ಸಾರಾಂಶ
4-5 ದಶಕದಿಂದ ಮನರಂಜನೆ ಕೇಂದ್ರವಾಗಿದ್ದ ಚಿತ್ರಮಂದಿರ । ಜೆಸಿಬಿಯಿಂದ ನೆಲಸಮ । ತಲೆ ಎತ್ಲಲಿದೆ 3 ಅಂತಸ್ತಿನ ಕಟ್ಟಡ
ಕನ್ನಡ ಪ್ರಭ ವಾರ್ತೆ ಹೊನ್ನಾಳಿಪಟ್ಟಣದ ಶಾಂತ ಚಿತ್ರಮಂದಿರ ಕಳೆದ ನಾಲ್ಕು ದಶಕಗಳಿಂದ ಹೊನ್ನಾಳಿ ಪಟ್ಟಣ, ತಾಲೂಕಿನ ಗ್ರಾಮಗಳ ಜನತೆಗೆ ಮನರಂಜನೆ ಕೇಂದ್ರವಾಗಿದ್ದ ಶಾಂತ ಚಿತ್ರಮಂದಿರ ಇದೀಗ ಕೆಡವಲಾಗುತ್ತಿದ್ದು ಹೊನ್ನಾಳಿ ತಾಲೂಕಿನ ಜನತೆಗೆ ಶಾಂತ ಚಿತ್ರಮಂದಿರ ಇನ್ನು ಕೇವಲ ನೆನಪು ಮಾತ್ರವಾಗಲಿದೆ.
ಇದೀಗ ಈ ಚಿತ್ರಮಂದಿರದ ಕಟ್ಟಡವನ್ನು ಜೆಸಿಬಿ ಬಳಸಿ ನೆಲಸಮ ಮಾಡಲಾಗುತ್ತಿದ್ದು ಇಲ್ಲಿಯವರೆಗೆ ಪಟ್ಟಣದಲ್ಲಿ ಬಹುತೇಕ ಎಲ್ಲಾ ಸೌಲಭ್ಯಗಳನ್ನು ಹೊಂದಿದ ಐಕೈಕ ಚಿತ್ರಮಂದಿರ ಎಂದರೆ ಅದು ಶಾಂತ ಚಿತ್ರಮಂದಿರವಾಗಿತ್ತು.1984ರಲ್ಲಿ ಮಾಜಿ ಶಾಸಕ ದಿವಂಗತ ಎಚ್.ಬಿ.ಕಾಡಸಿದ್ದಪ್ಪ ಅವರು ನಿರ್ಮಿಸಿದ್ದ ಹಾಗೂ ಅಂದಿನಿಂದಲೂ ಈ ಚಿತ್ರಮಂದಿರದಲ್ಲಿ ಸಿನಿಮಾ ಪ್ರದರ್ಶನದ ಮೂಲಕ ತಾಲೂಕಿನ ಚಿತ್ರಪ್ರೇಮಿಗಳಿಗೆ ಮನರಂಜನೆಯ ಕೇಂದ್ರವಾಗಿತ್ತು, 42 ವರ್ಷಗಳ ಹಿಂದೆ ನಿರ್ಮಿಸಿದ್ದ ಈ ಚಿತ್ರಮಂದಿರದಲ್ಲಿ ನಟಸಾರ್ವಭೌಮ ಡಾ.ರಾಜ್ ಕುಮಾರ್. ಡಾ. ವಿಷ್ಟುವರ್ಧನ್, ಡಾ.ಅಂಬರೀಷ್, ಶಂಕರನಾಗ್, ಅನಂತನಾಗ್, ಡಾ.ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ದಿ.ಪುನೀತ್ ರಾಜ್ ಕುಮಾರ್, ಸುದೀಪ್, ದರ್ಶನ್, ಯಶ್, ಇತರೆ ಅನೇಕ ಖ್ಯಾತ ನಟ, ನಟಿಯವರು ನಟಿಸಿದ ಕನ್ನಡ ಸಿನಿಮಾಗಳು ಈ ಚಿತ್ರಮಂದಿರದಲ್ಲಿ ಭರ್ಜರಿ ಪ್ರದರ್ಶನ ಕಂಡಿವೆ.
ಕೆಲ ಚಿತ್ರಗಳಂತೂ 25, 50 ದಿನಗಳವರೆಗೆ ಪ್ರದರ್ಶನ ಕಂಡಿದ್ದವು, ಒಂದು ಕಾಲದಲ್ಲಿ ಹೆಸರಾಂತ ನಟರ ಚಿತ್ರಗಳಿಗೆ ಚಿಂತ್ರಮಂದಿರ ಪ್ರೇಕ್ಷಕರಿಂದ ತುಂಬಿ ಹೌಸ್‌ಫುಲ್ ಫಲಕಗಳೂ ಕೂಡ ಹಾಕಿದ್ದುಂಟು. ವಿಶೇಷವಾಗಿ ಹಳ್ಳಿಗಳಿಂದ ಚಕ್ಕಡಿ ಬಂಡಿಗಳಲ್ಲಿ ಹೊನ್ನಾಳಿಗೆ ಬಂದು ಈ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸಿ ಜನ ತಮ್ಮ ಗ್ರಾಮಗಳಿಗೆ ತೆರಳುತಿದ್ದರು. ಹೋಂ ಥಿಯೇಟರ್, ಮೊಬೈಲ್‌ಗಳಿಂದ ಮನೆಗಳಲ್ಲಿಯೇ ಮನರಂಜನೆ ಲಭ್ಯವಾಗುತ್ತಿರುವ ಕಾರಣ ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡುವರರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ.ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯೂ ಕೂಡ ಕಡಿಮೆಯಾಗಿ ಚಿತ್ರಮಂದಿರ ಮಾಲೀಕರು ನಷ್ಟ ಅನುಭವಿಸುವಂತಾಯಿತು ಎಂದು ಶಾಂತ ಚಿತ್ರ ಮಂದಿರದ ಪ್ರಸ್ತುತ ಮಾಲೀಕ ಹಾಗೂ ದಿವಂಗತ ಎಚ್.ಬಿ.ಕಾಡಸಿದ್ದಪ್ಪ ಅವರ ಪುತ್ರ ಎಚ್.ಬಿ. ಶಿವಯೋಗಿ ಬೇಸರ ವ್ಯಕ್ತಪಡಿಸಿದರು.
ಚಿತ್ರಮಂದಿರದ ಜಾಗದಲ್ಲಿ ಮೂರಂತಸ್ತಿನ ಕಟ್ಟಡ ನಿರ್ಮಾಣ:ನೆಲಸಮಗೊಳ್ಳುತ್ತಿರುವ ಶಾಂತ ಚಿತ್ರಮಂದಿರದ ಜಾಗದಲ್ಲಿ ಮೂರು ಅಂತಸ್ತಿನ ಕಟ್ಟಡ ನಿರ್ಮಾಣ ಮಾಡಲಾಗುವುದು ಎಂದು ಚಿತ್ರಮಂದಿರದ ಮಾಲೀಕ ಎಚ್.ಬಿ.ಶಿವಯೋಗಿ ತಿಳಿಸಿದ್ದಾರೆ.
ಒಂದು ಕಾಲಕ್ಕೆ ಶಾಂತ ಚಿತ್ರಮಂದಿರ, ನಾಲ್ಕು ಟೂರಿಂಗ್ ಟಾಕೀಸ್ ಪಟ್ಟಣದಲ್ಲಿ ಸಿನಿಮಾ ಪ್ರದರ್ಶನ ನೀಡುತ್ತಿದ್ದವು ದಶಕದ ಹಿಂದೆಯೇ ಟೂರಿಂಗ್ ಟಾಕೀಸ್‌ಗಳು ಬಂದ್ ಆಗಿವೆ, ಉತ್ತಮ ಕಟ್ಟಡ ಮತ್ತು ಮೂಲಭೂತ ಸೌಲಭ್ಯಗಳಿದ್ದ ಶಾಂತ ಚಿತ್ರಮಂದಿರ ಇದೀಗ ನೆಲಸಮವಾಗುತ್ತಿದ್ದು, ಚಿತ್ರ ಪ್ರೇಮಿಗಳಿಗೆ ಅವ್ಯಕ್ತ ಬೇಸರ ತಂದಿದ್ದು, ದಶಕಗಳ ಕಾಲ ಜನರೊಂದಿಗಿದ್ದ ಅವಿನಾಭವ ಸಂಬಂಧ ಇದೀಗ ಅಂತ್ಯ ಕಂಡಿದೆ.ತಮ್ಮ ತಂದೆ ಮಾಜಿ ಶಾಸಕ ದಿವಂಗತ ಎಚ್.ಬಿ.ಕಾಡಸಿದ್ದಪ್ಪ ಅವರು, ಅವರ ಶ್ರಿಮತಿ ಅಂದರೆ ನನ್ನ ತಾಯಿ ದಿವಂಗತ ಶಾಂತ ಅವರ ಹೆಸರಿನಲ್ಲಿ ಪಟ್ಟಣದಲ್ಲಿ 1984ರಲ್ಲಿ ಸುಸಜ್ಜಿತ ಚಿತ್ರಮಂದಿರ ನಿರ್ಮಿಸಿದ್ದರು. ಸುಸ್ಥಿತಿಯಲ್ಲಿದ್ದ ಉತ್ತಮ ಚಿತ್ರಮಂದಿರದ ಕಟ್ಟಡವನ್ನು ಕೆಡವಿದಾಗ ಮನಸ್ಸಿಗೆ ದುಃಖವಾಯಿತು. ಮುಂದೆ ಇದೇ ಜಾಗದಲ್ಲಿ ಮೂರು ಅಂತಸ್ತಿನ ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಿಸುವ ಗುರಿ ಇದೆ.
ಎಚ್.ಬಿ.ಶಿವಯೋಗಿ, ಚಿತ್ರಮಂದಿರದ ಮಾಲೀಕ.