ಸಾರಾಂಶ
ಹುಬ್ಬಳ್ಳಿ: ಒಂದು ವಾರದಿಂದ ಬಿಡುವು ನೀಡಿದ್ದ ವರುಣ ಶುಕ್ರವಾರ ಮತ್ತೆ ಅರ್ಭಟಿಸಿದ್ದು, ಸುಮಾರು ಆರೇಳು ಗಂಟೆ ಸುರಿದ ಮಳೆಗೆ ಅವಳಿ ನಗರಗಳು ನಲಗುವಂತಾಯಿತು. ಸುರಿದ ಮಹಾಮಳೆಗೆ ಊರು ಹೊಳೆಯಂತೆ ಆಗಿತ್ತು.
ಹುಬ್ಬಳ್ಳಿ-ಧಾರವಾಡದ ರಸ್ತೆಗಳು, ತಗ್ಗು ಪ್ರದೇಶಗಳಲ್ಲಿ ನಿಂತ ನೀರು ಜನರನ್ನು ಪರದಾಡುವಂತೆ ಮಾಡಿತು. ಮಧ್ಯಾಹ್ನದ ವೇಳೆಗೆ ದಿಢೀರ್ ಆರಂಭವಾದ ಮಳೆ ಬಿಟ್ಟು ಬಿಡದೇ ರಾತ್ರಿವರೆಗೆ ಸುರಿಯಿತು.ಇಲ್ಲಿನ ದಾಜೀಬಾನ್‌ಪೇಟ್, ಶಾ ಬಜಾರ, ದುರ್ಗದಬೈಲ್, ಸ್ಟೇಶನ್ ರಸ್ತೆ, ಗೋಕುಲ ರಸ್ತೆ, ಚೆನ್ನಮ್ಮ ಸರ್ಕಲ್ ಹಾಗೂ ಹಳೆಯ ಕೋರ್ಟ್ ಸರ್ಕಲ್, ಉಣಕಲ್, ತುಳಜಾಭವಾನಿ ಸರ್ಕಲ್, ಶ್ರೀನಗರ, ಲ್ಯಾಮಿಂಗ್ಟನ್ ಸರ್ಕಲ್, ಕೇಶ್ವಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ರಸ್ತೆಯಲ್ಲಿ ಮೊಣಕಾಲವರೆಗೆ ಮಳೆ ನೀರು ನಿಂತಿತ್ತು. ಅಕ್ಷರಶಃ ರಸ್ತೆಗಳೆಲ್ಲ ಹೊಳೆಯಂತೆ ಭಾಸವಾಗುತ್ತಿದ್ದವು.
ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಓಡಾಡಲು ತೀವ್ರ ಕಷ್ಟ ಅನುಭವಿಸುವಂತಾಯಿತು. ಕೆಲ ದ್ವಿಚಕ್ರವಾಹನಗಳು ರಸ್ತೆಯಲ್ಲೇ ನಿಂತು ಬಿಟ್ಟಿದ್ದವು. ಒಂದೊಂದು ವಾಹನಗಳನ್ನು ಇಬ್ಬಿಬ್ಬರು ತಳ್ಳಿಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಚರಂಡಿಗಳೆಲ್ಲ ತುಂಬಿ ಹರಿದಿದ್ದರಿಂದ ಅದರ ಗಲೀಜು ಕೂಡ ರಸ್ತೆ ಮೇಲೆ ಹರಿಯುತ್ತಿತ್ತು. ಪಾಲಿಕೆಗೆ ಹಿಡಿಶಾಪ ಹಾಕುತ್ತಲೇ ಜನತೆ ಮುಂದೆ ಸಾಗುತ್ತಿತ್ತು.ಕೆಲವೆಡೆ ಮಳೆ ರಸ್ತೆಯಲ್ಲಿ ಮಳೆ ನೀರು ನಿಂತಿದ್ದರಿಂದ ತಗ್ಗು-ಗುಂಡಿಗಳು ಕಾಣದೇ ವಾಹನ ಸವಾರರು ಭಯದಿಂದಲೇ ಸಂಚರಿಸುವಂತಾಯಿತು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆದುಕೊಂಡೇ ಮನೆ ಸೇರುವಂತಾಯಿತು. ಚರಂಡಿಗಳಲ್ಲಿ ತ್ಯಾಜ್ಯ ಸಿಲುಕಿದ ಪರಿಣಾಮ ಚರಂಡಿ ನೀರು ಸಹ ರಸ್ತೆ ಮೇಲೆ ಹರಿದು ತರಕಾರಿ ಸೇರಿ ಬೀದಿ ಬದಿ ವ್ಯಾಪಾರಿಗಳು ಪರದಾಡುವಂತಾಯಿತು.
ವಿವಿಧ ಕೆಲಸದ ನಿಮಿತ್ತ ನಗರಕ್ಕೆ ಬಂದಿದ್ದ ಸುತ್ತಮುತ್ತಲಿನ ಜನ ವಿವಿಧ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದರು. ಆದರೆ, ಮಳೆ ನಿರಂತರವಾಗಿ ಸುರಿಯುತ್ತಿದ್ದರಿಂದ ಕೊನೆಗೆ ಮಳೆಯಲ್ಲಿ ನೆನೆಯುತ್ತಲೇ ಊರು ಸೇರುವಂತಾಯಿತು.ಧಾರವಾಡದಲ್ಲಿ ಸಂಜೆ 5ರ ಸುಮಾರಿಗೆ ಆರಂಭವಾದ ಧಾರಾಕಾರ ಮಳೆ ಗಂಟೆಗಟ್ಟಲೆ ಬಿಟ್ಟು ಬಿಡದೇ ಸುರಿದ ಕಾರಣ ಅವಳಿ ನಗರದ ತಗ್ಗು ಪ್ರದೇಶಗಳಲ್ಲಿ ಮಳೆ ನೀರು ಹೊಕ್ಕು ಜನರು ಪರದಾಡುವಂತಾಗಿದೆ.
ಹುಬ್ಬಳ್ಳಿ ಧಾರವಾಡ ಮಧ್ಯೆ ಬಿಆರ್ ಟಿಎಸ್ ಕಾರಿಡಾರ್ ಪೈಕಿ ಧಾರವಾಡದ ಕೋರ್ಟ್ ವೃತ್ತ, ಟೋಲನಾಕಾ, ಕೆಎಂಎಫ್ ಬಳಿ ರಸ್ತೆ ಮೇಲೆ ಮಳೆ ನೀರು ಹರಿದು ವಾಹನ ಸವಾರರು ಪರದಾಡಿದರು. ಇನ್ನೂ ಜನ್ನತನಗರ, ಬಸವ ನಗರ, ಭಾವಿಕಟ್ಟಿ ಪ್ಲಾಟ್ ಹಾಗೂ ಇತರೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಹುಬ್ಬಳ್ಳಿ ಧಾರವಾಡ ಬೈಪಾಸ್ ರಸ್ತೆ ಅಗಲೀಕರಣ ನಡೆದಿದ್ದು, ಮಳೆ ನೀರು ರಸ್ತೆಗೆ ನುಗ್ಗಿ ರಸ್ತೆ ಸಂಚಾರದಲ್ಲಿ ತೀವ್ರ ಅಸ್ತವ್ಯಸ್ತವಾಗಿದೆ.ಕಳೆದ ಒಂದು ವಾರ ಬಿಸಿಲಿನ ತಾಪದಿಂದ ಸುಸ್ತಾಗಿದ್ದ ಜನತೆ ಒಮ್ಮಿಗೆ ಸುರಿದ ಮಹಾಮಳೆಗೆ ಹೈರಾಣುವನ್ನಾಗಿಸಿದ್ದಂತೂ ಸತ್ಯ.