ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಾರು ಡ್ರೈವರ್ ಹಾಗೂ ಸಣ್ಣ ರೈತನ ಮಗಳು ಅತ್ಯದ್ಭುತ ಸಾಧನೆ ಮಾಡಿ ಇತರರಿಗೆ ಪ್ರೇರಣೆಯಾಗಿದೆ.
ಶಿವಾನಂದ ಗೊಂಬಿ
ಹುಬ್ಬಳ್ಳಿ:ಕಾರು ಡ್ರೈವರ್ ಮಗಳು ಕನ್ನಡ ಮಾಧ್ಯಮದಲ್ಲಿ ಓದಿ ಶೇ. 98.08ರಷ್ಟು ಅಂಕ ಪಡೆಯುವ ಮೂಲಕ ಸೈ ಎನಿಸಿಕೊಂಡಿದ್ದಾಳೆ.
ಹುಬ್ಬಳ್ಳಿ ತಾಲೂಕಿನ ಶಿರಗುಪ್ಪಿ ಗ್ರಾಮದ ಪಂಡಿತ ನೆಹರು ಪ್ರೌಢಶಾಲೆಯ ವಿದ್ಯಾರ್ಥಿನಿ ಶಕುಂತಲಾ ಹಸಬಿ ಈ ಸಾಧನೆ ಮಾಡಿದ ವಿದ್ಯಾರ್ಥಿನಿ.ಈಕೆ ಕನ್ನಡ 125, ಸಮಾಜ ವಿಜ್ಞಾನ 100, ಹಿಂದಿ 100, ಇಂಗ್ಲಿಷ್ 96, ವಿಜ್ಞಾನ 97, ಗಣಿತ 95 ಅಂಕ ಪಡೆಯುವ ಮೂಲಕ ಒಟ್ಟು 613 ಅಂಕ ಪಡೆದಿದ್ದಾಳೆ.
ಈಕೆಯ ತಂದೆ ಚಂದ್ರಶೇಖರ ಹಸಬಿ ಖಾಸಗಿ ಟ್ಯಾಕ್ಸಿ ಡ್ರೈವರ್ ಆಗಿದ್ದು, ಟೂರ್ಸ್ ಆ್ಯಂಡ್ ಟ್ರಾವೆಲ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಚಂದ್ರಶೇಖರ ಪಿಯುಸಿ, ಪತ್ನಿ ಬಿಎ ಓದಿದ್ದಾರೆ. ತಾವು ಸರಿಯಾಗಿ ಓದದ ಕಾರಣ ಸ್ಥಿರ ನೌಕರಿ ಸಿಕ್ಕಿಲ್ಲ. ಆದರೆ, ಮಕ್ಕಳಿಗಾದರೂ ಉತ್ತಮ ಶಿಕ್ಷಣ ಕೊಡಿಸೋಣವೆಂದು ಹಗಲಿರುಳು ಶ್ರಮಿಸುತ್ತಿದ್ದಾರೆ. ಅದರ ಫಲವಾಗಿ ಶಕುಂತಲಾ 613 ಅಂಕ ಪಡೆದಿದ್ದು, ಬಿಎ ಎಲ್‌ಎಲ್‌ಬಿ ಓದಿ ಹೈಕೋರ್ಟ್ ವಕೀಲೆಯಾಗಬೇಕೆಂಬ ಆಸೆ ಇಟ್ಟುಕೊಂಡಿದ್ದಾಳೆ.ಸಹೋದರನೂ ರ್‍ಯಾಂಕ್ ಹೋಲ್ಡರ್:
ಶಕುಂತಲಾಳ ಹಿರಿಯ ಸಹೋದರ ಸಹ ಎಸ್‌ಎಸ್‌ಎಲ್‌ಸಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ತಾಲೂಕಿಗೆ ಫಸ್ಟ್ ಬಂದಿದ್ದ. ಇನ್ನು ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಆಯ್ಕೆ ಮಾಡಿಕೊಂಡಿದ್ದ ಈತ ಅಲ್ಲೂ ಶೇ. 95ರಷ್ಟು ಅಂಕ ಪಡೆಯುವ ಮೂಲಕ ಕಾಲೇಜಿಗೆ 3ನೇ ಸ್ಥಾನ ಪಡೆದಿದ್ದ. ಅತಿ ಸಣ್ಣ ರೈತನ ಮಗಳಿಗೆ 94 ಅಂಕ:ಒಂದೇ ಎಕರೆ ಜಮೀನಿನಲ್ಲಿ ವಿವಿಧ ಬೆಳೆ ಬೆಳೆದು ಕೂಲಿ ಕೆಲಸಕ್ಕೆ ಹೋಗುವ ಅತಿ ಸಣ್ಣ ರೈತನ ಮಗಳು ಎಸ್‌ಎಸ್‌ಎಲ್‌ಸಿಯಲ್ಲಿ ಶೇ. 94.40 ಅಂಕ ಪಡೆದು ಹುಬ್ಬೇರಿಸುವಂತೆ ಮಾಡಿದ್ದಾಳೆ.
ಕುಂದಗೋಳ ತಾಲೂಕಿನ ಗುರುವಿನಹಳ್ಳಿ ಗ್ರಾಮದ ಪೂರ್ಣಿಮಾ ವಿರೂಪಾಕ್ಷಯ್ಯ ಹುಣಸೋಗಿಮಠ ಈ ಸಾಧನೆ ಮಾಡಿದ ವಿದ್ಯಾರ್ಥಿನಿ. ಈಕೆ ಮಳಲಿ ಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದು, ಕನ್ನಡ 118, ಇಂಗ್ಲಿಷ್ 94, ಹಿಂದಿ 99, ಗಣಿತ 92, ಸಮಾಜ ವಿಜ್ಞಾನ 96, ವಿಜ್ಞಾನ 91 ಸೇರಿ 590 ಅಂಕ ಪಡೆದಿದ್ದಾರೆ. ವಿರೂಪಾಕ್ಷಯ್ಯ ಅವರಿಗೆ ಇಬ್ಬರು ಮಕ್ಕಳಿದ್ದು, ಪೂರ್ಣಿಮಾ ಹಿರಿಯ ಮಗಳು. ಅವರು 6ನೇ ತರಗತಿ ಓದಿದರೆ, ಪತ್ನಿ ಎಸ್‌ಎಸ್ಎಲ್‌ಸಿ ಮುಗಿಸಿದ್ದಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಪಣ ತೊಟ್ಟಿದ್ದಾರೆ. ಇದೀಗ ಪೂರ್ಣಿಮಾ ಬಿಕಾಂ ಮಾಡಿ ಸಿಎ ಮಾಡಬೇಕೆಂಬ ಆಸೆ ಹೊಂದಿದ್ದಾಳೆ.