ರೈಲ್ವೆ ಇಲಾಖೆಯ ರೇಲ್ ಕೋಚ್ ಕಾರ್ಖಾನೆ, ಇಂಟಿಗ್ರಲ್ ಕೋಚ್ ಕಾರ್ಖಾನೆ, ಚೈನ್ ರೇಲ್ ವ್ಹೀಲ್ ಕಾರ್ಖಾನೆ ಮಾರ್ಡನ್ ಕೋಟ್ ಕಾರ್ಖಾನೆಗಳು ಇನ್‌ಕಾಮೆಕ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿವೆ.

ಹುಬ್ಬಳ್ಳಿ:

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ವತಿಯಿಂದ ಅಮರಗೋಳ ಎಪಿಎಂಸಿ ಆವರಣದಲ್ಲಿ ಏ. 25ರಿಂದ 29ರ ವರೆಗೆ ಕೈಗಾರಿಕೆ ವಸ್ತು ಪ್ರದರ್ಶನ ಮತ್ತು ಸಮಾವೇಶ ‘ಇನ್ ಕಾಮೆಕ್ಸ್-2026’ ಹಮ್ಮಿಕೊಳ್ಳಲಾಗಿದೆ ಎಂದು ಇನ್‌ಕಾಮೆಕ್ಸ್ ಸಮಿತಿ ಅಧ್ಯಕ್ಷ ಮಹಾದೇವ ಕರಮರಿ ತಿಳಿಸಿದರು.

ಕೆಸಿಸಿಐ ಸಂಸ್ಥೆಯ ಸಭಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1996ರಲ್ಲಿ ಮೊದಲ ಬಾರಿಗೆ ಇನ್‌ಕಾಮೆಕ್ಸ್ ಮಾಡಲಾಗಿತ್ತು. ಇದು 5ನೇ ಸಮಾವೇಶವಾಗಿದೆ. ಉತ್ತರ ಕರ್ನಾಟಕದಲ್ಲಿ ಕೈಗಾರಿಕೋದ್ಯಮಿಗಳ ಪ್ರೋತ್ಸಾಹಿಸುವ ಹಾಗೂ ವೇದಿಕೆ ಕಲ್ಪಿಸುವ ಉದ್ದೇಶದಿಂದ ಈ ವಸ್ತು ಪ್ರದರ್ಶನ ಆಯೋಜಿಸಲಾಗುತ್ತಿದೆ. ಇನ್‌ಕಾಮೆಕ್ಸ್‌ದಲ್ಲಿ ದೇಶ ವಿವಿಧ ಭಾಗದ ಎಚ್‌ಎಎಲ್, ಬಿಎಚ್‌ಇಎಲ್, ಬಿಇಎಂಎಲ್, ಎನ್‌ಪಿಸಿಎಲ್, ಎನ್‌ಪಿಸಿಐಎಲ್ ಹಾಗೂ ಗೋವಾ ಶಿಪ್ಯಾರ್ಡ್ ಸಂಸ್ಥೆ ಸೇರಿದಂತೆ 300ಕ್ಕೂ ಹೆಚ್ಚು ಕೈಗಾರಿಕೆಗಳು ತಮ್ಮ ಉತ್ಪನ್ನ ಪ್ರದರ್ಶಿಸಲಿವೆ ಎಂದು ಹೇಳಿದರು.

ತಾಂತ್ರಿಕ ಗೋಷ್ಠಿ-ಸಂವಾದ:

ರೈಲ್ವೆ ಇಲಾಖೆಯ ರೇಲ್ ಕೋಚ್ ಕಾರ್ಖಾನೆ, ಇಂಟಿಗ್ರಲ್ ಕೋಚ್ ಕಾರ್ಖಾನೆ, ಚೈನ್ ರೇಲ್ ವ್ಹೀಲ್ ಕಾರ್ಖಾನೆ ಮಾರ್ಡನ್ ಕೋಟ್ ಕಾರ್ಖಾನೆಗಳು ಇನ್‌ಕಾಮೆಕ್ಸ್‌ನಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿವೆ. ಸಮಾವೇಶದಲ್ಲಿ ಬ್ರ್ಯಾಂಡಿಂಗ್, ಡಿಜಿಟಲ್ ಮಾರ್ಕೆಟಿಂಗ್, ಎಂಎಸ್‌ಎಂಇ ವಲಯದಲ್ಲಿ ಕೃತಕ ಬುದ್ಧಿಮತ್ತೆ ಬಳಕೆ, ನವೋದ್ಯಮ, ಮಹಿಳಾ ಉದ್ಯಮಶೀಲತೆ, ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳ ಮೇಲೆ ತಾಂತ್ರಿಕ ಗೋಷ್ಠಿ-ಸಂವಾದ ಹಾಗೂ ಜ್ಞಾನ ಹಂಚಿಕೆ ಕಾರ್ಯಕ್ರಮಗಳಿದ್ದು, ತಜ್ಞರು ಪಾಲ್ಗೊಳ್ಳಲಿದ್ದಾರೆ. ಎಂಎಸ್‌ಎಂಇಗಳಿಗೆ ಉತ್ತೇಜನ, ಹೊಸ ವ್ಯವಹಾರ ಅವಕಾಶಗಳನ್ನು ಸೃಷ್ಟಿಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ವಿವರಿಸಿದರು. ಪ್ರದರ್ಶನಕ್ಕೆ ಶಾಲಾ- ಕಾಲೇಜ್ ಹಾಗೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಆಹ್ವಾನಿಸಲಾಗಿದೆ ಎಂದು ಹೇಳಿದರು.

ಏ.26ರಂದು ಬೆಳಗ್ಗೆ 11.30ಕ್ಕೆ ಉದಯೋನ್ಮುಖ ಉತ್ತರ ಕರ್ನಾಟಕ ಸಮ್ಮೇಳನ, ಏ.27ರಂದು ಬೆಳಗ್ಗೆ 11.30 ಕೃಷಿ ಸಮಾವೇಶ, ಏ. 28ರಂದು ಬೆಳಗ್ಗೆ 11.30ಕ್ಕೆ ಲಾಜಿಸ್ಟಿಕ್ ಸಮ್ಮಿಟ್ ಹಾಗೂ ಗ್ಲೋಬಲ್ ಟ್ರೇಡ್ ಕನೆಕ್ಟ್, ಏ. 29ರಂದು ಮಹಿಳಾ ಉದ್ಯಮಿದಾರರ ಸಮಾವೇಶ ನಡೆಯಲಿದ್ದು, ಕೇಂದ್ರ ಸಚಿವ ಶೋಭಾ ಕರಂದ್ಲಾಜೆ, ಡಿಜಿಎ-ಟಿ ಸಂಯುಕ್ತ ಮಹಾನಿರ್ದೇಶಕ ಡೋನಾ ಘೋಷ್, ಪ್ರತಿಮಾ ಧೋಂಡ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಸಿಸಿಐ ಅಧ್ಯಕ್ಷ ಜಿ.ಕೆ. ಆದಪ್ಪಗೌಡರ, ಉಪಾಧ್ಯಕ್ಷರಾದ ಪ್ರವೀಣ ಅಂಗಡಿ, ಸಿದ್ದೇಶ್ವರ ಕಮ್ಮಾರ, ವೀರಣ್ಣ ಕಲ್ಲೂರ, ಗೌರವ ಕಾರ್ಯದರ್ಶಿ ಉದಯ ರೇವಣಕರ, ಜೊತೆ ಗೌರವ ಕಾರ್ಯದರ್ಶಿ ಪ್ರಕಾಶ ಶೃಂಗೇರಿ, ಜಯಪ್ರಕಾಶ ಟೆಂಗಿನಕಾಯಿ, ವಸಂತ ಲಡ್ಡದ, ಶಶಿಧರ ಶೆಟ್ಟರ ಸೇರಿದಂತೆ ಅನೇಕರಿದ್ದರು.

25ರ ಸಂಜೆ ಉದ್ಘಾಟನೆ:

ಜ. 25ರಂದು ಸಂಜೆ 4ಕ್ಕೆ ಸಿಎಂ ಸಿದ್ದರಾಮಯ್ಯ ಸಮಾರಂಭಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಕೇಂದ್ರ ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ವಿಮಾನಯಾನ ಸಚಿವ ಕೆ. ರಾಮಮೋಹನ ನಾಯ್ಡು, ಸಭಾಪತಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಎಚ್‌ಕೆ. ಪಾಟೀಲ, ಎಂ.ಬಿ. ಪಾಟೀಲ, ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ. ಟಾಟಾ ಪ್ರಾಜೆಕ್ಟ್ ಎಂ.ಡಿ. ಪೈ ಮುಖ್ಯ ಭಾಷಣ ಮಾಡಲಿದ್ದಾರೆ. ಸಂಸದ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಶಾಸಕರಾದ ಅರವಿಂದ ಬೆಲ್ಲದ, ಎನ್.ಎಚ್. ಕೋನರಡ್ಡಿ, ಪ್ರಸಾದ ಅಬ್ಬಯ್ಯ, ಮಹೇಶ ಟೆಂಗಿನಕಾಯಿ, ವಿವಿ ಸದಸ್ಯರಾದ ಎಸ್.ವಿ. ಸಂಕನೂರ, ಎಫ್‌.ಎಚ್‌. ಜಕ್ಕಪ್ಪನವರ, ಪ್ರದೀಪ ಶೆಟ್ಟರ್‌, ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಮಾಜಿ ಸಚಿವ ಮುರಗೇಶ ನಿರಾಣಿ ಭಾಗವಹಿಸಲಿದ್ದಾರೆ ಎಂದು ಹೇಳಿದರು.