ಸಾರಾಂಶ
ಸೊಳ್ಳೆಗಳ ಉತ್ಪತ್ತಿ ತಾಣವಾದ ಸಿಮೆಂಟ್ ತೊಟ್ಟಿಗಳು, ಟೈರ್ ಗಳು, ಬ್ಯಾರೆಲ್ ಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೆಂಘೀ ಮತ್ತು ಚಿಕುನ್ ಗುನ್ಯಾ, ಮಲೇರಿಯಾ ಹರಡುವ ಸೊಳ್ಳೆಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತವೆ ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಮದ್ದೂರು
ಡೆಂಘೀ, ಚಿಕುನ್ ಗುನ್ಯಾ ಮತ್ತು ಮಲೇರಿಯಾದಂತಹ ರೋಗಗಳು ಹರಡುವುದನ್ನು ನಿಯಂತ್ರಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ರವೀಂದ್ರ ಬಿ.ಗೌಡ ಹೇಳಿದರು.ಪಟ್ಟಣದ ಸಿದ್ಧಾರ್ಥ ನಗರ ಬಡಾವಣೆಯ ಅಂಬೇಡ್ಕರ್ ಉದ್ಯಾನವನದಲ್ಲಿ ಜಿಲ್ಲಾ ಮತ್ತು ತಾಲೂಕು ಆರೋಗ್ಯ ಇಲಾಖೆಯಿಂದ ಸಾಂಕ್ರಾಮಿಕ ರೋಗಗಳ ಕುರಿತು ಪೌರಕಾರ್ಮಿಕರಿಗೆ ಪುನರ್ ಮನನ ಮತ್ತು ತರಬೇತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಮುಂಗಾರು ಆರಂಭವಾಗುತ್ತಿದೆ. ಬಡಾವಣೆಗಳ ಮನೆಗಳು, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸೊಳ್ಳೆಗಳ ಸಂತಾನವೃದ್ಧಿಯಾಗದಂತೆ ಪೌರ ಕಾರ್ಮಿಕರು ನಾಗರಿಕರಲ್ಲಿ ಜಾಗೃತಿ ಮೂಡಿಸಬೇಕು. ಒಂದು ವಾರಕ್ಕಿಂತ ಹೆಚ್ಚಿನ ರೀತಿಯಲ್ಲಿ ನೀರು ಶೇಖರಣೆಯಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.ಸೊಳ್ಳೆಗಳ ಉತ್ಪತ್ತಿ ತಾಣವಾದ ಸಿಮೆಂಟ್ ತೊಟ್ಟಿಗಳು, ಟೈರ್ ಗಳು, ಬ್ಯಾರೆಲ್ ಗಳು ಮತ್ತು ಘನ ತ್ಯಾಜ್ಯ ವಸ್ತುಗಳಲ್ಲಿ ನೀರು ನಿಂತು ಡೆಂಘೀ ಮತ್ತು ಚಿಕುನ್ ಗುನ್ಯಾ, ಮಲೇರಿಯಾ ಹರಡುವ ಸೊಳ್ಳೆಗಳು ಯಥೇಚ್ಛವಾಗಿ ಉತ್ಪತ್ತಿಯಾಗುತ್ತವೆ ಎಂದು ಎಚ್ಚರಿಸಿದರು.
ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಳ್ಳುವ ಸಾಧ್ಯತೆ ಇರುವುದರಿಂದ ಪೌರಕಾರ್ಮಿಕರು ಆದಷ್ಟು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ಈಡೆನ್ ಲಾರ್ವ ಬಗ್ಗೆ ಪ್ರಾಥಮಿಕ ಪ್ರದರ್ಶನ ನೀಡಲಾಯಿತು. ವೇದಿಕೆ ಕಾರ್ಯಕ್ರಮ ಮುನ್ನಾ ಡೆಂಘೀ, ಚಿಕುನ್ ಗುನ್ಯಾ, ಮಲೇರಿಯಾ ನಿಯಂತ್ರಣ ಕುರಿತಂತೆ ಪೌರಕಾರ್ಮಿಕರು, ಆಶಾ ಕಾರ್ಯಕರ್ತೆಯರು ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣದ ಬಗ್ಗೆ ಅರಿವು ಮೂಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ನಿರೀಕ್ಷಕ ಎಸ್.ಕೆ.ತಮ್ಮೇಗೌಡ, ಆರೋಗ್ಯ ನಿರೀಕ್ಷಕರಾದ ಜೈ ಕುಮಾರಿ, ಪುರುಷೋತ್ತಮ್, ಆಶಾ ಕಾರ್ಯಕರ್ತೆಯರು ಇದ್ದರು.