ಸಾರಾಂಶ
ಬಸವರಾಜ ನಂದಿಹಾಳ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಉತ್ತಮ ವೈದ್ಯ ಸೇವೆ ನೀಡಿದ್ದರಿಂದ ಕೇಂದ್ರ, ರಾಜ್ಯ ಸರ್ಕಾರಗಳ ಪ್ರಶಸ್ತಿಗೆ ಭಾಜನವಾಗಿರುವ ಬ.ಬಾಗೇವಾಡಿ ತಾಲೂಕು ಆಸ್ಪತ್ರೆಗೆ ತಜ್ಞವೈದ್ಯರು ಸೇರಿದಂತೆ ನಾನಾ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹೀಗಾಗಿ ಆರೋಗ್ಯ ತಪಾಸಣೆಗೆ ಬಂದ ರೋಗಿಗಳಿಗೆ ತಜ್ಞರ ವೈದ್ಯಕೀಯ ಚಿಕಿತ್ಸೆ ಸಿಗುವುದು ಅಪರೂಪವಾಗಿದೆ.2022ರಲ್ಲಿ ಕೇಂದ್ರದ ಕಾಯಕಲ್ಪ ಪ್ರಶಸ್ತಿ, ರಾಜ್ಯ ಸರ್ಕಾರದ 2023ನೇ ಸಾಲಿನ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿದೆ ಬ.ಬಾಗೇವಾಡಿ ಆಸ್ಪತ್ರೆ. ಆದರೆ, ಸಿಬ್ಬಂದಿ ಕೊರತೆ ಎಲ್ಲರನ್ನು ಕಾಡುತ್ತಿದೆ.
ಯಾವ ಹುದ್ದೆಗಳು ಖಾಲಿ ಇವೆ?:ತಾಲೂಕು ಆಸ್ಪತ್ರೆಯು ೧೦೦ ಹಾಸಿಗೆ ಸಾಮರ್ಥ್ಯ ಹೊಂದಿದೆ. ಆಡಳಿತ ವೈದ್ಯಾಧಿಕಾರಿ ಹುದ್ದೆ ಸೇರಿದಂತೆ ಏಳು ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ಸದ್ಯ ಆಸ್ಪತ್ರೆಯಲ್ಲಿ ಚಿಕ್ಕಮಕ್ಕಳ ತಜ್ಞರು, ಎಲುಬು ಕೀಲು ತಜ್ಞರು, ದಂತ ತಜ್ಞರು, ನೇತ್ರ ತಜ್ಞರು, ಅರಿವಳಿಕೆ ತಜ್ಞರು, ಕಿವಿ-ಮೂಗು-ಗಂಟಲು (ಇಎನ್‌ಟಿ) ತಜ್ಞರು ಕಾರ್ಯನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಶಸ್ತ್ರಚಿಕಿತ್ಸೆ ತಜ್ಞರು, ಫಿಜಿಶಿಯನ್ ವೈದ್ಯರು ವರ್ಗಾವಣೆಯಾಗಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ಫಿಜಿಶಿಯನ್ ವೈದ್ಯರು, ಶಸ್ತ್ರಚಿಕಿತ್ಸಕ ತಜ್ಞ ವೈದ್ಯರು, ಚರ್ಮರೋಗ ತಜ್ಞರು, ಪೆಥಾಲಿಜಿಸ್ಟ್, ಗೈನಕಾಲಜಿಸ್ಟ್ (ಸ್ತ್ರೀ ಮತ್ತು ಪ್ರಸೂತಿ ರೋಗ ತಜ್ಞರು), ರೇಡಿಯಾಲಜಿಸ್ಟ್, ಆಡಳಿತ ವೈದ್ಯಾಧಿಕಾರಿ ಹುದ್ದೆಗಳ ಭರ್ತಿ ಅಗತ್ಯವಿದೆ.
ಇದರ ಜೊತೆಗೆ ಆಸ್ಪತ್ರೆಗೆ ಮಂಜೂರಾದ 32 ಹಾಸ್ಪಿಟಲ್ ಅಟೆಂಡೆಂಟ್ ಗ್ರೇಡ್-೨ ಹುದ್ದೆಗಳಲ್ಲಿ 28 ಹುದ್ದೆಗಳು ಖಾಲಿ ಇವೆ. ಒಂದು ಟೈಪಿಸ್ಟ್, ಒಂದು ಶುಶ್ರೂಷಾಧಿಕಾರಿ ಗ್ರೇಡ್-೨, ಒಂದು ಶುಶ್ರೂಷಾಧಿಕಾರಿ, ಎರಡು ಕಿರಿಯ ಫಾರ್‍ಮಾಸಿಸ್ಟ್, ಒಂದು ಅಡುಗೆ ಸಹಾಯಕರು, ಆಸ್ಪತ್ರೆಯಲ್ಲಿ ಖಾಲಿ ಇರುವ ತಜ್ಞ ವೈದ್ಯರು ಸೇರಿದಂತೆ ಉಳಿದ ಎಲ್ಲ ಸಿಬ್ಬಂದಿ ಸರ್ಕಾರ ಒದಗಿಸಿದರೆ ಆಸ್ಪತ್ರೆಯಿಂದ ಸಾರ್ವಜನಿಕರಿಗೆ ಇನ್ನಷ್ಟು ಸೇವೆ ಸಿಗಬಹುದು ಎಂಬುವುದು ನಾಗರಿಕರ ಆಶಯ.ನಿತ್ಯ ಎಷ್ಟು ರೋಗಿಗಳು ಬರ್ತಾರೆ?:
ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ, ಸೌಲಭ್ಯ ಸದಾ ಸಿಗುತ್ತಿದೆ. ಹೀಗಾಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ, ವಿವಿಧ ತಾಲೂಕಿನ ಗ್ರಾಮಗಳಿಂದಲೂ ನಿತ್ಯ ನೂರಾರು ರೋಗಿಗಳು ಆರೋಗ್ಯ ತಪಾಸಣೆಗೆ ಬರುತ್ತಿದ್ದಾರೆ. ನಿತ್ಯ ಸುಮಾರು ೩೦೦ ರಿಂದ ೪೦೦ (ಒಪಿಡಿ) ಹೊರರೋಗಿಗಳು ಆಗಮಿಸುತ್ತಾರೆ. ಸಂತೆ ದಿನವಾದ ಸೋಮವಾರ ೫೦೦ ರಿಂದ ೬೦೦ ರವರೆಗೆ ರೋಗಿಗಳಿರುತ್ತಾರೆ. ಕಳೆದ ಜೂ.೨೪ರಂದು 731 ರೋಗಿಗಳು ತಪಾಸಣೆಗೆ ಒಳಗಾಗಿದ್ದಾರೆ. ಜೂ.27 ರಂದು ೫೦೧, ಜೂನ್ ೨೮ ರಂದು ೪೩೫ ರೋಗಿಗಳು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಒಂದು ತಿಂಗಳಲ್ಲಿ ಸರಾಸರಿ ೮೦ ರಿಂದ ೧೩೦ ಹೆರಿಗೆಗಳಾಗುತ್ತವೆ. ಸುಮಾರು ೮ ರಿಂದ ೧೦ ಸೀಸೆರಿಯನ್ ಆಗುತ್ತವೆ. ಆಸ್ಪತ್ರೆಗೆ ಸರ್ಕಾರ ಶೀಘ್ರವೇ ಕಾಯಂ ಆಗಿ ಪ್ರಸೂತಿ ತಜ್ಞರ ನೇಮಕ ಮಾಡಬೇಕಿದೆ. ಈಗ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಸ್ತ್ರೀರೋಗ ತಜ್ಞ ವೈದ್ಯರೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ. ಇವರಿಲ್ಲದ ವೇಳೆ ತರಬೇತಿ ಪಡೆದ ಶುಶ್ರೂಷಕಿಯರೇ ಹೆರಿಗೆ ಮಾಡಿಸಿಕೊಳ್ಳುತ್ತಾರೆ.ತಾಯಿ, ಮಗು ಆರೈಕೆ ಆಸ್ಪತ್ರೆಗೆ ಪ್ರಸ್ತಾವ:
ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೌಲಭ್ಯವಿದೆ. ಕೋವಿಡ್ ವೇಳೆ ಆಕ್ಸಿಜನ್ ಪ್ಲಾಂಟ್ ನಿರ್ಮಾಣವಾಗಿದೆ. ರಕ್ತ ಶೇಖರಣಾ ಕೇಂದ್ರ ಇದೆ. ತಾಯಿ ಮತ್ತು ಮಗುವಿನ ಆರೈಕೆ ಆಸ್ಪತ್ರೆ ಮಂಜೂರಾತಿಗೆ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಇದು ಮಂಜೂರಾತಿ ಸಿಕ್ಕರೆ ಜನರಿಗೆ ಬಹಳ ಉಪಯೋಗವಾಗುತ್ತದೆ. ಪ್ರಯೋಗಾಲಯ ಕಟ್ಟಡ ಸಿದ್ಧವಾಗಿದೆ. ಇದು ಇನ್ನೂ ಹಸ್ತಾಂತರವಾಗಿಲ್ಲ.----------
ನಾನು ಮೂರು-ನಾಲ್ಕು ದಿನಗಳಿಂದ ದಮ್ಮು-ತೆಕುವಿನಿಂದ ಆಸ್ಪತ್ರೆಗೆ ದಾಖಲಾಗಿದ್ದೇನೆ. ವ್ಯೆದ್ಯರು ಸರಿಯಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಬೆಳಗಿನ ಉಪಹಾರ, ಊಟ, ತತ್ತಿ, ಬಾಳೆಹಣ್ಣು ನೀಡುತ್ತಿದ್ದಾರೆ.- ಗುರುಪಾದಪ್ಪ ಅಂಗಡಿ, ಒಳರೋಗಿ, ನರಸಲಗಿ ಗ್ರಾಮ
ಆಸ್ಪತ್ರೆಯಲ್ಲಿ ಒಟ್ಟು ಏಳು ತಜ್ಞ ವೈದ್ಯರ ಹುದ್ದೆಗಳು ಖಾಲಿ ಇವೆ. ನಮ್ಮ ಆಸ್ಪತ್ರೆಯಲ್ಲಿ ವಿವಿಧ ಸೌಲಭ್ಯ ಇರುವುದರಿಂದ ಜನರು ಸಾಕಷ್ಟು ಸಂಖ್ಯೆಯಲ್ಲಿ ಚಿಕಿತ್ಸೆಗೆ ಬರುತ್ತಾರೆ. ನಮ್ಮ ಆಸ್ಪತ್ರೆ ಹತ್ತು ಐಸಿಯು ಬೆಡ್ ಹೊಂದಿದೆ. ಐಸಿಯು ಬೆಡ್‌ಗಳಿಗೆ ಮೂವರು ವೈದ್ಯರು, ತುರ್ತು ಚಿಕಿತ್ಸಾ ಘಟಕಕ್ಕೆ ಮೂವರು ವೈದ್ಯರು ತುರ್ತಾಗಿ ಅಗತ್ಯವಿದೆ. ಸರ್ಕಾರ ನಮ್ಮ ಆಸ್ಪತ್ರೆಯಲ್ಲಿ ಖಾಲಿ ಇರುವ ವೈದ್ಯ ಹುದ್ದೆ ಸೇರಿದಂತೆ ವಿವಿಧ ಹುದ್ದೆಗಳನ್ನು ನೇಮಕ ಮಾಡಿದರೆ ಸಾರ್ವಜನಿಕರಿಗೆ ಇನ್ನಷ್ಟು ಹೆಚ್ಚಿನ ಸೇವೆ ಒದಗಿಸಬಹುದು.
- ಡಾ.ಮನೋಹರ ಸಿಂಹಾಸನ, ಪ್ರಭಾರಿ ಆಡಳಿತ ವೈದ್ಯಾಧಿಕಾರಿಆಸ್ಪತ್ರೆಗೆ ಹೆಚ್ಚು ಜನರು ಚಿಕಿತ್ಸೆಗೆ ಬರುತ್ತಾರೆ. ಒಂದು ತಿಂಗಳಲ್ಲಿ ಸುಮಾರು ಒಂದು ಸಾವಿರ ಜನರು ಒಳರೋಗಿಗಳಾಗಿ ದಾಖಲಾಗುತ್ತಾರೆ. ನಿತ್ಯ ೪೦೦-೫೦೦ ಜನರು ಚಿಕಿತ್ಸೆಗೆಂದು ಬರುತ್ತಾರೆ. ಅಗತ್ಯ ಔಷಧ ದಾಸ್ತಾನಿದೆ. ಅಗತ್ಯ ತಜ್ಞ ವೈದ್ಯರು ಬಂದರೆ ಹೆಚ್ಚು ಸೇವೆ ಒದಗಿಸಲು ಅನುಕೂಲವಾಗುತ್ತದೆ.
-ಬಿ.ಆರ್.ಕುಲಕರ್ಣಿ, ಸಹಾಯಕ ಆಡಳಿತಾಧಿಕಾರಿ