ಅಣ್ಣಿಗೇರಿಯಲ್ಲಿ ಡಾಂಬರ್‌ ಕಿತ್ತು ಹೋದ ಹೆದ್ದಾರಿ ರಸ್ತೆ!

| Published : Sep 13 2025, 02:05 AM IST

ಅಣ್ಣಿಗೇರಿಯಲ್ಲಿ ಡಾಂಬರ್‌ ಕಿತ್ತು ಹೋದ ಹೆದ್ದಾರಿ ರಸ್ತೆ!
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿ ವರ್ಷ ಹತ್ತಿ ಸುಗ್ಗಿ ಅವಧಿಯಲ್ಲಿ ಇಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಇಲ್ಲಿಯ ಹತ್ತಿಕಾಳು ಪಂಜಾಬ, ಹರಿಯಾಣ, ರಾಜಸ್ತಾನದ ಎಣ್ಣೆ ಮಿಲ್‌ಗಳಿಗೆ ರಫ್ತಾಗುವುದು ವಿಶೇಷ

ಶಿವಾನಂದ ಅಂಗಡಿ ಅಣ್ಣಿಗೇರಿ

ಗದಗ-ಹುಬ್ಬಳ್ಳಿಗೆ ಸಂಪರ್ಕ ಕಲ್ಪಿಸುವ ಇಲ್ಲಿಯ ರಾಷ್ಟ್ರೀಯ ಹೆದ್ದಾರಿ-67ರ ಎರಡುವರೆ ಕಿಲೋ ಮೀಟರ್‌ ಮುಖ್ಯ ರಸ್ತೆಯೇ ಹಲವು ವರ್ಷಗಳಿಂದ ಹದಗೆಟ್ಟಿದ್ದು, ಸಂಚಾರಕ್ಕೆ ತೀವ್ರ ತೊಂದರೆಯಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಆದ ಮೇಲೆ ಅಣ್ಣಿಗೇರಿಯಲ್ಲಿ ಬೈಪಾಸ್‌ ರಸ್ತೆ ನಿರ್ಮಾಣವಾಯಿತು. ಹೀಗಾಗಿ ಗದಗ-ಹುಬ್ಬಳ್ಳಿ ಕಡೆಗೆ ಹೋಗುವ ಎಕ್ಸಪ್ರೆಸ್‌ ಬಸ್‌ಗಳು, ಖಾಸಗಿ ವಾಹನಗಳು, ಟ್ರಕ್‌ಗಳು ಬೈಪಾಸ್‌ ಮಾರ್ಗವಾಗಿಯೇ ತೆರಳುತ್ತಿದ್ದು, ಅಣ್ಣಿಗೇರಿಯಲ್ಲಿ ಹಾದು ಹೋಗುವ ಹೆದ್ದಾರಿ ರಸ್ತೆಯಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಗದಗದಿಂದ ನವಲಗುಂದ ಕಡೆಗೆ ತೆರಳುವ ಬಸ್‌ಗಳು ಹಾಗೂ ಬಳ್ಳಾರಿ, ಹೊಸಪೇಟೆ, ಕೊಪ್ಪಳ ಕಡೆಯಿಂದ ಬರುವ ವಾಹನಗಳು ಅಣ್ಣಿಗೇರಿ ಮಾರ್ಗವಾಗಿ ಹುಬ್ಬಳ್ಳಿ, ನವಲಗುಂದಕ್ಕೆ ತೆರಳುತ್ತಿದ್ದು, ಸಾವಿರಾರು ವಾಹನಗಳ ಸಂಚರಿಸುವ ರಸ್ತೆ ಗುಂಡಿಮಯವಾಗಿದೆ. ಹೀಗೆ ಗುಂಡಿಗಳ ಬಿದ್ದು, ವರ್ಷಗಳೇ ಗತಿಸಿದ್ದರೂ ದುರಸ್ತಿ ಆಗದ್ದರಿಂದ ಅಣ್ಣಿಗೇರಿ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ವಾಣಿಜ್ಯ ಪಟ್ಟಣ: ಅಣ್ಣಿಗೇರಿ ಪಟ್ಟಣ ಈಚೆಗಿನ ವರ್ಷಗಳಲ್ಲಿ ವಾಣಿಜ್ಯ ಪಟ್ಟಣವಾಗಿ ಮಾರ್ಪಟ್ಟಿದ್ದು, ಇಲ್ಲಿ ಆರೇಳು ಕಾಟನ್‌ ಇಂಡಸ್ಟ್ರೀಜ್‌ಗಳಿವೆ. ಪ್ರತಿ ವರ್ಷ ಹತ್ತಿ ಸುಗ್ಗಿ ಅವಧಿಯಲ್ಲಿ ಇಲ್ಲಿ ಕೋಟ್ಯಂತರ ವಹಿವಾಟು ನಡೆಯುತ್ತದೆ. ಇಲ್ಲಿಯ ಹತ್ತಿಕಾಳು ಪಂಜಾಬ, ಹರಿಯಾಣ, ರಾಜಸ್ತಾನದ ಎಣ್ಣೆ ಮಿಲ್‌ಗಳಿಗೆ ರಫ್ತಾಗುವುದು ವಿಶೇಷ. ಅರಳೆ ತಮಿಳುನಾಡಿನ ಟೆಕ್ಸಟೈಲ್‌ ಮಿಲ್‌ಗಳಿಗೆ ರವಾನೆಯಾಗುತ್ತದೆ. ಹೀಗಾಗಿ ಈ ಪಟ್ಟಣ ರಾಜ್ಯದಲ್ಲಿ ಅಂತ್ಯ ಪ್ರಮುಖ ಸ್ಥಾನ ಪಡೆದುಕೊಂಡಿದ್ದು, ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಹೆದ್ದಾರಿಯ ಈ ರಸ್ತೆ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ ಎನ್ನುತ್ತಾರೆ ಅಲ್ಲಿಯ ಜನತೆ.

ಏಕೈಕ ಡಾಂಬರ್‌ ರಸ್ತೆ: ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕಾಂಕ್ರಿಟ್‌ನಲ್ಲೇ ನಿರ್ಮಾಣವಾಗಿದ್ದು, ಅಣ್ಣಿಗೇರಿ ಒಳರಸ್ತೆಗಳು ಕಾಂಕ್ರೀಟ್‌ಮಯ ಆಗಿವೆ. ಆದರೆ, ಬೈಪಾಸ್‌ನಿಂದ ಅಣ್ಣಿಗೇರಿ ಪಟ್ಟಣಕ್ಕೆ ಪ್ರವೇಶಿಸುವ ಹೆದ್ದಾರಿಯ ಈ ರಸ್ತೆ ಡಾಂಬರ್‌ ರಸ್ತೆ ಆಗಿರುವುದು ವಿಶೇಷ. ಈ ರಸ್ತೆ ಚತುಷ್ಪಥ ನಿರ್ಮಾಣದ ವೇಳೆ ಕಾಂಕ್ರೀಟ್‌ ರಸ್ತೆ ಆಗಬೇಕಾಗಿತ್ತು. ನಿರ್ಲಕ್ಷಿಸಿದ್ದರಿಂದ ಮಳೆ, ವಾಹನ ದಟ್ಟನೆಯಿಂದ ರಸ್ತೆ ದಿನೇ ದಿನೇ ಡಾಂಬರ್‌ ಕಿತ್ತು ಹೋಗಿದ್ದು, ಅಣ್ಣಿಗೇರಿ ಅಂಬಿಗೇರಿ ಕ್ರಾಸ್‌ನಿಂದ ಗದಗ ಕಡೆಗೆ ತೆರಳುವ ರಸ್ತೆ ಅಕ್ಷರಶಃ ಕಿತ್ತುಹೋಗಿದ್ದು, ತಗ್ಗು ಗುಂಡಿಗಳು ಬಿದ್ದಿವೆ.

ಟೆಂಡರ್‌ ಶ್ಯೂರ ರಸ್ತೆ ಮಾದರಿ ನಿರ್ಮಾಣಕ್ಕೆ ಮನವಿ: ಟೆಂಡರ್‌ ಶ್ಯೂರ್ ರಸ್ತೆ ಮಾದರಿಯಲ್ಲಿ ಡಬಲ್‌ ರಸ್ತೆ ನಿರ್ಮಿಸಿ ಲೈಟಿಂಗ್‌ ವ್ಯವಸ್ಥೆ ಮಾಡಿಕೊಂಡುವಂತೆ ನಮ್ಮ ಬೇಡಿಕೆ ಇದೆ. ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಅವರು ಸಭೆ ಮಾಡಿದ ವೇಳೆ ನಾವು ಮನವಿ ಮಾಡಿದ್ದೇವೆ.

ಈ ರಸ್ತೆ ನೀವೇ ನಿರ್ಮಿಸಿಕೊಡಬೇಕು ಎಂದು ಸಚಿವ ಜೋಶಿ ಅವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಡಬಲ್‌ ರಸ್ತೆ ನಿರ್ಮಾಣಕ್ಕೆ 40 ಕೋಟಿ ರು. ಬೇಡಿಕೆ ಇಡಲಾಗಿದೆ. ಸಿಂಗಲ್‌ ರಸ್ತೆ ಮಾಡಿದರೂ ಕನಿಷ್ಠ ಇದಕ್ಕೆ ₹ 30 ಕೋಟಿ ಬೇಕು ಎಂದು ಶಾಸಕ ಎನ್‌. ಎಚ್‌. ಕೋನರಡ್ಡಿ ಅವರು ಕನ್ನಡಪ್ರಭಕ್ಕೆ ತಿಳಿಸಿದರು.

ಹೆದ್ದಾರಿ ಆದರೂ ಕೂಡಾ ನಾವೇ ಪದೇ ಪದೇ ಈ ರಸ್ತೆಯಲ್ಲಿ ಗರಸು, ಕಡಿ ಹಾಕಿ ತಾತ್ಕಾಲಿಕ ದುರಸ್ತಿ ಮಾಡಿಸುತ್ತ ಬಂದಿದ್ದೇವೆ. ಇಲ್ಲದಿದ್ದರೆ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿತ್ತು. ಮತ್ತೆ ಕಡಿ ಹಾಕಿ ಸಣ್ಣ ಪುಟ್ಟ ದುರಸ್ತಿಗೆ ಸಿದ್ಧತೆ ನಡೆದಿತ್ತು. ಆಗಸ್ಟ್‌ನಲ್ಲಿ ನಿರಂತರ ಮಳೆಯಿಂದ ಕೆಲಸ ವಿಳಂಬವಾಗಿದೆ ಎಂದು ಶಾಸಕ ಎನ್‌.ಎಚ್‌. ಕೋನರಡ್ಡಿ ತಿಳಿಸಿದ್ದಾರೆ.

ಅಣ್ಣಿಗೇರಿಯಲ್ಲಿರುವ ಹೆದ್ದಾರಿ ರಸ್ತೆ ಹದಗೆಟ್ಟು ಮೂರ್ನಾಲ್ಕು ವರ್ಷಗಳಾಗಿವೆ. ನಿತ್ಯ ಸಾವಿರ ವಾಹನಗಳು ಇಲ್ಲಿ ಸಂಚರಿಸುತ್ತಿದ್ದು, ರಸ್ತೆ ಹದಗೆಟ್ಟಿರುವುದರಿಂದ ತೀವ್ರ ತೊಂದರೆಯಾಗಿದೆ. ಇದನ್ನು ಡಬಲ್‌ ರಸ್ತೆಯನ್ನಾಗಿ ಮಾಡುವಂತೆ ಸಚಿವ ಪ್ರಹ್ಲಾದ್‌ ಜೋಶಿ ಅವರಿಗೆ ಮನವಿ ಮಾಡಿದ್ದೇವೆ ಎಂದು ಪಕ್ಷಾತೀತ ರೈತ ಹೋರಾಟ ವೇದಿಕೆ ಕಾರ್ಯಾಧ್ಯಕ್ಷ ಭಗವಂತಪ್ಪ ಪುಟ್ಟಣ್ಣವರ ತಿಳಿಸಿದ್ದಾರೆ.