ಡಾ. ಆರ್.ಸಿ. ಹಿರೇಮಠರು ಕಡು ಬಡತನದಲ್ಲಿ ಹುಟ್ಟಿ ಬಂದು ಜೋಳಿಗೆ ಹಾಕಿ ಕಂತಿ ಭಿಕ್ಷೆಯಿಂದ ಜೀವನಸಾಗಿಸಿದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಬಂದವರು. ತಮ್ಮ ಸ್ವಪ್ರತಿಭೆಯಿಂದಲೇ ಜ್ಞಾನ ದಾಸೋಹಿಯಾಗಿ, ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಸ್ಥಾಪಕರಾಗಿ ಕೊನೆಗೆ ಕುಲಪತಿಗಳಾಗಿ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆಸಿದರು.
ಧಾರವಾಡ:
ಡಾ. ಆರ್.ಸಿ. ಹಿರೇಮಠ ಅವರ ಆತ್ಮಕಥನ ‘ಉರಿಬರಲಿ ಸಿರಿಬರಲಿ’ ಅದು ಬರಿ ವ್ಯಕ್ತಿ ಚರಿತ್ರೆ ಆಗಿರದೇ ಆ ಕಾಲಘಟ್ಟದ ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಕಟ್ಟಿಕೊಡುವ ಅಪರೂಪದ ಶ್ರೇಷ್ಠ ಜೀವನ ಚರಿತ್ರೆಯಾಗಿದೆ ಎಂದು ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಶಾಂತಾ ಇಮ್ರಾಪೂರ ಹೇಳಿದರು.ಇಲ್ಲಿನ ಕರ್ನಾಟಕ ವಿದ್ಯಾವರ್ಧಕ ಸಂಘವು ಆಯೋಜಿಸಿದ್ದ ಶ್ರೇಷ್ಠ ಭಾಷಾ ವಿಜ್ಞಾನಿ ಡಾ. ಆರ್.ಸಿ. ಹಿರೇಮಠ ದತ್ತಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ‘ಆತ್ಮಕಥೆ ಉರಿಬರಲಿ ಸಿರಿಬರಲಿ’ ವಿಷಯ ಕುರಿತು ಉಪನ್ಯಾಸ ನೀಡಿದರು.
ಹಿರೇಮಠರು ಕಡು ಬಡತನದಲ್ಲಿ ಹುಟ್ಟಿ ಬಂದು ಜೋಳಿಗೆ ಹಾಕಿ ಕಂತಿ ಭಿಕ್ಷೆಯಿಂದ ಜೀವನಸಾಗಿಸಿದರು. ಸಾಮಾನ್ಯ ಕುಟುಂಬದಲ್ಲಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಬಂದವರು. ತಮ್ಮ ಸ್ವಪ್ರತಿಭೆಯಿಂದಲೇ ಜ್ಞಾನ ದಾಸೋಹಿಯಾಗಿ, ಪ್ರಾಧ್ಯಾಪಕರಾಗಿ ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠ ಸ್ಥಾಪಕರಾಗಿ ಕೊನೆಗೆ ಕುಲಪತಿಗಳಾಗಿ ವಿಶ್ವವಿದ್ಯಾಲಯ ಉನ್ನತ ಮಟ್ಟಕ್ಕೆ ಬೆಳೆಸಿದರು. ಒಬ್ಬ ಶ್ರೇಷ್ಠ ಸಂಶೋಧಕನಿಗಿರಬೇಕಾದ ವೈಜ್ಞಾನಿಕತೆ, ಸತ್ಯ ನಿಷ್ಠುರತೆ, ಪಾಂಡಿತ್ಯ ಅವರಲ್ಲಿತ್ತು ಎಂದರು.ಕನ್ನಡ ಅಧ್ಯಯನ ಪೀಠದಲ್ಲಿ ಕನ್ನಡ ಸಾಹಿತ್ಯ ಓದುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಕನ್ನಡ ಸಾಹಿತ್ಯದ ಜತೆಗೆ ಭಾಷಾಶಾಸ್ತ್ರ, ಜಾನಪದ ಶಾಸ್ತ್ರದಂತಹ ವಿಷಯ ಅಧ್ಯಯನಕ್ಕೆ ಅನುಕೂಲ ಕಲ್ಪಿಸಿದರು. ಅಳಿದು ಹೋಗುತ್ತಿದ್ದ ಸುಮಾರು ೧೦ ಸಾವಿರ ಹಸ್ತಪ್ರತಿ ಸಂರಕ್ಷಿಸಿ ಸಂಗ್ರಹಿಸಿದ್ದರು. ಶರಣ ಸಂಸ್ಕೃತಿಯ ಚಿಂತಕರಾದ ಹಿರೇಮಠ, ವಚನ ಸಾಹಿತ್ಯ, ದಾಸ ಸಾಹಿತ್ಯ, ಗ್ರಂಥ ಪ್ರಕಟಣೆಯ ವಿಭಾಗ ಪ್ರಾರಂಭಿಸಿದರು. ವಿದೇಶಗಳಿಗೆ ಹೋಗಿ ಭಾಷಾಶಾಸ್ತ್ರದ ಬಗ್ಗೆ ಆಳವಾದ ಅಧ್ಯಯನ ಮಾಡಿದರು. ಯಾವ ಟಿಪ್ಪಣಿ ಇಲ್ಲದೇ ತಾಸುಗಟ್ಟಲೆ ನಿರರ್ಗಳವಾಗಿ ಉಪನ್ಯಾಸ ನೀಡುತ್ತಿದ್ದರು. ಅವರ ಆತ್ಮಕಥೆ “ಉರಿಬರಲಿ ಸಿರಿಬರಲಿ” ಎಂಬುದು ಜಗತ್ತಿನ ಆತ್ಮಕಥನದಲ್ಲೇ ಸರ್ವಶ್ರೇಷ್ಠವಾದುದಾಗಿದೆ. ಅವರು ನಿಜ ಅರ್ಥದಲ್ಲಿ ಕನ್ನಡ ಸಾಹಿತ್ಯದಯುಗ ಪ್ರವರ್ತಕರಾಗಿದ್ದರು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಡಾ. ಬಾಳಣ್ಣ ಶೀಗೀಹಳ್ಳಿ ಮಾತನಾಡಿ, ಹಿರೇಮಠ ತಮ್ಮಆತ್ಮಕಥನ ‘ಉರಿಬರಲಿ ಸಿರಿಬರಲಿ’ ಎಂಬುದನ್ನು ವಸ್ತುನಿಷ್ಠವಾಗಿ, ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಅವರ ಪಾಠ ಕೇಳುವುದೇ ವಿದ್ಯಾರ್ಥಿಗಳಿಗೆ ಸಂಭ್ರಮ. ಪ್ರಾಧ್ಯಾಪಕರಲ್ಲಿರಬೇಕಾದ ಬದ್ಧತೆ ಹಾಗೂ ಆತ್ಮವಿಶ್ವಾಸ ಅವರಲ್ಲಿತ್ತು. ಗಾಂಧೀಜಿ ಅವರಂತೆ ಅವರ ಬದುಕೇ ಒಂದು ಸಂದೇಶವಾಗಿತ್ತು ಎಂದರು.ಕಾರ್ಯಕ್ರಮದಲ್ಲಿ ದತ್ತಿದಾನಿ ಡಾ. ಶಶಿಕಲಾ ಆರ್. ಹಿರೇಮಠ ಉಪಸ್ಥಿತರಿದ್ದರು. ವೀರಣ್ಣ ಒಡ್ಡೀನ ಸ್ವಾಗತಿಸಿದರು. ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಶಿವಾನಂದ ಭಾವಿಕಟ್ಟಿ ನಿರೂಪಿಸಿದರು. ಸತೀಶ ತುರಮರಿ ವಂದಿಸಿದರು. ಸುಮಿತ್ರಾ ಕಾಡದೇವರಮಠ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಎಂ.ಎಂ. ಚಿಕ್ಕಮಠ, ಶಂಕರಲಿಂಗ ಶಿವಳ್ಳಿ, ಡಾ. ಲಿಂಗರಾಜ ಅಂಗಡಿ, ಸುರೇಶ ಭಂಡಾರಿ, ಡಾ. ಡಿ.ಎಂ. ಹಿರೇಮಠ ಸೇರಿದಂತೆ ಮುಂತಾದವರಿದ್ದರು.