ಬಾಳೆಹೊನ್ನೂರುರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶೃಂಗೇರಿ ಜಿಲ್ಲಾ ವ್ಯಾಪ್ತಿಯ 42 ಕಡೆಗಳಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಹಿಂದೂ ಸಮಾಜೋತ್ಸವ ಆಚರಣೆ ಮಾಡಲಾಗುವುದು ಎಂದು ಆರ್‌ಎಸ್‌ಎಸ್ ಸಂಘ ಚಾಲಕ ಟಿ.ಕೆ.ನಾರಾಯಣ ತಿಳಿಸಿದರು.

-ಎನ್.ಆರ್.ಪುರ ತಾಲೂಕು ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಗಣ್ಯರ ಸಭೆ

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶೃಂಗೇರಿ ಜಿಲ್ಲಾ ವ್ಯಾಪ್ತಿಯ 42 ಕಡೆಗಳಲ್ಲಿ ಜನವರಿ ಮತ್ತು ಫೆಬ್ರವರಿಯಲ್ಲಿ ಹಿಂದೂ ಸಮಾಜೋತ್ಸವ ಆಚರಣೆ ಮಾಡಲಾಗುವುದು ಎಂದು ಆರ್‌ಎಸ್‌ಎಸ್ ಸಂಘ ಚಾಲಕ ಟಿ.ಕೆ.ನಾರಾಯಣ ತಿಳಿಸಿದರು.ಪಟ್ಟಣದ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಎನ್.ಆರ್.ಪುರ ತಾಲೂಕು ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಗಣ್ಯರ ಸಭೆಯಲ್ಲಿ ಮಾತನಾಡಿದರು. ಆರ್‌ಎಸ್‌ಎಸ್ 100ನೇ ವರ್ಷಾಚರಣೆಯ ಸಂದರ್ಭದಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿದ್ದು, ಪಥ ಸಂಚಲನ, ಯುವ ಸಂಚಲನ, ಗೃಹ ಸಂಪರ್ಕ ಅಭಿಯಾನ ನಡೆಸಲಾಗಿದೆ. ಇದೀಗ ದೇಶಾದ್ಯಂತ ಹಿಂದೂ ಸಮಾಜೋತ್ಸವ ಆಚರಿಸುತ್ತಿದೆ. ಸಮಾಜವೇ ಈ ಕಾರ್ಯಕ್ರಮ ನಡೆಸಬೇಕು ಎಂಬುದು ಸಂಘದ ಆಶಯವಾಗಿದೆ.

ಸಂಘ ಆರಂಭಗೊಂಡಾಗ ಹಿಂದೂ ಎಂದು ಹೇಳಲು ಅಂಜಿಕೆ ಇತ್ತು. ಆದರೆ ಸಂಘ ಶತಮಾನೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ದೇಶ ವಾಸಿಗಳು ಗರ್ವದಿಂದ ಹಿಂದೂ ಎಂದು ಹೇಳುತ್ತಿದ್ದಾರೆ. ಭಾರತ ವಿಶ್ವಗುರುವಾಗಬೇಕು ಎಂಬುದು ಸಂಘದ ಆಶಯ, ಇದಕ್ಕೆ ಹಿಂದುತ್ವ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹಿಂದೂ ಸಮಾಜೋತ್ಸವ ಆಚರಣೆ ಮಾಡುತ್ತಿದ್ದು, ಶೃಂಗೇರಿ ಜಿಲ್ಲಾ ವ್ಯಾಪ್ತಿಯಲ್ಲಿ ಜನವರಿಯಿಂದ ಫೆಬ್ರವರಿವರೆಗೆ ಹಲವು ವಿಶೇಷತೆ, ವಿಭಿನ್ನತೆಗಳಿಂದ ಸಮಾಜೋತ್ಸವ ಆಚರಣೆ ಮಾಡ ಲಾಗುತ್ತಿದೆ. ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಪೂರಕವಾಗಿದೆ ಎಂದರು.ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಉಪಾಧ್ಯಕ್ಷ ಆರ್.ಡಿ.ಮಹೇಂದ್ರ ಮಾತನಾಡಿ, ಜ.30ರಂದು ಸಂಜೆ 5ಕ್ಕೆ ಪಟ್ಟಣದ ಮಾರ್ಕಾಂಡೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಗೋ ಪೂಜೆ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು, ವೇಷಭೂಷಣಗಳು ಇರಲಿವೆ.ಸಂಜೆ 6.30ಕ್ಕೆ ಕಲಾರಂಗ ಕ್ರೀಡಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದ್ದು, ಶೃಂಗೇರಿ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಂಘದ ಹಿರಿಯ ಪ್ರಚಾರ ಸೀತಾರಾಮ ಕೆದಿಲಾಯ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸುಮಾರು 4 ಸಾವಿರ ಸಂಖ್ಯೆಯಲ್ಲಿ ಹಿಂದೂಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಥಳದಲ್ಲಿ ರಾಷ್ಟ್ರೀಯ ಸಾಹಿತ್ಯ ಮಾರಾಟ, ಗೋ ಉತ್ಪನ್ನ ಮಾರಾಟವಿರಲಿದೆ ಎಂದು ತಿಳಿಸಿದರು.ಆಯೋಜನಾ ಸಮಿತಿ ಸಹ ಸಂಯೋಜಕ ಬಿ.ವೆಂಕಟೇಶ್, ಸಂಘದ ಸ್ವಯಂ ಸೇವಕರಾದ ಸಿ.ಎಸ್.ಮಹೇಶ್ಚಂದ್ರ, ರತ್ನಾಕರ ಗಡಿಗೇಶ್ವರ, ಗುರುಪ್ರಸಾದ್ ಮತ್ತಿತರರು ಇದ್ದರು.೧೬ಬಿಹೆಚ್‌ಆರ್ ೨:

ಬಾಳೆಹೊನ್ನೂರಿನಲ್ಲಿ ಹಿಂದೂ ಸಮಾಜೋತ್ಸವ ಆಚರಣಾ ಸಮಿತಿ ಆಯೋಜಿಸಿದ್ದ ಗಣ್ಯರ ಸಭೆಯಲ್ಲಿ ಆರ್‌ಎಸ್‌ಎಸ್ ಸಂಘ ಚಾಲಕ ಟಿ.ಕೆ.ನಾರಾಯಣ ಮಾತನಾಡಿದರು. ಆರ್.ಡಿ.ಮಹೇಂದ್ರ, ಬಿ.ವೆಂಕಟೇಶ್ ಇದ್ದರು.