House lock broken, Rs 2.80 lakh in coins stolen

ಕಲಬುರಗಿ: ಮನೆ ಬೀಗ ಮುರಿದು 2.80 ಲಕ್ಷ ಮೌಲ್ಯದ ನಗನಾಣ್ಯ ಕಳವು ಮಾಡಿರುವ ಘಟನೆ ಉದನೂರ ರಸ್ತೆಯ ಚಂದ್ರಕಾಂತ ಲೇಔಟ್‍ನಲ್ಲಿ ನಡೆದಿದೆ.

ವಿಠ್ಠಲ ಶಂಕರ ರಾವ್‌ ಮುಚ್ಚಟ್ಟಿ ಎಂಬುವರ ಮನೆ ಬೀಗ ಮುರಿದು ಕಳ್ಳರು 1.20 ಲಕ್ಷ ಮೌಲ್ಯದ 20 ಗ್ರಾಂ ಬಂಗಾರದ ಎರಡು ಸುತ್ತುಂಗುರ, 60 ಸಾವಿರ ಮೌಲ್ಯದ 10 ಗ್ರಾಂ ಬಂಗಾರದ ಚೈನ್, 1ಲಕ್ಷ ನಗದು ಹಣ ಸೇರಿ 2.80 ಲಕ್ಷ ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ.

ಮೂರ್ನಾಲ್ಕು ದಿನಗಳ ಹಿಂದೆ ಅತ್ತೆ-ಮಾವ ಕುಂಭಮೇಳಕ್ಕೆ ಹೋದ ಪ್ರಯುಕ್ತ ಮನೆಗೆ ಬೀಗ ಹಾಕಿಕೊಂಡು ಪತ್ನಿ ಮತ್ತು ಮಕ್ಕಳೊಂದಿಗೆ ಅಶೋಕ ನಗರದಲ್ಲಿರುವ ಮಾವನ ಮನೆಗೆ ಹೋಗಿ ವಾಪಸ್‌ ಆಗಿದ್ದರು. ಈ ವೇಳೆ ಕಳ್ಳರು ಮನೆ ಬೀಗ ಮುರಿದು ನಗನಾಣ್ಯ ದೋಚಿಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ. ಈ ಸಂಬಂಧ ಅಶೋಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.