ವಾಹನದಟ್ಟಣೆ ತಗ್ಗಿಸಲು ಹುಡಾ ಹೊಸ ಪ್ಲ್ಯಾನ್‌

| Published : Aug 30 2024, 01:02 AM IST

ಸಾರಾಂಶ

ಮಹಾನಗರದಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಗಳನ್ನು ಇಡುತ್ತಿದ್ದು, ಆರಂಭಿಕ ಹಂತವಾಗಿ ಎರಡು ಪ್ರಮುಖ ರಸ್ತೆಗಳ ಅಗಲೀಕರಣ ಮಾಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ.

ಹುಬ್ಬಳ್ಳಿ:

ಮಹಾನಗರದಲ್ಲಿನ ವಾಹನ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ಹೆಜ್ಜೆಗಳನ್ನು ಇಡುತ್ತಿದ್ದು, ಆರಂಭಿಕ ಹಂತವಾಗಿ ಎರಡು ಪ್ರಮುಖ ರಸ್ತೆಗಳ ಅಗಲೀಕರಣ ಮಾಡುವುದು ಸೂಕ್ತವೆಂದು ಅಭಿಪ್ರಾಯಪಟ್ಟಿದೆ. ಈ ನಿಟ್ಟಿನಲ್ಲಿ ಲೋಕೋಪಯೋಗಿ ಇಲಾಖೆಗೂ ಪತ್ರ ಬರೆದು ರಸ್ತೆ ಅಗಲೀಕರಣ ಮಾಡುವಂತೆ ಮನವಿ ಮಾಡಿದೆ.

ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಪತ್ರ ಬರೆದಿರುವ ಹುಡಾ ಅಧ್ಯಕ್ಷ ಶಾಕೀರ ಸನದಿ, ನವನಗರದಿಂದ ಗಾಮನಗಟ್ಟಿ ಮೂಲಕ ಹುಬ್ಬಳ್ಳಿ ಬೈಪಾಸ್‌ಗೆ ರಸ್ತೆಗೆ ಸಂಪರ್ಕ ಕಲ್ಪಿಸುವ ರ್ಸತೆಯನ್ನು ಅಗಲೀಕರಣ ಮಾಡುವಂತೆ ಕೋರಿದ್ದಾರೆ.

ಇದರಿಂದ ವಿಮಾನ ನಿಲ್ದಾಣಕ್ಕೂ ಸಲೀಸಾಗಿ ಹೋಗಬಹುದಾಗಿದೆ. ಇದು ಪ್ರಮುಖ ಆಂತರಿಕ ರಸ್ತೆಯಾಗಿ ಸಾರ್ವಜನಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ನವನಗರ ಸೇರಿದಂತೆ ಸುತ್ತಮುತ್ತಲಿನ ಜನರು ಬೈಪಾಸ್‌, ವಿಮಾನ ನಿಲ್ದಾಣಕ್ಕೆ ಹೋಗಲು ಬಹಳಷ್ಟು ಸಹಕಾರಿಯಾಗಲಿದೆ. ಇದರಿಂದ ನಗರದೊಳಗೆ ಪ್ರವೇಶಿಸುವ ಪ್ರಮೇಯವೂ ಬರುವುದಿಲ್ಲ. ನಗರದಲ್ಲಿ ವಾಹನ ದಟ್ಟಣೆ ಕಡಿಮೆಯಾಗುತ್ತದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಇನ್ನೊಂದೆಡೆ ಭೈರಿದೇವರಕೊಪ್ಪದಿಂದ ಅಮರಗೋಳ ಎಪಿಎಂಸಿ, ಶಿವಳ್ಳಿ ಮೂಲಕ ಹೆಬ್ಬಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಅಗಲೀಕರಣ ಮಾಡಬೇಕು. ಇದು ಎಪಿಎಂಸಿಗೆ ರೈತರು ಆಹಾರೋತ್ಪನ್ನ ಸಾಗಿಸಲು ಅನುಕೂಲವಾಗುತ್ತದೆ. ಇದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಮೇಲಾಗಿ ಹುಬ್ಬಳ್ಳಿ ನಗರದ ಮೇಲಿನ ವಾಹನ ದಟ್ಟನೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲಿದೆ ಎಂದು ಅರಿಕೆ ಮಾಡಿದ್ದಾರೆ.

ಈ ಎರಡೂ ರಸ್ತೆಗಳು ಅಗಲೀಕರಣವಾದರೆ ಎಪಿಎಂಸಿಗೆ ಬರುವ ಲಾರಿ, ಟ್ಯ್ರಾಕ್ಟರ್‌ಗಳೆಲ್ಲ ನೇರವಾಗಿ ಈ ರಸ್ತೆ ಮಾರ್ಗದಲ್ಲಿ ಬರಬಹುದಾಗಿದೆ. ಇದರಿಂದ ನಗರದೊಳಗೆ ವಾಹನ ದಟ್ಟಣೆ ಸಹಜವಾಗಿ ಕಡಿಮೆಯಾಗುತ್ತದೆ. ಆದಕಾರಣ ಈ ರಸ್ತೆ ಮಾಡುವುದು ಸೂಕ್ತ. ಈ ರಸ್ತೆ ಅಗಲೀಕರಣಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಪ್ರಯತ್ನ ಕಾರ್ಯಗತವಾದರೆ ಹುಬ್ಬಳ್ಳಿ ನಗರ, ಅದರಲ್ಲೂ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಆಗುತ್ತಿರುವ ವಾಹನ ದಟ್ಟನೆ ಕಡಿಮೆಯಾಗಿ ನಾಗರಿಕರಿಗೆ ಸುರಳಿತ ಸಂಚಾರಕ್ಕೆ ಅನುಕೂಲವಾಗಲಿದೆ.