ಐದು ದಿನದ ಗಣೇಶೋತ್ಸವಕ್ಕೆ ಮಾತ್ರ ಅನುಮತಿ

| Published : Aug 30 2024, 01:02 AM IST

ಸಾರಾಂಶ

ಸರ್ವೋಚ್ಛ ನ್ಯಾಯಾಲಯ ಹಾಗೂ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮೊದಲಾದ ಹಬ್ಬಗಳ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಅದರಂತೆ ಈ ಬಾರಿ ಐದು ದಿನಗಳ ಗಣೇಶೋತ್ಸವ ಆಚರಣೆಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಡಿವೈಎಸ್ ಪಿ ಎಸ್.ಶಿವಕುಮಾರ್ ಹೇಳಿದರು.

ಚಿಕ್ಕಬಳ್ಳಾಪುರ: ಸರ್ವೋಚ್ಛ ನ್ಯಾಯಾಲಯ ಹಾಗೂ ಸರ್ಕಾರವು ಕಾಲಕಾಲಕ್ಕೆ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಗಳ ಪ್ರಕಾರವೇ ಗಣೇಶೋತ್ಸವ ಮೊದಲಾದ ಹಬ್ಬಗಳ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು. ಅದರಂತೆ ಈ ಬಾರಿ ಐದು ದಿನಗಳ ಗಣೇಶೋತ್ಸವ ಆಚರಣೆಗೆ ಮಾತ್ರ ಅನುಮತಿ ನೀಡಲಾಗುವುದು ಎಂದು ಡಿವೈಎಸ್ ಪಿ ಎಸ್.ಶಿವಕುಮಾರ್ ಹೇಳಿದರು.

ಗಣೇಶೋತ್ಸವ ಹಿನ್ನೆಲೆಯಲ್ಲಿ ನಗರದ ಪೊಲೀಸ್ ಸಮುದಾಯ ಭವನದ ಸಭಾಂಗಣದಲ್ಲಿ ಗುರುವಾರ ನಡೆದ ಗಣೇಶೋತ್ಸವ ಮಂಡಳಿಗಳ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಸೆಪ್ಟೆಂಬರ್‌ 7 ರಿಂದ 14 ರವರೆಗೆ ಗಣೇಶೋತ್ಸವ ನಡೆಯಲಿದೆ. ಈ ವೇಳೆ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಶಾಂತಿಯುತವಾಗಿ ಉತ್ಸವ ಆಚರಣೆಗೆ ಗಣೇಶೋತ್ಸವ ಮಂಡಳಿಗಳು ಸಹಕರಿಸಬೇಕು ಎಂದರು.ಪಿಒಪಿ ಗಣಪತಿ ಬೇಡ:

ನಗರ ಪೊಲೀಸ್‌ ಠಾಣಾ ಪಿಎಸ್ಐ ಎಚ್.ನಂಜುಂಡಯ್ಯ ಪರಿಸರ ಮಾಲಿನ್ಯ ತಡೆಗಟ್ಟಲು ಪಿಒಪಿ ಮೂರ್ತಿಗಳ ಪ್ರತಿಷ್ಠಾಪನೆಗೆ ಅವಕಾಶವಿರುವುದಿಲ್ಲ. ಆದ್ದರಿಂದ ಪಿಒಪಿ ಮೂರ್ತಿಯನ್ನು ಪ್ರತಿಷ್ಠಾಪಿಸಬಾರದು ಎಂದು ಮನವಿ ಮಾಡಿದರು.

ಈ ಬಗ್ಗೆ ಪಿಒಪಿ ಗಣೇಶ ಮೂರ್ತಿ ತಯಾರಕರಿಗೆ ಮುಂಚಿತವಾಗಿಯೇ ಮಾಹಿತಿ ನೀಡಬೇಕಿರುವುದರಿಂದ ಈ ಸಭೆ ನಡೆಸಲಾಗಿದೆ ಎಂದ ಅವರು, ಗಣೇಶೋತ್ಸವ ಮಹಾಮಂಡಳಿಗಳಿಗೆ ಅನುಕೂಲ ಕಲ್ಪಿಸಲು ಬೆಸ್ಕಾಂ, ನಗರ ಸಭೆ, ತಾಲೂಕು ಪಂಚಾಯತಿ, ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಾಲಯ ಮತ್ತು ಸರ್ಕಾರ ಹೊರಡಿಸುವ ಆದೇಶ ಮತ್ತು ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯವಾಗಿದೆ. ಹೀಗಾಗಿ ಅವುಗಳ ಪಾಲನೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇದು ಗಣೇಶೋತ್ಸವಕ್ಕೆ ಮಾತ್ರ ಸೀಮಿತವಾದ ನಿರ್ಬಂಧಗಳಲ್ಲ. ಗಣೇಶ ವಿಸರ್ಜನೆ ಸಂದರ್ಭದಲ್ಲಿಯೂ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದರು.

ಗಣೇಶ ವಿಸರ್ಜನೆ ಸಮಯದಲ್ಲಿ ಆಯೋಜಕರು ತಮ್ಮ ತಂಡದ ವ್ಯಕ್ತಿಗಳಿಗೆ ಡ್ರೆಸ್ ಕೋಡ್ ನೀಡಿದಲ್ಲಿ ಬೇರೆಯವರು ಬಂದು ಗಲಾಟೆ ಮತ್ತಿತರ ಅಹಿತಕರ ಘಟನೆಗಳು ನಡೆಯುವುದನ್ನು ತಡೆಯಬಹುದು. ಮದ್ಯಪಾನ ಸೇವಿಸಿಬಾರದು. ಅಚ್ಚುಕಟ್ಟಾಗಿ ಆಚರಿಸಲು ಅನುಕೂಲವಾಗುವಂತೆ ಸಲಹೆ- ಸೂಚನೆಗಳನ್ನು ನೀಡಿದರು.

ಬೆಸ್ಕಾಂ, ನಗರಸಬೆ, ತಾಲೂಕು ಪಂಚಾಯತಿ ಅಧಿಕಾರಿಗಳು ಸಹ ಗಣೇಶೋತ್ಸವ ಆಚರಿಸಲು ಅನುಕೂಲವಾಗುವಂತೆ ಸಲಹೆ- ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಪಿಎಸ್ಐ ಗಳಾದ ಗುಣವತಿ, ಹರೀಶ್ ಕುಮಾರ್, ನಗರಸಭೆ ವ್ಯವಸ್ಥಾಪಕ ರಮೇಶ್, ತಾಪಂ ಅಧಿಕಾರಿ ರಫೀಕ್, ಬೆಸ್ಕಾಂ ಇಂಜನಿಯರ್ ಗಳಾದ ಮುರಳೀಧರ್. ರವಿಕುಮಾರ್, ಸ್ವಯಂ ಸೇವಾಸಂಸ್ಥೆಯ ಮಂಜುಳ, ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಮತ್ತಿತರರು ಇದ್ದರು.

ಗಣೇಶೋತ್ಸವ ಆಚರಣೆಗೆ ನಿಬಂಧನೆಗಳು

ಉತ್ಸವದ ವೇಳೆ ಡಿಜೆಗೆ ಅವಕಾಶವಿಲ್ಲ. ಆದರೆ ನಿಗದಿತ ಪ್ರಮಾಣದ ಶಬ್ಧ ಹೊರಸೂಸುವ ಧ್ವನಿವರ್ಧಕ ಬಳಕೆಗೆ ಸದ್ಯಕ್ಕೆ ಅವಕಾಶವಿರುತ್ತದೆ. ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಧ್ವನಿವರ್ಧಕ ಬಳಕೆಗೆ ನಿಯಮಾವಳಿ ಪ್ರಕಾರ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಸರ್ಕಲ್ ಇನ್ಸ್ ಪೆಕ್ಟರ್ ಕಚೇರಿಯಲ್ಲಿ ಸೆಪ್ಟೆಂಬರ್‌ 1 ರಿಂದ ಅನುಮತಿ ನೀಡಲಾಗುವುದು. ಏಕಗವಾಕ್ಷಿ ವ್ಯವಸ್ಥೆ ಮೂಲಕ ಅರ್ಜಿ ಸಲ್ಲಿಸಿದ 24 ಗಂಟೆಗಳಲ್ಲಿ ಅನುಮತಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.ಪೊಲೀಸ್‌, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ,ತಾಲೂಕು ಪಂಚಾಯತಿ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳು ಒಂದೇ ಕಡೆ ಲಭ್ಯವಿದ್ದು, ಅಗತ್ಯ ಅನುಮತಿಯನ್ನು ನೀಡಲಿದ್ದಾರೆ ಎಂದು ಹೇಳಿದ ಡಿವೈಎಸ್ ಪಿ, ಡಿಜೆ, ಧ್ವನಿವರ್ಧಕಗಳ ಬಳಕೆ, ಪಿಒಪಿ ಮೂರ್ತಿ ಬಳಕೆ ಸೇರಿ ವಿವಿಧ ವಿಷಯಗಳ ಕುರಿತು ಸರ್ಕಾರ ಮತ್ತು ಸುಪ್ರಿಂಕೋರ್ಟ್‌ ಹಲವಾರು ಆದೇಶಗಳನ್ನು ಮತ್ತು ಮಾರ್ಗಸೂಚಿಗಳನ್ನು ಹೊರಡಿಸಿವೆ. ನ್ಯಾಯಾಲಯ ಹಾಗೂ ಸರಕಾರದ ಮಾರ್ಗಸೂಚಿ ಪ್ರಕಾರ ಉತ್ಸವ ಆಚರಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು. ಗಣೇಶ ಮೂರ್ತಿಗಳನ್ನು ಇಡುವಾಗ ಸಾರ್ವಜನಿಕರಿಗೆ ತೊಂದರೆಯಾಗಬಾರದು, ಗಣೇಶ ಮೂರ್ತಿಗಳನ್ನು ಇಡುವ ಸ್ಥಳದ ಮಾಲೀಕರಿಂದ ಆಯೋಜಕರು ಪೂರ್ವಾನುಮತಿ ಪಡೆದಿರಬೇಕು, ಗಣೇಶ ಮೂರ್ತಿಗಳನ್ನು ಇಡುವ ಸ್ಥಳಗಳಲ್ಲಿ ಸಿಸಿಕ್ಯಾಮೆರಾ ಅಳವಡಿಸಬೇಕು, ಗಣೇಶ ಮೂರ್ತಿಗಳನ್ನು ಇಡುವ ಸ್ಥಳಗಳಲ್ಲಿ ಆಯೋಜಕರೇ ಕಾವಲಿರಬೇಕು ಹಾಗೂ ಯಾವುದೇ ಅಹಿತಕರ ಘಟನೆ ನಡೆದರೆ ಆಯೋಜಕರೇ ಹೊಣೆಗಾರರಾಗುತ್ತಾರೆ. ಗಣೇಶೋತ್ಸವದ ಲೆಕ್ಕಪತ್ರಗಳನ್ನು ಪಾರದರ್ಶಕವಾಗಿರುವಂತೆ ಟೀಂ ಲೀಡರ್ ನೋಡಿಕೊಳ್ಳಬೇಕು. ಗಣೇಶೋತ್ಸವಕ್ಕೆ ಯಾರಿಂದಲೂ ಬಲವಂತವಾಗಿ ಚಂದಾವಸೂಲಿ ಮಾಡಬಾರದು, ಹಾಗೇನಾದರೂ ಮಾಡಿದ್ದು ಕಂಡು ಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.