ಕನ್ನಡಪ್ರಭ ವಾರ್ತೆ ಯಾದಗಿರಿ
ಈದ್- ಮಿಲಾದ್ ಹಬ್ಬವು ಕೇವಲ ಆಚರಣೆಗೆ ಸೀಮಿತವಾಗದೆ ಸಮಾಜದಲ್ಲಿ ಪ್ರೀತಿ, ಶಾಂತಿ, ಸಹೋದರತ್ವ ಮತ್ತು ಮಾನವೀಯತೆ ಬೆಳೆಸುವಂತಾಗಬೇಕು ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.ನಗರದ ಮೈಲಾಪುರ ಅಗಸಿಯಲ್ಲಿ ತಂಜೀಮುಲ್ ಮುಸ್ಲಿಮೀನ್ ಹಾಗೂ ಬೈತುಲ್ ಮಾಲ್ ಯಾದಗಿರಿ ವತಿಯಿಂದ ಬುಧವಾರ ಆಯೋಜಿಸಿದ್ದ ಈದ್-ಮಿಲಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಿಂದೂ-ಮುಸ್ಲಿಂ ಸಹೋದರರು ಅನ್ಯೋನ್ಯತೆಯಿಂದ ಬದುಕಬೇಕು. ಈಗಿನ ಸ್ಥಿತಿಯಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಬೇಕು. ಪ್ರವಾದಿ ಮೊಹಮ್ಮದ್ ಅವರು ಶಾಂತಿ, ಸಹನೆ ಮತ್ತು ಮಾನವೀಯತೆಯ ಸಂದೇಶ ಸಾರಿದ್ದರು ಎಂದರು.
ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಮೌಲಾನಾ ಮುಹಮ್ಮದ್ ಸಾಹಿಲ್ ಅಝ್ಹರಿ ಮಂಗಳೂರು ಮಾತನಾಡಿ, ದ್ವೇಷ, ಮೋಸಕ್ಕೆ ಸಮಾಜದಲ್ಲಿ ಅವಕಾಶ ನೀಡದೆ, ಸ್ನೇಹ, ಪ್ರೀತಿ ಮತ್ತು ವಿಶ್ವಾಸದಿಂದ ಬದುಕಬೇಕು. ಧರ್ಮ, ಜಾತಿ ಹಾಗೂ ವರ್ಗದ ತಾರತಮ್ಯವಿಲ್ಲದೆ ಪರಸ್ಪರ ಗೌರವಿಸುವುದು ಅಗತ್ಯ. ಯಾವುದೇ ಧರ್ಮವು ಮತ್ತೊಂದು ಧರ್ಮವನ್ನು ದ್ವೇಷಿಸುವಂತೆ ಬೋಧಿಸುವುದಿಲ್ಲ. ಎಲ್ಲ ಧರ್ಮಗಳನ್ನು ಗೌರವಿಸಿ, ಸೌಹಾರ್ದತೆಯಿಂದ ಬದುಕುವುದೇ ನಿಜವಾದ ಧಾರ್ಮಿಕ ಸಂದೇಶವಾಗಿದೆ ಎಂದರು.ತಂಜೀಮುಲ್ ಮುಸ್ಲಿಮೀನ್ ಅಧ್ಯಕ್ಷ ಇರ್ಫಾನ್ ಹುಸೇನ್ ಬಾದಲ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಡಾ.ಎ.ಬಿ. ಮಾಲಕರೆಡ್ಡಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ್, ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ. ಭೀಮಣ್ಣ ಮೇಟಿ, ಹನುಮೇಗೌಡ ಬೀರನಕಲ್, ಮೌಲಾಲಿ ಅನಪುರ, ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಬಸವರಾಜ ಜೈನ್, ಸುದರ್ಶನ ನಾಯಕ, ಮನ್ಸೂರ್ ಅಫ್ಘಾನ್, ದಲಿತ ಮುಖಂಡ ಮರೆಪ್ಪ ಚಟ್ಟೆರಕರ್, ಗುಂಡಪ್ಪ ಕಲ್ಬುರ್ಗಿ, ಮೌಲಾನಾ ಮುಹಮ್ಮದ್ ಸದ್ರುಲ್ ಹುದಾ, ಮೌಲಾನಾ ಮುಹಮ್ಮದ್ ಸಲೀಂ, ಮುಹಮ್ಮದ್ ನಿಜಾಮುದ್ದೀನ್ ಬರ್ಕಾತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಿ. ಹಫೀಸ್ ಪಟೇಲ್ ನಿರೂಪಿಸಿದರು.