ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲು ಶೇ. 5ರ ಅನುದಾನ ಸದ್ಬಳಿಕೆಯಾಗಲಿ: ದಾಸ್ ಸೂರ್ಯವಂಶಿ

| Published : Feb 19 2025, 12:51 AM IST

ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲು ಶೇ. 5ರ ಅನುದಾನ ಸದ್ಬಳಿಕೆಯಾಗಲಿ: ದಾಸ್ ಸೂರ್ಯವಂಶಿ
Share this Article
  • FB
  • TW
  • Linkdin
  • Email

ಸಾರಾಂಶ

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕೇಂದ್ರ ಮತ್ತು ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ದಾಸ್ ಸೂರ್ಯವಂಶಿ ಹೇಳಿದ್ದಾರೆ.

ಧಾರವಾಡ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿ ಇಲಾಖೆಯಲ್ಲಿ ಅನುಷ್ಠಾನಗೊಳಿಸುವ ಬಡತನ ನಿಮೂರ್ಲನಾ ಕಾರ್ಯಕ್ರಮಗಳಲ್ಲಿ ಶೇ. 5ರಷ್ಟು ಅನುದಾನವನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲುಗೊಳಿಸಿವೆ. ಇದರ ಸದ್ಬಳಕೆಯಾಗಲಿ ಎಂದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಭವನದಲ್ಲಿ ಕರ್ನಾಟಕ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ಕುರಿತು ವಿವಿಧ ಇಲಾಖೆಗಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಪ್ರಗತಿ ಪರಿಶೀಲನೆಯಲ್ಲಿ ಮಾತನಾಡಿದರು.ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ಕೇಂದ್ರ ಮತ್ತು ರಾಜ್ಯದಲ್ಲಿ ಜಾರಿಗೆ ಬಂದಾಗಿನಿಂದ ಅಂಗವಿಕಲರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಲ್ಲಿ ಶೇ. 4ರಷ್ಟು ಹುದ್ದೆಗಳನ್ನು ಮತ್ತು ಗ್ರೂಪ್ ಸಿ ಮತ್ತು ಗ್ರೂಪ್ ಡಿ ಹುದ್ದೆಗಳಲ್ಲಿ ಶೇ. 5ರಷ್ಟು ಹುದ್ದೆಗಳನ್ನು ಅಂಗವಿಕಲರಿಗೆ ಮೀಸಲಿರಿಸಲು ಅಧಿನಿಯಮದಲ್ಲಿ ಆದೇಶಿಸಲಾಗಿದೆ. ಇದನ್ನು ಎಲ್ಲ ಇಲಾಖೆಗಳು ಕಡ್ಡಾಯವಾಗಿ ಪಾಲಿಸಬೇಕು ಎಂದು ಆಯುಕ್ತರು ತಿಳಿಸಿದರು.

ರಾಜ್ಯದಲ್ಲಿ ಸುಮಾರು ಎಳು ಸಾವಿರ ಅಂಗವಿಕಲರು ಸರ್ಕಾರಿ ಸೇವೆ ಸಲ್ಲಿಸುತ್ತಿದ್ದಾರೆ. ರಾಜ್ಯದ ಎಲ್ಲ ಧಾರ್ಮಿಕ ಸ್ಥಳ ಹಾಗೂ ಪ್ರವಾಸಿ ತಾಣಗಳನ್ನು ಸುಧಾರಣಾ ಯಾತ್ರೆಯಡಿ ಅಂಗವಿಕಲ ಸ್ನೇಹಿ ಸ್ಥಳಗಳನ್ನಾಗಿ ರೂಪಿಸಲು ಪ್ರಯತ್ನಿಸಲಾಗುತ್ತಿದೆ. ಇಂತಹ ಸ್ಥಳಗಳಲ್ಲಿ ಹಾಗೂ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಅಂಗವಿಕಲರಿಗೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ತಪ್ಪದೇ ಕಲ್ಪಿಸಬೇಕೆಂದು ಅವರು ಹೇಳಿದರು.

ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ಅಂಗವಿಕಲರ ಅನುಕೂಲಕತೆಗಾಗಿ ವಿಶೇಷವಾಗಿ ಸಂಜ್ಞೆ ಭಾಷೆಯನ್ನು ಬಲ್ಲವರು ಇರಬೇಕಾಗುತ್ತದೆ. ಯಾರಾದರೂ ಅಂಗವಿಕಲರು ಮಾತು ಬಾರದೆ ಕಿವಿಯು ಕೇಳದೆ ಹೋದವರಿಗೆ ಆ ಭಾಷೆಯ ಮುಖಾಂತರ ವರದಿ ಪಡೆಯಬೇಕು ಎಂದು ಆಯುಕ್ತರು ಹೇಳಿದರು.

ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮಗಳ ಆಯುಕ್ತಾಲಯ ಅಂಗವಿಕಲರ ಕುರಿತು ದಾಖಲಾಗುವ ಪ್ರಕರಣಗಳನ್ನು ಕಾಲಮಿತಿಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಅಂಗವಿಕಲರಿಗೆ ಅಗತ್ಯ ಆರೈಕೆ, ಶೈಕ್ಷಣಿಕ, ಆರೋಗ್ಯ ಸೇವೆ, ಉದ್ಯೋಗ ಮತ್ತು ಆರ್ಥಿಕ ಸೌಲಭ್ಯಗಳು ಸಕಾಲಕ್ಕೆ ಸೀಗುವಂತೆ ಮಾಡಲು ಪ್ರಯತ್ನಿಸುತ್ತಿದೆ ಎಂದು ಆಯುಕ್ತ ದಾಸ್ ಸೂರ್ಯವಂಶಿ ಹೇಳಿದರು.

ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಜಗದೀಶ ಪ್ರಾಸ್ತಾವಿಕ ಮಾತನಾಡಿದರು. ಸಭೆಯಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಅಂಗವಿಕಲರ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು, ಅಂಗವಿಕಲರು ಇದ್ದರು.ಪಿಂಚಣಿ ವಿನೂತನ ಯೋಜನೆ

ರಾಜ್ಯ ಸರ್ಕಾರ ದೇಶದಲ್ಲಿಯೇ ಮೊದಲ ಬಾರಿ ಹೊಸ ಯೋಜನೆಯೊಂದನ್ನು ಅಂಗವಿಕಲರ ಪಾಲಕರಿಗೆ ಜಾರಿಗೊಳಿಸುತ್ತಿದೆ. ಅಂಗವಿಕಲರನ್ನು ಪಾಲನೆ, ಪೊಷಣೆ ಮಾಡುವ ತಾಯಿ, ತಂದೆ ಅಥವಾ ಪಾಲಕರಿಗೆ ಮಾಸಿಕ ಪಿಂಚಣಿ ನೀಡುವ ವಿನೂತನ ಯೋಜನೆಯನ್ನು ಸದ್ಯದಲ್ಲಿಯೇ ರಾಜ್ಯದಲ್ಲಿ ಅನುಷ್ಠಾನಗೊಳ್ಳಲಿದೆ ಎಂದು ದಾಸ್‌ ಸೂರ್ಯವಂಶಿ ಹೇಳಿದರು.