ನರಸಿಂಹರಾಜಪುರಅಂದಾಜು ₹35 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿ ಮುಗಿಯುತ್ತಾ ಬಂದಿದ್ದು ಮುಂದಿನ 3 ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
- ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿಯಲ್ಲಿ ನೂತನ ಗ್ರಂಥಾಲಯ ಉದ್ಘಾಟನೆ
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರಅಂದಾಜು ₹35 ಕೋಟಿ ವೆಚ್ಚದ ಹೊನ್ನೇಕೊಡಿಗೆ ಸಂಪರ್ಕ ಸೇತುವೆ ಕಾಮಗಾರಿ ಮುಗಿಯುತ್ತಾ ಬಂದಿದ್ದು ಮುಂದಿನ 3 ತಿಂಗಳಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ತಿಳಿಸಿದರು.
ಮಂಗಳವಾರ ಹೊನ್ನೇಕೊಡಿಗೆ ಗ್ರಾಪಂನಲ್ಲಿ ನೂತನ ಗ್ರಂಥಾಲಯ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಮಗದ ಅಧ್ಯಕ್ಷ ಎಂ.ಶ್ರೀನಿವಾಸ್ ಪ್ರಯತ್ನ ಪಟ್ಟು ಹೊನ್ನೇಕೊಡಿಗೆ ಸೇತುವೆಗೆ ಅನುದಾನ ತಂದಿದ್ದು ಮುಖ್ಯ ಮಂತ್ರಿ ಸಿದ್ದರಾಮಯ್ಯ ಸೇತುವೆಯನ್ನು ಉದ್ಘಾಟಿಸಲಿದ್ದಾರೆ. ಈ ಸೇತುವೆ ನಿರ್ಮಾಣದಿಂದ ಹೊನ್ನೇಕೊಡಿಗೆ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ನರಸಿಂಹರಾಜಪುರ ಪಟ್ಟಣಕ್ಕೆ ಹೋಗಲು 15 ಕಿ.ಮೀ.ಹತ್ತಿರವಾಗಲಿದೆ ಎಂದರು.ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆಗೆ ಅರಣ್ಯ ಇಲಾಖೆ ಅಭಿಪ್ರಾಯ ಪಡೆಯಲಾಗಿತ್ತು .ಆದರೂ ಕೆಲವು ಸಮಸ್ಯೆಗಳು ಎದುರಾಗಿದೆ. ಇದನ್ನು ಬಗೆರಿಸುತ್ತೇವೆ. ಶೃಂಗೇರಿ ಕ್ಷೇತ್ರದಲ್ಲಿ ಕಾಡಾನೆಯಿಂದ 9 ಜನ ಮೃತಪಟ್ಟಿದ್ದಾರೆ.ಎಲ್ಲರಿಗೂ ಪರಿಹಾರ ನೀಡಲಾಗಿದೆ. ಕಾಡಾನೆಗಳು ನಾಡಿಗೆ ಬಾರದಂತೆ ಶಾಶ್ವತ ಪರಿಹಾರ ಮಾಡಲು 7.50 ಕಿ.ಮೀ.ಉದ್ದದ ರೇಲ್ವೆ ಬ್ಯಾರಿಕೇಡ್ ಗೆ ಹಣ ಮಂಜೂರಾಗಿದೆ. ಶೃಂಗೇರಿ ಕ್ಷೇತ್ರದಲ್ಲಿ 5 ಕಾಡಾನೆಗಳನ್ನು ಸೆರೆ ಹಿಡಿಯಲಾಗಿದೆ ಎಂದರು.
ಶೃಂಗೇರಿ ಕ್ಷೇತ್ರದಲ್ಲಿ ಎನ್.ಆರ್.ಪುರ ತಾಲೂಕಿನ ಕಸಬಾ ಹೋಬಳಿ ಹಾಗೂ ಕೊಪ್ಪ ತಾಲೂಕಿನ ಮೇಗುಂದ ಹೋಬಳಿಗೆ ಒಟ್ಟು ₹200 ಕೋಟಿ ಅನುದಾನ ನೀಡಲಾಗಿದ್ದು ಅತಿ ಹೆಚ್ಚು ಅನುದಾನ ಪಡೆದ 2 ಹೋಬಳಿಗಳಾಗಿದೆ. ಹೊನ್ನೇಕೊಡಿಗೆ ಭಾಗಕ್ಕೆ ಕೆಎಸ್ ಆರ್ ಟಿ ಸಿ ಬಸ್ಸು ಬೇಕು ಎಂದು ಇಲ್ಲಿನ ಗ್ರಾಮಸ್ಥರು ಬೇಡಿಕೆ ಇಟ್ಟಿದ್ದಾರೆ. ಶೃಂಗೇರಿಯಲ್ಲಿ ₹12 ಕೋಟಿ ವೆಚ್ಚದಲ್ಲಿ ಕೆಎಸ್ಆರ್ ಟಿ ಸಿ ಡಿಪೋ ಪ್ರಾರಂಭಿಸ ಲಾಗುತ್ತಿದೆ. ಡಿಪೋ ಆದ ನಂತರ ಗ್ರಾಮೀಣ ಭಾಗಕ್ಕೆ ಸರ್ಕಾರಿ ಬಸ್ಸುಗಳನ್ನು ಕಳಿಸಲಾಗುತ್ತದೆ. ಶೃಂಗೇರಿ ಕ್ಷೇತ್ರಕ್ಕೆ 3 ಕರ್ನಾಟಕ ಪಬ್ಲಿಕ್ ಸ್ಕೂಲ್ ಮಂಜೂರಾಗಿದೆ. 3 ತಾಲೂಕಿನ ಗ್ರಾಮೀಣ ರಸ್ತೆಗಾಗಿ ₹15 ಕೋಟಿ ನರೇಗಾ ಯೋಜನೆಯಲ್ಲಿ ಕೇಂದ್ರ ಸರ್ಕಾರ ಹಲವು ಬದಲಾವಣೆ ತರಲು ಹೊರಟಿದ್ದು ಇದರಿಂದ ಗ್ರಾಮ ಪಂಚಾಯಿತಿ ಶಕ್ತಿ ಕಡಿಮೆಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.ಅತಿಥಿಯಾಗಿದ್ದ ಗ್ರಾಪಂ ಸದಸ್ಯ ಕೆ.ಎನ್.ಮಂಜುನಾಥ್ ಮಾತನಾಡಿ, ಹೊನ್ನೇಕೊಡಿಗೆ ಗ್ರಾಮ ಪಂಚಾಯಿತಿ ವಿವಿಧ ರಸ್ತೆಗಳಿಗೆ ಶಾಸಕ ಟಿ.ಡಿ.ರಾಜೇಗೌಡರು ₹1 ಕೋಟಿಗೂ ಹೆಚ್ಚು ಅನುದಾನ ನೀಡಿದ್ದಾರೆ. ಹೊನ್ನೇಕೊಡಿಗೆ ಸಂಪರ್ಕ ಸೇತುವೆಯಿಂದ ಇಲ್ಲಿನ ಸಾವಿರಾರು ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ನಮ್ಮ ಗ್ರಾಪಂ ಅವದಿಯಲ್ಲಿ ₹10 ಕೋಟಿ ಕಾಮಗಾರಿ ಆಗಿದೆ. 32 ಜನರಿಗೆ ಸಂದ್ಯಾ ಸುರಕ್ಷಾ ಪತ್ರ ನೀಡಿದ್ದೇವೆ ಎಂದರು.
ತಾಪಂ ಮಾಜಿ ಅಧ್ಯಕ್ಷೆ ಮೀನಾಕ್ಷಿ ಕಾಂತರಾಜ್ ಮಾತನಾಡಿ, ಹೊನ್ನೇಕೊಡಿಗೆ ಏತ ನೀರಾವರಿ ಯೋಜನೆ ನೆನಗುದಿಗೆ ಬಿದ್ದಿದೆ. ಕಾನೂನು ತೊಡಕುಗಳನ್ನು ನಿವಾರಿಸಿ ಯೋಜನೆ ಪ್ರಾರಂಭಿಸಬೇಕಾಗಿದೆ. ಬಹಳ ವರ್ಷಗಳ ಹಿಂದೆ ಹೊನ್ನೇಕೊಡಿಗೆ ಗ್ರಾಪಂ ಗ್ರಾಮಗಳು ಅಭಿವೃದ್ಧಿ ಆಗಿರಲಿಲ್ಲ.ಈಗ ರಸ್ತೆ ಅಭಿವೃದ್ಧಿ ಆಗಿದೆ. ಸಂಪರ್ಕ ಸೇತುವೆ ನಿರ್ಮಾಣವಾದರೆ ಇನ್ನಷ್ಟು ಅಭಿವೃದ್ಧಿಯಾಗಲಿದೆ. ಮಾನವ- ಪ್ರಾಣಿ ಸಂಘರ್ಷ ಮುಂದುವರಿಯುತ್ತಿದೆ ಎಂದರು. ಅತಿಥಿಯಾಗಿದ್ದ ಪಿಸಿಎಆರ್.ಡಿ ಬ್ಯಾಂಕಿನ ನಿರ್ದೇಶಕ ದೇವಂತರಾಜ್ ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ವೀಣಾ, ಉಪಾಧ್ಯಕ್ಷೆ ಕೆ.ವಿ. ಚಾಂದನಿ, ಸದಸ್ಯರಾದ ಅಶೋಕ್, ಶೃತಿ,ಸರಸ್ವತಿ, ಕೆಡಿಪಿ ಸದಸ್ಯರಾದ ಮಾಳೂರು ದಿಣ್ಣೆ ರಮೇಶ್, ಕೆ.ವಿ.ಸಾಜು,ಅಂಜುಂ,ತಾಲೂಕು ಬಗರ್ ಹುಕಂ ಸಮಿತಿ ಅಧ್ಯಕ್ಷ ಇ.ಸಿ.ಜೋಯಿ ಇದ್ದರು. ಜಿಲ್ಲಾ ಪಂಚಾಯಿತಿ ಎಂಜಿನಿಯರ್ ಸಾಗರ್, ತಾಪಂ ನರೇಗಾ ಯೋಜನೆಯ ಸಹಾಯಕ ನಿರ್ದೇಶಕ ಮನೀಶ್, ಪಿಡಿಒಅನಿಲ್ ಕುಮಾರ್ ಇದ್ದರು.
ಇದೇ ಸಂದರ್ಭದಲ್ಲಿ 32 ಫಲಾನುಭವಿಗಳಿಗೆ ಸಂಧ್ಯಾ ಸುರಕ್ಷಾ ಪತ್ರ ನೀಡಲಾಯಿತು. ಪ್ರಕೃತಿ ಸ್ವಾಗತಿಸಿದರು. ರಾಜಪ್ಪ ಕಾರ್ಯಕ್ರಮ ನಿರೂಪಿಸಿದರು.