ, ಲೇಪಾಕ್ಷಿ ಅಸುಂಡಿ, ಬಸವರೆಡ್ಡಿ, ದೊಡ್ಡನಗೌಡ, ವಿರುಪಾಕ್ಷಿ, ಗಣೇಶ್ ಸ್ವಾಮಿ ಸೇರಿದಂತೆ ನೂರಾರು ರೈತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಪಾದಯಾತ್ರೆಗೆ ಸಿರಿಗೇರಿ, ತೆಕ್ಕಲಕೋಟೆ ಪೊಲೀಸರು ಭದ್ರತೆ ಒದಗಿಸಿದ್ದರು.
ಮೊದಲನೆ ದಿನದ ಪಾದಯಾತ್ರೆಯು ಕರೂರು, ದರೂರು, ದರೂರು ಕ್ಯಾಂಪ್, ಸಿರಿಗೇರಿ ಕ್ರಾಸ್, ಶಾನವಾಸಪುರ ಮೂಲಕ ಕುರುಗೋಡು, ಕಂಪ್ಲಿ ಮೂಲಕ ಸಾಗಿ ನ.17ಕ್ಕೆ ತುಂಗಭದ್ರಾ ಜಲಾಶಯದ ಎದುರು ಸಮಾವೇಶ ಗೊಳ್ಳಲಿದೆ.ಬಳಿಕ ಅನಿರ್ದಿಷ್ಟ ಧರಣಿ ನಡೆಯಲಿದೆ.
;Resize=(128,128))
;Resize=(128,128))
;Resize=(128,128))
;Resize=(128,128))